ಅಕ್ರಮ ಉಸುಕು ದಂಧೆಗೆ ಕ್ರಮ ಕೈಗೊಳ್ಳಲು ಗ್ರಾಪಂ ಸಭೆಯಲ್ಲಿ ಒತ್ತಾಯ

0
8
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನಲ್ಲಿ ಎಲ್ಲೂ ಉಸುಕು ತೆಗೆಯಲು ಅನುಮತಿ ನೀಡಲಾಗುತ್ತಿಲ್ಲ. ಆದರೆ ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಅಕ್ರಮ ಉಸುಕು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಈ ಕುರಿತು ಪ್ರಶ್ನಿಸೋಣ ಎಂದರೆ ಅಧಿಕಾರಿಗಳೂ ಸಭೆಗೆ ಬಂದಿಲ್ಲ. ಈ ಅಕ್ರಮ ದಂಧೆಯಿಂದಾಗಿ ಹೊಲವಳ್ಳಿ ಬ್ರಿಜ್ ಹಾಳಾಗುತ್ತಿದೆ. ಈ ದಂಧೆಗೆ ಯಾರು ಅನುಮತಿ ನೀಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಶೀಘ್ರವಾಗಿ ಇದನ್ನು ತಡೆಯುವಂತೆ ಸಭೆಯಲ್ಲಿ ಠರಾವಿಸಬೇಕು ಎಂದು ಗ್ರಾಮಸ್ಥ ಅಣ್ಣಪ್ಪ ಒತ್ತಾಯಿಸಿದರು.
ಅವರು ಮಂಗಳವಾರ ತಾಲೂಕಿನ ಬಡಾಳದ ಕಲವೆಯ ಮಹಿಶಾಸುರ ಮರ್ದಿನಿ ದೇವಾಲಯದ ಸಭಾಭವನದಲ್ಲಿ ಸೊಪ್ಪಿನಹೊಸಳ್ಳಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಇಲ್ಲಿನ ಪಂಚಾಯತ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ತೀವ್ರ ಇದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಇನ್ನು ವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚಿಸೋಣವೆಂದರೆ, ಹೆಸ್ಕಾಂ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಪಾಲ್ಗೊಂಡಿಲ್ಲ. ರಸ್ತೆಗಳಲ್ಲಿ ಲೈನ್‍ಗಳ ಮೇಲೆ ಮರದ ರೆಂಬಗಳು ಇದ್ದು, ಮಳೆಗಾಲವಾಗಿದ್ದರಿಂದ ಅವು ಮುರಿದು ಬೀಳುವಂತಹ ಸ್ಥಿತಿ ಇದೆ. ಈ ರೀತಿ ಅವಾಂತರ ನಡೆದು ವಾರಗಟ್ಟಲೇ ವಿದ್ಯುತ್ ವ್ಯತ್ಯಯ ಉಂಟಾಗುವ ಮೊದಲೇ ಅವುಗಳನ್ನು ಕಟಾವ ಮಾಡುವ ಕಾರ್ಯವಾಗಬೇಕು. ಅಲ್ಲದೇ ಪ್ರತಿ ದಿನ ಬೆಳಗ್ಗೆ 9,15 ಗಂಟೆಗೆ ಕಲವೆಗೆ ಕೆಎಸ್‍ಆರ್‍ಟಿಸಿ ಬಸ್ಸು ಬರುತ್ತದೆ. ಇದರಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಈ ಬಸ್ಸಿನ ಸೌಕರ್ಯ ಪಡೆಯಲಾಗುತ್ತಿಲ್ಲ. ಹೀಗಾಗಿ ಬಸ್ಸಿನ ಸಮಯವನ್ನು ಬದಲಾಯಿಸಿ ಅರ್ಧಗಂಟೆ ಮುಂಚಿತವಾಗಿ ಬಸ್ಸನ್ನು ಈ ಊರಿಗೆ ಬಿಡುವಂತಾಗಬೇಕಿದೆ ಎಂದು ಸಾರ್ವಜನಿಕರು ಸಭೆಯಲ್ಲಿ ತಿಳಿಸಿದರು.
ಪಿಡಬ್ಲುಡಿ ಇಂಜಿನಿಯರ್ ರಾಜು ಶಾನಭಾಗ ಮಾತನಾಡಿ, ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಆಯಾ ಇಲಾಖೆಗಳಿಗೆ ಅರ್ಜಿ ಮೂಲಕ ಸಾರ್ವಜನಿಕರು ಒತ್ತಾಯಿಸಿದರೆ, ಆಯಾ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಅಲ್ಲದೇ ನಾನೂ ಈ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸುವ ಕೆಲಸ ಮಾಡುತ್ತೇನೆ ಎಂದರು.

ಪಿಡಬ್ಲುಡಿ ಇಂಜಿನಿಯರ್ ರಾಜು ಶಾನಭಾಗ ಮಾತನಾಡಿ, 2018-19ರಲ್ಲಿ ಆ ರಸ್ತೆಯ ಮರು ಡಾಂಬರೀಕರಣದ ಪ್ರಸ್ಥಾವನೆಯನ್ನು ಈಗಾಗಲೇ ಇಡಲಾಗಿದೆ. ಆ ಭಾಗದಲ್ಲಿ ಕೆಲವೆಡೆ ತಕರಾರುಗಳು ಇದ್ದು. ಅವುಗಳನ್ನು ಬಗೆಹರಿಸಿ ಆದಷ್ಟು ಬೇಗ ರಸ್ತೆ ಮಾಡಿಸಲಾಗುವುದು ಎಂದರು.
ಸಹಾಯಕ ತೋಟಗಾರಿಕಾ ಅಧಿಕಾರಿ ಪ್ರವೀಣ ನಾಯ್ಕ ಅವರು, ತೋಟಗಾರಿಕಾ ಇಲಾಖೆಯ ವತಿಯಿಂದ ರೈತರಿಗೆ ಸಿಗುವ ಹಲವು ಯೋಜನೆ ಹಾಗೂ ಸೌಲಭ್ಯಗಳ ಕುರಿತು ವಿವರವಾಗಿ ತಿಳಿಹೇಳಿದರು. ಸಂತೆಗುಳಿ ಭಾಗದ ಸಿಆರ್‍ಪಿ ಶಿವರಾಮ ಹೆಗಡೆ ಈ ಭಾಗದ ಶಾಲೆಗಳ ಸ್ಥಿತಿಗತಿಗಳ ಕುರಿತು ಸಮಾಲೋಚನೆ ನಡೆಸಿದರು. ಆರೋಗ್ಯ ಇಲಾಖೆಯ ಸಿಬ್ಬಂಧಿ ಸಭೆಯಲ್ಲಿ ಪಾಲ್ಗೊಂಡು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕುರಿತಾದ ದೂರಗಳನ್ನು ಆಲಿಸಿ ಅವುಗಳಿಗೆ ಶೀಘ್ರವಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೇಲಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಗ್ರಾಪಂ ಸದಸ್ಯರಾದ ಯಂಕು ಕೃಷ್ಣ ಮರಾಠಿ, ಅಬ್ದುಲ್ ಖಾದರ್, ಪಿಡಿಒ ಶ್ರೀಧರ್ ಹೆಗಡೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

loading...