ಅಕ್ರಮ ಮದ್ಯ ಮಾರಾಟಕಕ್ಕೆ ಅಬಕಾರಿ ಇಲಾಖೆ ಸಹಕಾರವೇ ಕಾರಣ: ಗಜಾನನ ಪೈ ಆರೋಪ

0
14
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ್ಯಾದಂತ ಅಂಗಡಿ ಹಾಗೂ ಮನೆಗಳಲ್ಲಿ ಅಕ್ರಮ ಸರಾಯಿ ಮಾರಾಟವಾಗುತ್ತಿದೆ. ಅಬಕಾರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಕಳ್ಳ ಧಂಧೆಕೋರರ ಜೊತೆ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂದು ಜಿಪಂ ಸದಸ್ಯ ಗಜಾನನ ಪೈ ಆರೋಪಿಸಿದರು.
ಅವರು ಸೋಮವಾರ ಪಟ್ಟಣದ ತಾಲೂಕ ಪಂಚಾಯತ ಸಭಭಾವನದಲ್ಲಿ ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ದಂಧೆಗೆ ಅಬಕಾರಿ ಇಲಾಖೆಯ ಸಹಕಾರವೇ ಕಾರಣ. ಜನರು ದಂಧೆಕೋರರ ವಿರುದ್ಧ ದೂರು ಅಥವಾ ಸುಳಿವು ನೀಡಿದರೆ, ಅಬಕಾರಿ ಅಧಿಕಾರಿಗಳು ದಾಳಿ ಮಾಡುವ ಮೊದಲು ದಂಧೆಕೋರರಿಗೆ ಮಾಹಿತಿ ನೀಡಿ, ತಪ್ಪಿಸಿಕೊಳ್ಳಲು ಸಹಕಾರ ನೀಡುತ್ತಾರೆ. ಅಲ್ಲದೆ ಸುಳಿವು ನೀಡಿದವರ ಹೆಸರನ್ನು ಅವರಿಗೆ ತಿಳಿಸುತ್ತಾರೆ. ಈ ಅಧಿಕಾರಿಗಳು ದಂಧೆಕೋರರಿಂದ ಸೆಟಿಂಗ್‌ ಮಾಡಿಕೊಂಡಿದ್ದಾರೆಂದು ಆರೋಪಿಸಿದರು. ಇದಕ್ಕೆ ಸಾತ್‌ ನೀಡಿ ದಿವಗಿ ಗ್ರಾಪಂ ಸದಸ್ಯ ಹೇಮಂತಕುಮಾರ ಗಾಂವ್ಕರ್‌ ಹಾಗೂ ಕತಗಾಲದ ವಿನಾಯಕ ನಾಯ್ಕ ಮಾತನಾಡಿ, ನಮ್ಮ ಗ್ರಾಮದಲ್ಲಿ ನಾಲ್ಕೈದು ಗುಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಕುರಿತು ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಇನ್ನುವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಆರೋಪಿಸಿದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು ಅಬಕಾರಿ ಅಧಿಕಾರಿ ಮುರಳೀಧರ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿ ಸಭೆಯಲ್ಲಿ ಜನರಿಂದ ಹೇಳಿಸಿಕೊಂಡು ನಿಮಗೆ ರೂಢಿಯಾಗಿದ್ದರಿಂದ ನಿರ್ಲಕ್ಷೃ ವಹಿಸುತ್ತಿದ್ದೀರಿ. ಪೊಲೀಸರ ಸಹಕಾರ ಪಡೆದು ಪ್ರತಿ ತಿಂಗಳು ಒಂದುಬಾರಿಯಾದರೂ ಕಳ್ಳ ಸರಾಯಿ ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆಯಲ್ಲಿ ಮುಂದಾಗಿ ದಾಳಿ ನಡೆಸಿ ವರದಿ ನೀಡಿ ಎಂದು ಶಾಸಕರು ತಾಕೀತು ಮಾಡಿದರು.
ತಾ ಪಂ ಸದಸ್ಯೆ ಪಾರ್ವತಿ ಗೌಡ ಮಾತನಾಡಿ, ತಾಲೂಕಿನ ಹಾರೋಡಿ ಶಾಲೆಯಲ್ಲಿ 40 ಮಕ್ಕಳಿದ್ದು ಇಬ್ಬರು ಶಿಕ್ಷಕರಿದ್ದಾರೆ. ಮುಖ್ಯಾಧ್ಯಾಪಕರು ಪದೇ ಪದೇ ಮೀಟಿಂಗ್‌, ತರಬೇತಿ, ಕಛೇರಿ ಕೆಲಸಗಳಿಗೆ ತೆರಳುವುದರಿಂದ ಶಾಲೆಗಳಲ್ಲಿ ಪಾಠಕ್ಕೆ ಹಿನ್ನಡೆಯಾಗುತ್ತಿದೆ ಎಂದು ಆರೋಪಿಸಿದರು. ಬಂಗಣೆ ಶಾಲೆ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗುತ್ತಿಲ್ಲ ಎಂದು ಜಿ.ಪಂ ಸದಸ್ಯ ಗಜಾನನ ಪೈ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರು. ಸಿಆರ್‌ಪಿಗಳು ಶಾಲೆಗಳಿಗೆ ಹೋಗಿ ಮಾಹಿತಿ ಪಡೆದುಕೊಳ್ಳಬೇಕು. ಯಾವ ಕಾರಣಕ್ಕೂ ಶಾಲೆ ಬಿಟ್ಟು ಶಿಕ್ಷಕರು ಮಾಹಿತಿ ನೀಡಲು ಶಾಲೆ ಬಿಟ್ಟು ಬರಬಾರದು ಎಂದು ಅವರು ಸಲಹೆ ನೀಡಿದರು. ಕಲಭಾಗ ಗ್ರಾಪಂ ಅಧ್ಯಕ್ಷ ವಿರೂಪಾಕ್ಷ ನಾಯ್ಕ ಮಾತನಾಡಿ, ತಾಲೂಕು ಆಸ್ಪತ್ರೆಯಲ್ಲಿ ಡಾ ಪಾಂಡುರಂಗ ದೇವಾಡಿಗ ಅವರು ವೈದ್ಯಕೀಯ ಪ್ರಮಾಣ ಪತ್ರ ನೀಡಲು ಲಂಚ ಪಡೆಯುತ್ತಾರೆ. ಇಂಥ ವೈದ್ಯರು ಬಡ ಜನರಿಂದ ಸೂಲಿಗೆ ಮಾಡುತ್ತಾರೆಂದು ಗಂಭೀರವಾಗಿ ಆರೋಪಿಸಿದರು. ಈ ಬಗೆಗೆ ನನಗೂ ದೂರುಗಳು ಬಂದಿವೆ. ದೇವಾಡಿಗ ಅವರಿಗೆ ನೋಟಿಸ್‌ ಕಳುಹಿಸಿ ಎಂದು ಟಿಎಚ್‌ಒ ಆಜ್ಞಾ ನಾಯಕ ಅವರಿಗೆ ಸೂಚಿಸಿದರು. ಇಂಥ ದೂರುಗಳು ಬಾರದ ರೀತಿಯಲ್ಲಿ ಕ್ರಮ ಕೈಗೊಳ್ಳಿ. ಜನರ ಸಮಸ್ಯೆ ಸ್ಪಂದಿಸುವ ಕಾರ್ಯಮಾಡಿ ಎಂದು ಡಾ ಮಹೇಶ ಶೆಟ್ಟಿ ಅವರಿಗೆ ಶಾಸಕರು ಸಲಹೆ ನೀಡಿದರು.
ಹೆಸ್ಕಾಂ ಇಲಾಖೆಯ ನಿರ್ಲಕ್ಷತೆಯ ಬಗ್ಗೆ ಜನಪ್ರತಿನಿಧಿಗಳಿಂದ ವ್ಯಕ್ತವಾದ ಹಲವು ದೂರುಗಳನ್ನು ಆಲಿಸಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಶಾಸಕರು, ಮುರಿದ ಕಂಬಗಳನ್ನು ಬದಲಾಯಿಸುವ ಜತೆಗೆ ಜೋತುಬಿದ್ದ ವಿದ್ಯುತ್‌ ತಂತಿಗಳನ್ನು ಬದಲಾಯಿಸಲು ಮತ್ತು ಕೆಟ್ಟುಹೋದ ಟಿಸಿ ದುರಸ್ತಿ ಪಡಿಸಲು ಅಥವಾ ಬದಲಾಯಿಸಬೇಕು. ಈ ಎಲ್ಲ ಕಾರ್ಯ ನಿರ್ಧಿಷ್ಟ ಕಾಲಾಮಿತಿಯೊಳಗೆ ನಡೆಯಬೇಕೆಂದು ಆಯಾ ವಿಭಾಗೀಯ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಜುಲೈ ಅಂತ್ಯದೊಳಗೆ ಮಳೆ ಆರ್ಭಟ ಜಾಸ್ತಿಯಾಗುವ ಸಂಭವವಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ರಜೆ ಪಡೆಯುವಂತಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಆಸಕ್ತಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಚ್ಚರಿಸಿದರು. ಶಿಕ್ಷಕರ ಕೊರತೆಯಿದ್ದ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರಾಗಲಿ ಅಥವಾ ಅತಿಥಿ ಶಿಕ್ಷಕರನ್ನಾಗಲಿ ನೇಮಿಸಿಕೊಡುವಂತೆ ಜನ ಬೇಡಿಕೆ ಇಟ್ಟಿದ್ದಾರೆ. ಈ ಬಗೆಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ ಬಿ ಮುಲ್ಲಾ ಅವರಿಗೆ ಸೂಚಿಸಿದರು. ಹಿಂದುಳಿದ ವರ್ಗಗಳ ಹಾಸ್ಟೇಲ್‌ನಲ್ಲಿ ಬಂಗಣೆಯ ಇಬ್ಬರು ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯದಿರುವುದರಿಂದ ಹೆಚ್ಚುವರಿಯಾಗಿ ಇಬ್ಬರನ್ನು ನೇಮಿಸಿಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು. ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಮೃತಪಟ್ಟವರಿಗೆ ನೀಡುವ ಪರಿಹಾರದ ಚೆಕ್‌ನ್ನು, ಅಡಿಕೆ ಮರದಿಂದ ಬಿದ್ದು ಸಾವನ್ನಪ್ಪಿದ ಸುಗ್ಗಿ ಗೌಡ ಅವರ ಪತ್ನಿಗೆ ವಿತರಿಸಲಾಯಿತು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ವಿಜಯಾ ಪಟಗಾರ, ಉಪಾಧ್ಯಕ್ಷೆ ಗೀತಾ ಮುಕ್ರಿ, ತಹಶೀಲ್ದಾರ ಮೇಘರಾಜ ನಾಯ್ಕ, ಇಒ ಮಹೇಶ ಕುರಿಯವರ್‌ ಉಪಸ್ಥಿತರಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

loading...