ಅಜಿತ ನಾಯಕ ಹತ್ಯೆ, ಶಂಕಿತ ಆರೋಪಿಯ ಬಂಧನ

0
12
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರದ ಹಿರಿಯ ವಕೀಲ, ದಾಂಡೇಲಿ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ದ ಅಜಿತ ನಾಯಕರವರ ಬರ್ಬರ ಕೊಲೆಗೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ ಮಿಂಚಿನ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಇದರ ಫಲಶೃತಿ ಎಂಬಂತೆ ಸೋಮವಾರ ಸಂಜೆ ಯಲ್ಲಾಪುರ ಪಟ್ಟಣದ ಬಳಿ ಕೊಲೆ ಮಾಡಿರಬಹುದೆನ್ನಲಾದ ಶಂಕಿತ ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.
ಅಜಿತ ನಾಯಕರವರ ಕೊಲೆಯ ಹಿಂದೆ ಸ್ಥಳೀಯ ಮೌವಳಂಗಿಯ ಜಾಗದ ಪ್ರಕರಣವೊಂದು ಪ್ರಮುಖ ಅಂಶವಾಗಿ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಕೊಲೆಯ ಜಾಡನ್ನು ಬೆನ್ನತ್ತಿದ್ದ ಪೊಲೀಸ್‌ ಇಲಾಖೆ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ವಿನಾಯಕ ಪಾಟೀಲ ಅವರ ಮಾರ್ಗದರ್ಶನದಲ್ಲಿ ಆರೋಪಿಗಳ ಬಂಧನಕ್ಕೆ ವಿವಿಧ ತಂಡಗಳಾಗಿ ಬಲೆ ಬೀಸಿದೆ.
ಈ ನಡುವೆ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾದ, ಮೌವಳಂಗಿ ಜಾಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿಯ ನಿವಾಸಿ ದೀಪಕ್‌ ಯಾನೆ ಪಾಂಡುರಂಗ ಕಾಂಬಳೆ ಈತನನ್ನು ಯಲ್ಲಾಪುರ ಪಟ್ಟಣದಲ್ಲಿ ಬಂಧಿಸಿ, ಹೆಚ್ಚಿನ ತನಿಖೆಗೆ ದಾಂಡೇಲಿಗೆ ಕರೆತರಲಾಗಿದೆ. ಕೊಲೆಯತ್ನದ ಆರೋಪಿಯೆಂದೆ ಚರ್ಚೆಯಲ್ಲಿರುವ ದೀಪಕ್‌ ಯಾನೆ ಪಾಂಡುರಂಗ ಕಾಂಬಳೆ ಈತನನ್ನು ಪೊಲೀಸರು ತೀವ್ರ ತನಿಖೆಗೊಳಪಡಿಸಿದ್ದು, ಕೊಲೆಯ ಹಿಂದಿರುವ ಉದ್ದೇಶ, ಕೊಲೆಯ ಹಿಂದಿರುವ ಜಾಡನ್ನು ತಿಳಿಯುವ ಉದ್ದೇಶದಿಂದ ಪೊಲೀಸ್‌ ತನಿಖೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಹೊರಬೀಳುತ್ತಿದೆ. ಮೌವಳಂಗಿಯಲ್ಲಿ ಇಕೋ ಪಾರ್ಕ್‌ ಆದಾಗಿನಿಂದ ಆ ಪ್ರದೇಶದ ಸುತ್ತಮುತ್ತಲ ಜಾಗದ ಮೌಲ್ಯವೂ ಹೆಚ್ಚಾಗಿದೆ. ಅಲ್ಲಿ ಕಾಳಿ ನದಿಯ ಪಕ್ಕದಲ್ಲೆ ಇದ್ದ ಜಾಗದಲ್ಲಿ ಕಾಳಿ ನದಿಯಲ್ಲಿ ಜಟ್ಟಿ ಹಾಕುವುದರ ಮೂಲಕ ಪ್ರವಾಸೋದ್ಯಮ ಚಟುವಟಿಕಯನ್ನು ನಡೆಸುವ ಎಲ್ಲ ಕಾರ್ಯತಂತ್ರಗಳು ಎರಡು ಕಡೆಯಿಂದ ನಡೆದಿತ್ತಾದರೂ, ಇತ್ತ ಅಜಿತ ನಾಯಕರವರ ಕಡೆಯವರಿಂದ ಜಟ್ಟಿ ಹಾಕಿಸುವ ಎಲ್ಲ ಪ್ರಯತ್ನಗಳು ಮುಂದುವರಿದಿತ್ತು ಎನ್ನಲಾಗಿದೆ. ಅದರ ಮುಂಚೆಯೆ ಈ ಜಾಗವನ್ನು ಗೋವಾ ಮೂಲದವರೊಬ್ಬರಿಗೆ ಮಾರಾಟ ಮಾಡುವುದು ಇಲ್ಲವೇ ಪ್ರವಾಸೋದ್ಯಮ ಚಟುವಟಿಕೆ ನಡೆಸುವ ನಿರ್ಧಾರವನ್ನು ದೀಪಕ್‌ ಯಾನೆ ಪಾಂಡುರಂಗ ಕಾಂಬಳೆ ತನ್ನ ಬೆಂಬಲಿಗರೊಂದಿಗೆ ಹೊಂದಿದ್ದ ಎಂಬ ಮಾಹಿತಿ ಹೊರ ಬೀಳುತ್ತಿದೆ.
ಒಟ್ಟಿನಲ್ಲಿ ಒಂದು ಕಾಲದಲ್ಲಿ ಬೆಂಗಳೂರುನಂತಹ ಮಹಾನಗರಗಳಿಗೆ ಸೀಮಿತವಾಗಿದ್ದ ಭೂಮಾಫೀಯ ಶಾಂತಿಯ ನಗರ ದಾಂಡೇಲಿಗೆ ಅಂಟಿಕೊಂಡಿರುವುದು ಕೊಲೆಗೆ ಕಾರಣವೆಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಬೆಳೆಯುತ್ತಿರುವ ಪ್ರವಾಸೋದ್ಯಮ ಒಂದೆಡೆಯಾದರೇ, ದಾಂಡೇಲಿ ಸುತ್ತಮುತ್ತಲಿರುವ ಗ್ರಾಮೀಣ ಪ್ರದೇಶಗಳ ಕೃಷಿ ಹಾಗೂ ಇನ್ನಿತರ ಜಮೀನುಗಳನ್ನು ಉಳ್ಳವರು ಖರೀದಿಸಿ ಹೋಂ ಸ್ಟೇ ಮೊದಲಾದ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲು ಹವಣಿಸುತ್ತಿರುವುದು ಸಾಮಾನ್ಯವಾಗಿದೆ. ಬಡವರ ಕೃಷಿ ಜಮೀನನ್ನು ಕೊಂಡು ಅಲ್ಲಿ ಹೋಂ ಸ್ಟೇ ಗಳಂತಹ ಪ್ರವಾಸಿ ಚಟುವಟಿಕೆಗಳನ್ನು ನಡೆಸಿ ಕೋಟ್ಯಾಂತರ ರೂ ಆದಾಯ ಬರುತ್ತಿರುವುದರಿಂದ ಉಳ್ಳವರ ಚಿತ್ತ ಹಳ್ಳಿಗರ ಕೃಷಿ ಭೂಮಿಯತ್ತ ಬಿದ್ದಿರುವುದು ಸುಳ್ಳಲ್ಲ. ಒಳ್ಳೆಯ ದೃಷ್ಟಿಕೋಣದಿಂದ ಬೆಳೆಯಬೇಕಾದ ಪ್ರವಾಸದೋದ್ಯಮ ಸುಲಭದಲ್ಲಿ ಹಣ ಮಾಡುವ ದಂಧೆಗಿಳಿದಿರುವುದರ ಬಗ್ಗೆ ಚರ್ಚೆ ಸಧ್ಯಕ್ಕೆ ನಗರದಲ್ಲಿ ಹರಿದಾಡುತ್ತಿದೆ. ಇನ್ನೊಂದು ಮೂಲಗಳ ಪ್ರಕಾರ ದಾಂಡೇಲಿ ಸುತ್ತಮುತ್ತಲಿನ ಜಾಗವನ್ನು ಅಲ್ಲಿಯ ರೈತರಿಗೆ ಕ್ಷಣಿಕ ಸುಖದ ಆಸರೆಯನ್ನು ನೀಡಿ, ಅತೀ ಕಡಿಮೆ ಬೆಲೆಗೆ ಕೊಂಡುಕೊಳ್ಳುವ ಪ್ರವೃತ್ತಿ ಸ್ಥಳೀಯ ಪ್ರವಾಸೋದ್ಯಮಕ್ಕೆ ವಿಷಕಾರಿಯಾಗುವ ಅಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಮುಸುಕಿನ ಒಳಗೆ ಒಳ ಪ್ರವಾಹವಾಗಿ ಹರಿಯುತ್ತಿದ್ದಂತಹ ಪ್ರವಾಸೋದ್ಯಮ ಮಾಫೀಯ ಅಜಿತ ನಾಯಕರವರ ಕೊಲೆ ಪ್ರಕರಣದಿಂದಾಗಿ ಹೊರ ಪ್ರಪಂಚಕ್ಕೆ ಅನಾವರಣಗೊಂಡು ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಭವಿಷ್ಯ ನುಡಿದಿರುವ ಬುನಾದಿಯಾಗಬಹುದೇ? ಎಂಬ ಮಾತು ನಗರದ ಜಗಲಿ ಕಟ್ಟೆಯಲ್ಲಿ ಚರ್ಚೆಯಲ್ಲಿದೆ.

loading...