ಅಧಿಕಾರಿಗಳ ಹೆಸರೇಳಿ ಹಣ ವಸೂಲಿ ಸಭೆಯಲ್ಲಿ ಗಂಭೀರ ಆಕ್ಷೇಪ

0
6
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರಸಭೆಯಿಂದ ಕೊಡ ಮಾಡುವ ವಸತಿ ಯೋಜನೆ ಸೇರಿದಂತೆ ಹಲವು ಕೆಲಸಗಳಿಗೆ ಸಂಬಂಧಿಸಿ ನಗರಸಭಾ ಸದಸ್ಯರ ಹಾಗೂ ಅಧಿಕಾರಿಗಳ ಹೆಸರು ಹೇಳಿ ಮದ್ಯವರ್ತಿಗಳು ಹಾಗೂ ಕೆಲ ನಗರಸಭಾ ಸದಸ್ಯರಿಂದಲೇ ಹಣ ವಸೂಲಿಯಾಗುತ್ತಿದೆ ಎಂದು ಆಡಳಿತ ಪಕ್ಷದವರೂ ಸೇರಿ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾಮಾನ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸಭೆಯ ಆರಂಭದಲ್ಲಿ ಪ್ರತಿಪಕ್ಷ ನಾಯಕ ರಿಯಾಜ ಶೇಖ ನಗರಸಭೆಯಿಂದ ಕೊಡ ಮಾಡುವ ಗ್ಯಾಸ್‌ ವಿತರಣೆ ಕಳೆದ ಎರಡು ವರ್ಷಗಳಿಂದ ಹಂಚಿಕೆಯಾಗದೇ ಬಿಳಂಬವಾಗುತ್ತಿದೆ. ಇದು ಯಾರ ನಿರ್ಲಕ್ಷ ಎಂದು ಪ್ರಶ್ನಿಸಿ ತಕ್ಷಣ ಅಡುಗೆ ಅನಿಲ ವಿತರಿಸುವಂತೆ ಒತ್ತಾಯಿಸಿದರು. ಇದೇ ವಿಷಯ ಮುಂದುವರೆಸಿ ಮಾತನಾಡಿದ ಕೀರ್ತಿ ಗಾಂವಕರ ಪೌರಾಯುಕ್ತರು ಯಾದಿ ಸಿದ್ದವಾಗಿಲ್ಲ ಎಂದು ಈಗ ಹೇಳೋದು ಸರಿಯಲ್ಲ. ಇಲ್ಲಯವರೆಗೂ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಈ ಯೋಜನೆಯಲ್ಲಿ ಹಾಗೂ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವ ದೂರು ಕೇಳಿ ಬಂದಿದೆ. ಈ ಬಗ್ಗೆ ನನ್ನ ಹತ್ತಿರ ದಾಖಲೆಯೂ ಇದೆ. 40 ಜನ ಫಲಾನುಭವಿಗಳ ಆಯ್ಕೆಯಾಗಿದ್ದು ಇವರಿಂದ 40 ರಿಂದ 70 ಸಾವಿರ ರೂ.ಗಳ ವರೆಗೆ ಹಣ ವಸೂಲಿ ಮಾಡಿದ್ದಾರೆಂಭ ದೂರಿದೆ. ಇದರಲ್ಲಿ ನಗರಸಭೆ ಸಿಬ್ಬಂದಿಗಳು ಹಾಗೂ ಕೆಲ ಸದಸ್ಯರ ಹೆಸರು ಕೇಳಿಬರುತ್ತಿದೆ. ಜೊತೆಗೆ ಒಂದೇ ಮನೆಗೆ ಎರಡು ಜನರ ಹೆಸರಲ್ಲಿ ಹಣ ನೀಡಲಾಗಿದೆ ಈ ಬಗ್ಗೆ ತನಿಖೆಯಾಗಬೆಕೆಂದರು.
ರವಿ ಸುತಾರ ಮಾತನಾಡಿ ಮೊದಲೇ ಕಟ್ಟಿದ ಮನೆಗೆ ಎರಡು ಬಾರಿ ವಸತಿ ಯೋಜನೆಯ ಸಾಲ ನೀಡಲಾಗಿದೆ ಎಂಬ ಆರೋಪ ಮಾಡಿದಾಗ ಪೌರಾಯುಕ್ತರು ಅದನ್ನು ಜಿಲ್ಲಾಧಿಕಾರಿಗಳ ಅನುಮೋದನೆಯಂತೇ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು. ಐದು ವರ್ಷದ ಲೀಸ್‌ ಪ್ಲಾಟ್‌ಗಳನ್ನು ಅಕ್ರಮವಾಗಿ ನೊಂದಣಿ ಮಾಡಿ ಸ್ವಂತ ಹೆಸರಿಗೆ ಮಾಡಿಕೊಳ್ಳಲಾಗುತ್ತಿದೆ ಎಂದು ರಿಯಾಜ ಶೇಖ ಆಕ್ಷೇಪಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ನಂದೀಶ ಮುಂಗರವಾಡಿ ನಮಗೂ ಅವಕಾಶ ಕೊಡಿ ಎಂದಾಗ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆಯವರು 5 ವರ್ಷದ ಲೀಸ್‌ ಪ್ಲಾಟ್‌ನ್ನು ನೊಂದಣಿ ಮಾಡುತ್ತಿರುವ ವಿಚಾರ ನನಗೂ ಗೊತ್ತಿದೆ. ಇದರ ಬಗ್ಗೆ ಬಾಯಿ ಬಿಟ್ಟರೆ ಕೆಲ ಸದಸ್ಯರ ಹೆಸರೂ ಸಹ ಬಯಲಾಗಬಹುದು ಎಂದಾಗ ಸಭೆಯಲ್ಲಿ ಎಲ್ಲರೂ ಸತ್ಯ ಬಯಲು ಮಾಡಿ ಎಂದು ಒತ್ತಾಯಿಸಿದರು. ಸದಸ್ಯ ಮುನ್ನಾ ವಹಾಬ್‌ರವರು ನಗರಸಭಾ ಸಿಬ್ಬಂದಿಗಳ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ಮಂಜೂರಿ ನೀಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹಮ್ದ್‌ಗೌಸ ಪಣಿಬಂದ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಪಾತಿಮಾ ಬೇಪಾರಿ, ಪೌರಾಯುಕ್ತ ಆರ್‌.ವಿ. ಜತ್ತಣ್ಣ ಉಪಸ್ಥಿತರಿದ್ದರು.

loading...