ಅಪ್ರಯೋಜಕ ರೆಂಬೆ-ಕೊಂಬೆ ಕತ್ತರಿಸಿ ಗುಣಮಟ್ಟ ಇಳುವರಿ ಪಡೆಯಿರಿ: ಡಾ. ದಿಡ್ಡಿಮನಿ

0
9
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಮಾವು ಮರಗಳ ಅಪ್ರಯೋಜಕ ರೆಂಬೆ ಕೊಂಬೆಗಳನ್ನು ಕತ್ತರಿಸಿ ಗಾಳಿ, ಬೆಳಕು ಆಡುವಂತೆ ಮಾಡುವುದರಿಂದ ಮುಂಬರುವ ಋತುಮಾನದಲ್ಲಿ ಉತ್ತಮ ಫಲಗಳ ಜೊತೆ ಗುಣಮಟ್ಟದ ಇಳುವರಿ ಪಡೆಯಬಹುದಾಗಿದೆ ಎಂದು ಕಲಬುರಗಿ ವಿಭಾಗ ತೋಟಗಾರಿಕೆ ಜಂಟಿ ನಿರ್ದೇಶಕರಾದ ಡಾ. ಶ್ರೀಶೈಲ ದಿಡ್ಡಿಮನಿ ಅವರು ಹೇಳಿದರು.
ತೋಟಗಾರಿಕೆ ಅಭಿಯಾನದ ನಿಮಿತ್ತ ತೋಟಗಾರಿಕೆ ಬೆಳೆಗಾರರಿಗೆ ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ “ಮಾವಿನ ಬೆಳೆಯಲ್ಲಿ ಸವರುವಿಕೆ (ಚಾಟ್ನಿ) ಮತ್ತು ವಯಸ್ಸಾದ ಗಿಡಗಳ ಪುನಃಶ್ಚೇತನ” ಕುರಿತು ಜಿಲ್ಲೆಯ ಇಂದರಗಿ ಗ್ರಾಮದ ರೈತ ಪಂಪಣ್ಣ ಕುಂಬಾರವರ ತೋಟದಲ್ಲಿ ಗುರುವಾರದಂದು ಆಯೋಜಿಸಲಾದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾವಿನ ಗಿಡಗಳ ಉತ್ಪಾದನೆ ಹೆಚ್ಚಿಸಲು ಪ್ರತಿ ವರ್ಷ ಅಥವಾ 2 ವರ್ಷಗಳಿಗೊಮ್ಮೆ ಸವರುವಿಕೆ ಕೈಗೊಳ್ಳಬೇಕು. ಫಸಲಿನ ಕಟಾವಿನ ನಂತರ ಒಣಗಿದ, ರೋಗಗ್ರಸ್ತ ಹಾಗೂ ಅಪ್ರಯೋಜಕ ರೆಂಬೆ ಕೊಂಬೆಗಳನ್ನು ಕತ್ತರಿಸಿ ಗಾಳಿ, ಬೆಳಕು ಆಡುವಂತೆ ಆಕಾರ ಕೊಡಬೇಕು.
ಇದರಂದಾಗಿ ಬರುವ ಋತುಮಾನದಲ್ಲಿ ಹೆಚ್ಚಿನ ಹೂ ಕಚ್ಚಿ ಗುಣಮಟ್ಟದ ಇಳುವರಿ ಪಡೆಯಬಹುದು. ಪ್ರತಿ ವರ್ಷವೂ ಕಟಾವಿನ ನಂತರ ಜೂನ್‌-ಜುಲೈ ತಿಂಗಳಿನಿಂದಲೇ ಮಾವಿನಲ್ಲಿ ಮುಂದಿನ ಸೀಜನ್‌ಗಾಗಿ ಅಣಿ ಮಾಡಿಕೊಳ್ಳಬೇಕು. ವರ್ಷ-ವರ್ಷವೂ ಇಳುವರಿ ಹೆಚ್ಚಿಸಿ ಗುಣಮಟ್ಟದ ಹಣ್ಣುಗಳನ್ನು ಪಡೆದಾಗ ಮಾತ್ರ ಆದಾಯ ಹೆಚ್ಚಿಸಲು ಸಾಧ್ಯವೆಂದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಮಾತನಾಡಿ, ಇಲಾಖೆಯಲ್ಲಿ ಮಾವಿನ ಬೆಳೆಗಾಗಿ ಪ್ರದೇಶ ವಿಸ್ತರಣೆ, ಯಾಂತ್ರೀಕರಣ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಲ್ಲದೇ ಹಣ್ಣು ಮಾಗಿಸುವ ಘಟಕಗಳು ಸ್ಥಾಪನೆಗೆ ಇನ್ನೂ ಹತ್ತಾರು ಯೋಜನೆಗಳು ಲಭ್ಯವಿದ್ದು ರೈತರು ಇವುಗಳ ಸದ್ಬಳಕೆಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಇಲಾಖಾ ಅಧಿಕಾರಿಗಳಾದ ರಮೇಶ ಕೆ.ಎಂ., ದುರ್ಗಾಪ್ರಸಾದ, ನಜೀರ್‌ ಅಹ್ಮದ್‌ ಸೋಂಪುರ, ಪ್ರಗತಿಪರ ರೈತರಾದ ಶಿವಣ್ಣ ಕರಡಿ, ಪಂಪಣ್ಣ ಕುಂಬಾರ, ನಿಂಗಪ್ಪ ಕಲ್ಗುಡಿ, ಧಳಪತಿ, ವೆಂಕಟೇಶ್ವರರಾವ ಸೇರಿದಂತೆ ಜಿಲ್ಲೆಯ ಎಲ್ಲಾ ತೋಟಗಾರಿಕೆ ಇಲಾಖಾ ಅಧಿಕಾರಿಗಳು, ಮಹಿಳಾ ಅಧಿಕಾರಿಗಳು, ತೋಟಗಾರಿಕೆ ಸಹಾಯಕರು ಹಾಗೂ ವಿಷಯ ತಜ್ಞರು ಉಪಸ್ಥಿತರಿದ್ದರು.

loading...