ಅಳ್ನಾವರಕ್ಕೆ ಜಿಲ್ಲಾಧಿಕಾರಿ ದಿಢೀರ್‌ ಭೇಟಿ : ತಾಲೂಕು ಕಚೇರಿ ನಿವೇಶನ ಪರಿಶೀಲನೆ

0
7
loading...

ಕನ್ನಡಮ್ಮ ಸುದ್ದಿ-ಅಳ್ನಾವರ: ಧಾರವಾಡ ಜಿಲ್ಲಾಧಿಕಾರಿಯಾಗಿ ಹೊಸದಾಗಿ ಅಧಿಕಾರ ವಹಿಸಿಕೊಂಡ ದೀಪಾ ಚೋಳನ ಅವರು ಸೋಮವಾರ ಸಂಜೆ ಅಳ್ನಾವರಕ್ಕೆ ದಿಢೀರ್‌ ಭೇಟಿ ನೀಡಿ ಹೊಸ ತಾಲೂಕು ಕಚೇರಿಗೆ ಗುರುತಿಸಲಾದ ಎಪಿಎಂಸಿ ಸ್ಥಳ ಪರಿಶೀಲಿಸುವದರ ಜೊತೆಗೆ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹೊಸದಾಗಿ ಘೋಷಿಸಿದ ಅಳ್ನಾವರ ತಾಲೂಕು ಕೇಂದ್ರಕ್ಕೆ ಬೇಕಾದ ಕಚೇರಿಗೆ ಕಟ್ಟಡ ಜನರಿಗೆ ಅನುಕೂಲವಾಗುವ ಜಾಗೆಯಲ್ಲಿ ಇರುವ ಹಾಗೆ ಎಪಿಎಂಸಿ ಸ್ಥಳ ಗುರುತಿಸಲಾಗಿದೆ. ಹೊಸ ಕಚೇರಿ ಜೊತೆಗೆ ತಾಲ್ಲೂಕ ಕೇಂದ್ರಕ್ಕೆ ಬೇಕಾಗುವ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲಾಗುವದು. ಜಿಲ್ಲೆಯ ಮೂರು ಹೊಸ ತಾಲ್ಲೂಕಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವದು ಎಂದರು.
ಜನ ಸಾಮಾನ್ಯರ ಕುಂದು ಕೊರತೆ ಆಲಿಸಲು ಹಾಗೂ ಜಿಲ್ಲೆಯ ಗ್ರಾಮಾಂತರ ಭಾಗದ ಆಡಳಿತ ವ್ಯವಸ್ಥೆ ಚುರುಕುಗೊಳಿಸಲು ದಿಡೀರ ಬೇಟಿ ನೀಡಲಾಗುತ್ತಿದೆ. ಸರ್ಕಾರ ಅಗತ್ಯ ಸೇವೆಗಳ ಜನರಿಗೆ ಹತ್ತಿರವಾಗಿ ಲಬಿಸಬೇಕು ಎನ್ನುವ ಹಂಬಲ ನನ್ನದು. ಜಿಲ್ಲೆಯಾದ್ಯಂತ ಬೇಟಿ ನೀಡುವ ಮೂಲಕ ಇಲ್ಲಿನ ಆಗು ಹೋಗುಗಳ ಬಗ್ಗೆ ತಿಳಿದುಕೊಂಡು ಮುಂದಿನ ಕಾರ್ಯ ಯೋಜನೆ ರೂಪಿಸಲಾಗುವದು ಎಂದರು.
ಪಟ್ಟಣದಲ್ಲಿ ಸ್ವಂತ ಮನೆ ಇಲ್ಲದ ಜನರಿದ್ದಾರೆ. ಕಳೆದ 20 ವರ್ಷದಿಂದ ಆಶ್ರಯ ಯೋಜನೆಯಡಿ ಮನೆ ನೀಡಿಲ್ಲ. ಕಾರಣ ಆದಷ್ಟು ಬೇಗನೆ ನಿವೇಶನ ಗುರುತಿಸಿ ಮನೆ ಇಲ್ಲದವರಿಗೆ ಸೂರು ಒದಗಿಸಿಕೊಡಿ ಎಂದು ಪಟ್ಣಣ ಪಂಚಾಯ್ತಿ ಅಧ್ಯಕ್ಷೆ ಭಾಗ್ಯವತಿ ಕುರುಬರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಬಗ್ಗೆ ಅಧಿಕರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿ, ಆಶ್ರಯ ಯೋಜನೆಗೆ ಬೇಕಾದ 60 ಎಕರೆ ಜಾಗೆಯನ್ನು ಗುರುತಿಸಲಾಗಿದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಕ್ರಮ ಕೈಗೊಳ್ಳುವ ಭರವಶೆ ನೀಡಿದರು.
ಪಟ್ಟಣದ ಜನತೆಗೆ ಕುಡಿಯುವ ನೀರಿನ ಶಾಸ್ವತ ಪರಿಹಾರ ಕಲ್ಪಿಸುವ ಕಾಳಿ ನದಿಯಿಂದ ನೀರು ತರುವ ಯೋಜನೆ ಪ್ರಗತಿ, ಪಟ್ಟಣದ ಕೆರೆಗಳ ಅಭಿವೃದ್ದಿ, ನಗರೋತ್ಥಾನ ಯೋಜನೆಯ ಪ್ರಗತಿ ಬಗ್ಗೆ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಜಿಲ್ಲಾಧಿಕಾರಿಗಳು ನಾಡ ಕಚೇರಿಗೆ ಬೇಟಿ ನೀಡಿ ಅಲ್ಲಿನ ಉತಾರ ಸಕಾಲ ಸೇವೆಗಳನ್ನು ಪರಿಶೀಲಿಸಿದರು. ರೈತರೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಅವರು ಮಾತನಾಡಿ, ಸರ್ಕಾರಿ ಸೇವೆಗಳು ಸಕಾಲಕ್ಕೆ ದೊರಕುತ್ತವೆಯೊ ಎಂದು ವಿಚಾರಿಸಿದರು. ಕುಂಬಾರಕೊಪ್ಪ ಸೇರಿದಂತೆ ಅಕ್ಕ ಪಕ್ಕದ ಆರು ಹಳ್ಳಿಗಳ ಉತಾರ ದೊರಕುತ್ತಿಲ್ಲ. ಬೆಳೆ ವಿಮೆ ತುಂಬುವ ಅಂತಿಮ ದಿನಾಂಕ ಹತ್ತಿರ ಬಂದಿದೆ ಕಾರಣ ಬೇಗ ಉತಾರ ಸಿಗುವ ವ್ಯವಸ್ಥೆ ಮಾಡಿ ಎಂದು ರೈತರು ವಿನಂತಿಸಿದರು. ತಾಂತ್ರಿಕ ತೊಂದರೆಯಿಂದ ಈ ಭಾಗದ ಉತಾರ ದೊರಕುತ್ತಿಲ್ಲ. ಬೇಗನೆ ತೊಂದರೆ ನಿವಾರಿಸಲಾಗುವದು ಎಂದು ಅಧಿಕಾರಿಗಳು ತಿಳಿಸಿದರು.
ಉಪ ವಿಭಾಗಾಧಿಕಾರಿ ಮಹ್ಮದ್‌ಜುಬೇರ, ಪ್ರೊಬೇಶನರಿ ಉಪ ವಿಬಾಗಾಧಿಕಾರಿ ಪಾರ್ವತಿ, ತಹಶೀಲ್ದಾರ ಪ್ರಕಾಶ ಕುದರಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಬಾಗ್ಯವತಿ ಕುರುಬರ, ಸುನಂದಾ ಕಲ್ಲು, ನಾಗರತ್ನಾ ಜಮಖಂಡಿ, ಮಂಜುಳಾ ಮೇದಾರ, ಪರಶುರಾಮ ಬೇಕನೇಕರ, ಉಸ್ಮಾನ ಬಾತಖಂಡಿ, ವಿನಾಯಕ ಕುರುಬರ , ತಹಶೀಲ್ದಾರ ಕಚೇರಿ ಶಿರಸ್ತೇದರ ಟಿ.ಬಿ .ಬಡಿಗೇರ, ಪ,.ಪಂ. ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಮತ್ತಿತರು ಇದ್ದರು.
ಧಾರವಾಡ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಉತ್ತಮವಾಗಿದೆ. ಜಿಲ್ಲಾ ವ್ಯಾಪ್ತಿಯ ಶಹರ ಮತ್ತು ಗ್ರಾಮೀಣ ಭಾಗದ ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳ ಒದಗಿಸುವಿಕೆ ಹಾಗೂ ಹುಬ್ಬಳ್ಳಿ ಧಾರವಾಡ ಮಹತ್ವಾಕಾಂಕ್ಷಿ ಯೋಜನೆಯಾದ ಬಿಆರ್‌ಟಿಸಿ ಯೋಜನೆ ಶೀಘ್ರ ಅನುಷ್ಟಾನ ಜವಾಬ್ದಾರಿ ನನ್ನ ಹೆಗಲಿಗಿದೆ. ಸ್ಮಾರ್ಟ ಸಿಟಿ ಯೋಜನೆ ಕೂಡಾ ಅಷ್ಟೆ ಮಹತ್ವದ್ದಾಗಿದೆ. ಧಾರವಾಡ ಜಿಲ್ಲೆಯ ಸಾರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುವೆ.
ದೀಪಾ ಚೋಳನ್‌, ಜಿಲ್ಲಾಧಿಕಾರಿ.

loading...