ಅವೈಜ್ಞಾನಿಕ ನೇಮಕಾತಿ ವಿರುದ್ಧ ಪ್ರತಿಭಟನೆ

0
19
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಮಹಾನಗರ ಪಾಲಿಕೆಯಲ್ಲಿ ಅವೈಜ್ಞಾನಿಕವಾಗಿ ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆ ನಡೆಸಿದ್ದಾರೆಂದು ಆರೋಪಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಮುನ್ಸಿಪಲ್‌ ಕಾರ್ಮಿಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ನಗರಾಭಿವೃದ್ಧಿ ಕೋಶದ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಮುನ್ಸಿಪಲ್‌ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಹಂದ್ರಾಳ ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ನೇಮಕಾತಿಯಲ್ಲಿ ನಿಯಮಾವಳಿ ಪಾಲನೆಯಾಗಿಲ್ಲ. ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕ ನೇಮಕಾತಿ ಸಲುವಾಗಿ 75 ಜನರನ್ನು ನೇರ ನೇಮಕಾತಿಯಾಗಿ ಅಂತಿಮಪಡಿಸಿದ ತಾತ್ಕಾಲಿಕ ಪಟ್ಟಿ ಪ್ರಕಟಿಸಿ ಆಕ್ಷೇಪಣೆಗಾಗಿ ಅರ್ಜಿ ಸಹ ಆಹ್ವಾನಿಸಲಾಗಿತ್ತು. ನೇರ ನೇಮಕಾತಿಯನ್ನು ಮಾಡುವದುನ್ನು ವಿರೋಧಿಸಿ ಕಳೆದ ಹಲವಾರು ವರ್ಷಗಳಿಂದ ಸಂಘಟನೆಯ ನೇತೃತ್ವದಲ್ಲಿ ಹೋರಾಟ ಮಾಡಲಾಗಿದೆ ಎಂದರು.
10, 15 ವರ್ಷಗಳಿಂದ ಹಾಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಕಾಯಂ ಮಾಡಬೇಕೆಂದು ಸರ್ಕಾರಕ್ಕೆ ಕೇಳಿಕೊಂಡಿದ್ದರೂ ಸರ್ಕಾರ ಮಾತ್ರ ಪೌರಕಾರ್ಮಿಕರ ಬೇಡಿಕೆಗೆ ಸ್ಪಂದಿಸಿಲ್ಲ. ಈಗ ಅವೈಜ್ಞಾನಿಕವಾಗಿ ನೇಮಕಾತಿ ಪ್ರಕ್ರಿಯೆ ಮುಂದುವರೆಸಿದೆ ಎಂದು ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮುನ್ಸಿಪಲ್‌ ಕಾರ್ಮಿಕರ ಸಂಘವು ಸತತವಾಗಿ ಚಳುವಳಿ ಮಾಡುತ್ತಾ ಬಂದಿರುವ ಫಲವಾಗಿ ಮತ್ತು ಉಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪೌರಕಾರ್ಮಿಕರನ್ನ ಹಂತ ಹಂತವಾಗಿ ಖಾಯಂಗೊಳಿಸಲು ಮುಂದಾಗಿದೆ. ಆದರೆ ಕೆಲವವೊಂದು ಅವೈಜ್ಞಾನಿಕ ಅಂಶಗಳನ್ನು ಅಳವಡಿಸುವ ಮೂಲಕ ಮಹಾನಗರ ಪಾಲಿಕೆ ಅವೈಜ್ಞಾನಿಕವಾಗಿ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಒಬ್ಬ ಕಾರ್ಮಿಕ ತನ್ನ 20ನೇ ವಯಸ್ಸಿಗೆ ಪಾಲಿಕೆಯಲ್ಲಿ ಕಡಿಮೆ ವೇತನದಲ್ಲಿ ಗುತ್ತಿಗೆ ಕೆಲಸ ಮಾಡಲು ಬಂದವನಿಗೆ ನೇಮಕಾತಿ ಸಂದರ್ಭದಲ್ಲಿ 45 ವರ್ಷ ಮುಗಿದು ಹೋಗಿದೆ. ಆ 25 ವರ್ಷದ ಪೌರ ಕಾರ್ಮಿಕ ಈ ಪ್ರಕ್ರಿಯೆಯಿಂದ ಹೊರಗುಳಿಯುತ್ತಾರೆ. ಹಾಗಾದರೆ ಆ ಪೌರ ಕಾರ್ಮಿಕನ ಸೇವಾ ಭದ್ರತೆ ಹೇಗೆ ಎಂದು ಪ್ರಶ್ನಿಸಿದರು.
ಈ ನೇಮಕಾತಿಯು ಅವೈಜ್ಞಾನಿಕವಾಗಿದ್ದು, ಸೇವಾ ಹಿರಿತನವನ್ನು ಕಡೆಗಣಿಸಿ ಕಿರಿಯರನ್ನು ನೇಮಕ ಮಾಡುವ ಪ್ರಕ್ರಿಯೆಯಾಗಿದೆ. ಹಾಗಾಗಿ ಸೇವಾಹಿರಿತನವನ್ನು ಪರಿಗಣಿಸಿ ಕಚೇರಿಯಲ್ಲಿನ ಮೊದಲಿನ ಮೂಲ ದಾಖಲೆಗಳನ್ನು ಪರಿಶೀಲಿಸಿ ಸದರಿ ನೇಮಕಾತಿ ಪಟ್ಟಿಯಲ್ಲಿ ಸೇವಾ ಹಿರಿತನವನ್ನು ಪರಿಗಣನೆಗೆ ತೆಗೆದುಕೊಂಡು ಪೌರಕಾರ್ಮಿಕರನ್ನು ಕಾಯಂ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಂಕರ ಚಲವಾದಿ, ಜೀತೆಂದ್ರ ಕಾಂಬಳೆ, ಸಂಜೀವ ಕಾಂಬಳೆ, ಸುನಂದಾ ಗದ್ಯಾಳ, ಅನೀತಾ ಗೋಸಾವಿ, ಶೋಭಾ ಕಾಖಂಡಕಿ, ಮೀನಾಕ್ಷಿ ಪರಪ್ಪಗೋಳ, ದುಂಡವ್ವ ಕಾಖಂಡಕಿ, ಕಸ್ತೂರಿ ಕಾಖಂಡಕಿ, ರಮೇಶ ಶಾಹಪೂರ, ಬಲಭೀಮ ಕನ್ನೂರ, ಚಂದ್ರಶೇಖರ, ಜಟ್ಟೆಪ್ಪ ಕಾಂಬಳೆ ಉಪಸ್ಥಿತರಿದ್ದರು.

loading...