ಅ.10 ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ

0
13
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ಜಿಲ್ಲೆಯಲ್ಲಿ ಆಗಸ್ಟ 10 ರಂದು ರಾಷ್ಟ್ರೀಯ ಜಂತುಹುಳು ನಿರಾವಣಾ ದಿನ ಆಚರಿಸಲಾಗುತ್ತಿದ್ದು, ಅಂದು 1 ರಿಂದ 19 ವರ್ಷದ ಎಲ್ಲ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಗಳನ್ನು ಕಡ್ಡಾಯವಾಗಿ ನೀಡುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಂತುಹುಳು ಇದೊಂದು ಸೋಂಕು ರೋಗವಾಗಿದ್ದು, 1 ರಿಂದ 19 ವರ್ಷದ ಎಲ್ಲ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಯಾದ ಅಲ್ಬೆಂಡಾಝೋಲ್‌ ಮಾತ್ರೆಯನ್ನು ನೀಡಬೇಕು. ಈ ಮಾತ್ರೆಗಳನ್ನು ಆಗಸ್ಟ 10 ರಂದು ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರ ಹಾಗೂ ಶಾಲಾ ಕಾಲೇಜುಗಳಲ್ಲಿ ಉಚಿತವಾಗಿ ನೀಡಲಾಗುತ್ತಿದು, ಅಂದು ತಪ್ಪದೇ ಮಕ್ಕಳನ್ನು ಅಂಗನವಾಡಿ, ಶಾಲೆ-ಕಾಲೇಜುಗಳಿಗೆ ಕಳುಹಿಸುವಂತೆ ಪಾಲಕ ಪೋಷಕರಲ್ಲಿ ಮನವಿ ಮಾಡಿದರು. ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ ಒಟ್ಟು 6.63 ಲಕ್ಷ ಮಕ್ಕಳಿರಬಹುದೆಂದು ಅಂದಾಜಿಸಲಾಗಿದ್ದು, ಯಾವುದೇ ಮಗು ಈ ಮಾತ್ರೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಅಂಗನವಾಡಿ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಹಾಗೂ ಕಾಲೇಜುಗಳಲ್ಲಿ ಇರುವ ಮಕ್ಕಳ ಅಂಕಿ ಸಂಖ್ಯೆಗಳನ್ನು ಕಲೆ ಹಾಕಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅಲ್ಲದೇ ಇವುಗಳನ್ನು ಹೊರತುಪಡಿಸಿ ಕೈಗಾರಿಕೆ ತರಬೇತಿ ಕೇಂದ್ರ, ಡಿಪ್ಲೋಮಾ, ನರ್ಸಿಂಗ್‌ ಕಾಲೇಜಿನಲ್ಲಿರುವ ಮಕ್ಕಳ ಮಾಹಿತಿಯನ್ನು ಸಹ ಪಡೆಯಬೇಕು. ಅಲ್ಲದೇ ಶಾಲೆ-ಕಾಲೇಜುಗಳಿಂದ ಹೊರಗುಳಿದ ಮಕ್ಕಳನ್ನು ಸಹ ಗುರುತಿಸಿ ಅವರಿಗೆ ಮಾತ್ರೆ ನೀಡುವ ಕೆಲಸವಾಗಬೇಕೆಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ಎನ್‌.ದೇಸಾಯಿ ಮಾತನಾಡಿ ಜಂತುಹುಳು ಸೋಂಕಿನಿಂದ ಮಕ್ಕಳಲ್ಲಿ ರಕ್ತಹಿನತೆ, ಪೌಷ್ಠಿಕಾಂಶ ಕೊರತೆ, ಹಸಿವುಯಾಗದಿರುವುದು, ನಿಶಕ್ತಿ ಮತ್ತು ಆತಂಕ, ಹೊಟ್ಟೆ ನೋವು, ವಾಕರಿಕೆ, ವಾಂತಿ, ಅತಿಸಾರ ಮತ್ತು ತೂಕ ಕಡಿಮೆಯಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜಂತುಹುಳು ಹೊಂದಿದ ಮಗುವಿನಲ್ಲಿ ಲಕ್ಷಣಗಳು ಹೆಚ್ಚಾಗಿರುತ್ತದೆ. ಕಡಿಮೆ ಪ್ರಮಾಣದ ಸೋಂಕಿನ ಮಕ್ಕಳಲ್ಲಿ ರೋಗಲಕ್ಷಣಗಳು ಹೊಂದಿರುವದಿಲ್ಲ. ಆದ್ದರಿಂದ ತಪ್ಪದೇ ಜಂತುಹುಳಿ ನಾಶಕ ಮಾತ್ರಯನ್ನು ಕಡ್ಡಾಯವಾಗಿ ನೀಡುವುದು ಅವಶ್ಯವಾಗಿದೆ ಎಂದರು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಕಿಕೊಂಡ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ವಿವರಿಸಿದರು. ಸಭೆಯಲ್ಲಿ  ಅಮರೇಶ ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್‌.ಕಾಮಾಕ್ಷಿ,  ಬಸವರಾಜ ಶಿರೂರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

loading...