ಆಟೋ ಚಾಲಕರ ಮೇಲೆ ಬರೆ ಎಳೆಯುತ್ತಿವೆ ಮೈತ್ರಿ ಸರ್ಕಾರ: ನಾಯ್ಕ

0
14
loading...

ಕನ್ನಡಮ್ಮ ಸುದ್ದಿ-ಕುಮಟಾ: ಆಟೋ ಚಾಲಕರ ವಿರುದ್ಧ ರಾಜ್ಯ ಸರಕಾರ ನೂತನ ನಿಯಮಗಳನ್ನು ರೂಪಿಸಿ, ತೊಂದರೆ ನೀಡುವ ಮೂಲಕ ಬಡ ಆಟೋ ಚಾಲಕರ ಹೊಟ್ಟೆಯ ಮೇಲೆ ಹೊಡೆಯುವ ಕಾರ್ಯ ಮಾಡುವುದಲ್ಲದೇ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿದೆ ಎಂದು ಜಿಲ್ಲಾ ಆಟೋ ಚಾಲಕರ ಯೂನಿಯನ್‌ ಅಧ್ಯಕ್ಷ ಆರ್‌.ಜಿ ನಾಯ್ಕ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ನಿರುದ್ಯೋಗಿ ಯುವಕರು ಸೂಕ್ತ ಉದ್ಯೋಗ ದೊರೆಯದೇ ಜೀವನ ನಿರ್ವಹಣೆಗಾಗಿ ಸಾಲ ಮಾಡಿ ಆಟೋ ಓಡಿಸುವ ವೃತ್ತಿಯನ್ನು ಆಯ್ದುಕೊಳ್ಳುತ್ತಾರೆ. ಆದರೆ, ಸರಕಾರ ಸಾಲ ಮಾಡಿ ಆಟೋ ಖರೀದಿಸುವ ಬಡ ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆಯಲು ರಾಜ್ಯ ಸರ್ಕಾರ ಹೊಸ ಹೊಸ ನಿಯಮಗಳನ್ನು ರೂಪಿಸಿ ತೊಂದರೆ ನೀಡುತ್ತಿದ್ದಾರೆ. ಈ ಬಾರಿ 3 ಸಾವಿರ ರೂ. ಇದ್ದ ವಿಮಾ ಕಂತನ್ನು 9 ಸಾವಿರಕ್ಕೆ ಹೆಚ್ಚಿಸಿದೆ. ಈಗಾಗಲೇ ಬಾಡಿಗೆಯಿಲ್ಲದೆ ಜೀವನ ನಿರ್ವಹಣೆಯೇ ಕಷ್ಟದಾಯಕವಾಗಿರುವಾಗ ರಾಜ್ಯ ಸರಕಾರ ವಿಮಾ ಕಂತನ್ನು ಅಧಿಕ ಮಾಡಿರುವುದರಿಂದ ಆಟೋ ಚಾಲಕರ ಗಾಯದ ಮೇಲೆ ಬರೆ ಎಳೆಯುವಂತೆ ಮಾಡುವುದು ಸರಿಯಲ್ಲ. ಅಲ್ಲದೆ ಪ್ರವಾಸಿಗರಿಗೆ ಬೈಕ್‌ ಬಾಡಿಗೆಗೆ ನೀಡಲು ಅವಕಾಶ ಕಲ್ಪಿಸಿದೆ. ಪಟ್ಟಣದಿಂದ 7 ಕಿಮೀ ಆಚೆಗೆ ಬಾಡಿಗೆಗೆ ಹೋಗದಂತೆ ಸೂಚಿಸಿದೆ. ಆಟೋ ನಿಲ್ಲಿಸಲು ಸ್ಥಳಾವಕಾಶದ ಕೊರತೆಯಿದ್ದರೂ ಬೇಕಾಬಿಟ್ಟಿ ಪರ್ಮಿಟ್‌ ನೀಡಲಾಗುತ್ತಿದೆ. ಇದರಿಂದ ಉದ್ಭವಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಇನ್ನುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಶಾಸಕ ದಿನಕರ ಶೆಟ್ಟಿ ಅವರು ಹಲ ವರ್ಷಗಳ ಹಿಂದೆ ಆಟೋ ಯೂನಿಯನ್‌ನ ಅಧ್ಯಕ್ಷರಾಗಿದ್ದರು. ಅಲ್ಲದೇ ಅವರಿಗೆ ಆಟೋ ಚಾಲಕರ ಸಮಸ್ಯೆಯನ್ನು ಚೆನ್ನಾಗಿ ಅರಿತವರಾಗಿದ್ದರೂ ಅವರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವ ಗೋಜಿಗೆ ಹೋಗಿಲ್ಲ. ಹಾಗಾಗಿ ಜಿಲ್ಲೆಯ ನಿಯೋಗವು ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರನ್ನು ಈ ತಿಂಗಳ ಕೊನೆಯಲ್ಲಿ ಭೇಟಿ ಮಾಡಲಿz್ದೇವೆ ಎಂದರು.
ಯೂನಿಯನ್‌ ಮುಖಂಡ ವಿಶ್ವನಾಥ ಗೌಡ ಮಾತನಾಡಿ, ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರಿಗೆ ನಾವು ರೈತರ ಸಾಲ ಮನ್ನಾ ಮಾಡಿದಂತೆ ನಮ್ಮ ಸಾಲ ಮನ್ನಾ ಮಾಡಿ ಎಂದು ಕೇಳುತ್ತಿಲ್ಲ. ಟ್ಯಾಕ್ಸಿ ಖರೀದಿ ಮಾಡುವವರಿಗೆ ಸಬ್ಸಿಡಿ ನೀಡಿದಂತೆ ಆಟೋ ಚಾಲಕರಿಗೂ ನೀಡಿ ಎಂದು ಒತ್ತಾಯಿಸುತ್ತೇವೆ. ಟೂ ಸ್ಟ್ರೋಕ್‌ ವಾಹನ ನಿಷೇಧಿಸಿದ್ದರಿಂದ ಹೊಸ ಆಟೋ ಖರೀದಿಸಲು ಅನುಕೂಲವಾಗುತ್ತದೆ. ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಬಡ ಆಟೋ ಚಾಲಕರ ಕ್ಷೇಮಾಭಿವೃದ್ಧಿಗಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡುತ್ತಾರೆಂಬ ವಿಶ್ವಾಸವಿತ್ತು. ಅದು ಹುಸಿಯಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಆಟೋ ಚಾಲಕರ ನೆನಪಾಗುವ ರಾಜಕೀಯ ಮುಖಂಡರಿಗೆ ಈಗ ನಮ್ಮ ಸಮಸ್ಯೆಗಳನ್ನು ಆಲಿಸುವ ವ್ಯವದಾನವಿಲ್ಲ. ಹಾಗಾಗಿ ಕೆಲ ಬೇಡಿಕೆಗಳನ್ನು ಸರಕಾರದ ಮುಂದೆ ಇಡಲಿz್ದೇವೆ. ಈ ಸಂಬಂಧ ರಾಜ್ಯ ಯೂನಿಯನ್‌ನ ಪದಾಧಿಕಾರಿಗಳನ್ನು ಸಂಪರ್ಕಿಸಿ, ನಮ್ಮ ಹೋರಾಟಕ್ಕೆ ಸಹಕಾರ ನೀಡುವಂತೆ ವಿನಂತಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯೂನಿಯನ್‌ನ ಪ್ರಮುಖರಾದ ವೆಂಕಟೇಶ ನಾಯ್ಕ, ಶಿವರಾಜ ಮೇಸ್ತಾ, ವಿವಿಧ ತಾಲೂಕುಗಳಿಂದ ಆಗಮಿಸಿದ ಯೂನಿಯನ್‌ನ ಸದಸ್ಯರು ಹಾಗೂ ಕುಮಟಾ ಪಟ್ಟಣದ ಆಟೋ ಚಾಲಕರು ಉಪಸ್ಥಿತರಿದ್ದರು.

loading...