ಆಡಳಿತದಲ್ಲಿ ಗುಣಮಟ್ಟದ ಖಾತ್ರಿ ಅಗತ್ಯ: ಸಿಪಿಓ ಗೋಠೆ

0
20
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ಕ್ರೀಯಾ ಯೋಜನೆಯನ್ನು ರೂಪಿಸುವಲ್ಲಿ ಪ್ರತಿಯೊಂದು ಹಂತದಲ್ಲಿಯೂ ಪೂರ್ವ ತಯಾರಿ ಮಾಡಿಕೊಂಡು ಸಂಗ್ರಹವಾದ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ನಿಖರತೆಯನ್ನು ಕಾಯ್ದುಕೊಂಡಾಗ ಮಾತ್ರ ಆಡಳಿತಾತ್ಮಕ ಅಂಕಿ-ಅಂಶಗಳಲ್ಲಿ ಗುಣಮಟ್ಟದ ಕಾಯ್ದುಕೊಳ್ಳಲು ಸಾದ್ಯವೆಂದು ಜಿ.ಪಂ ಮುಖ್ಯ ಯೋಜನಾಧಿಕಾರಿ ಎನ್‌.ಕೆ.ಗೋಠೆ ಹೇಳಿದರು.
ನಗರಸಭೆಯ ಸಭಾಭವನದಲ್ಲಿಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡ ಮಹಾನ್‌ ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್‌ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂಕಿ ಅಂಶಗಳನ್ನು ಕಲೆಹಾಕದೇ ಕ್ರೀಯಾ ಯೋಜನೆಯನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಆಡಳಿತಾತ್ಮಕ ಅಂಕಿ-ಅಂಶಗಳ ಗುಣಮಟ್ಟ ಖಾತ್ರಿಗೊಳಿಸುವಲ್ಲಿ ಸಾಂಖ್ಯಿಕ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಜವಾಬ್ದಾರಿ ಮುಖ್ಯವಾಗಿದೆ ಎಂದರು.
ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಯೋಜನಾ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಯೋಜನೆಗಳ ಅನುಷ್ಠಾನದಲ್ಲಿ ಸಾಂಖ್ಯಿಕ ವಿಷಯಕ್ಕೆ ಹೆಚ್ಚಿನ ಪ್ರಾದಾನ್ಯತೆ ಇದ್ದು, ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳ ಜವಾಬ್ದಾರಿ ಹೆಚ್ಚಾಗಿದೆ. ಆದ್ದರಿಂದ ಸಾಂಖ್ಯಿಕ ಇಲಾಖೆಯ ಎಲ್ಲ ಸಿಬ್ಬಂದಿಗಳು ಕ್ರೀಯಾಶೀಲರಾಗಿ ಕೆಲಸ ನಿರ್ವಹಿಸುವ ಅಗತ್ಯವಿದೆ ಎಂದು ತಿಳಿಸಿದರು. ನಿಗದಿತ ಅವಧಿಯಲ್ಲಿಯೇ ಮಾಹಿತ ಲಭ್ಯವಾದಲ್ಲಿ ಮಾತ್ರ ಯೋಜನೆ ಅನುಷ್ಠಾನ ಸಾಧ್ಯವಾಗುತ್ತದೆ ಎಂದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಎಚ್‌.ದಿವಟರ ಅತಿಥಿ ಉಪನ್ಯಾಸ ನೀಡುತ್ತಾ, ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲಿ ಸಂಖ್ಯಾಶಾಸ್ತ್ರವು ಬಳಕೆಯಾಗುತ್ತಿದೆ. ಗೃಹಿಣಿಯ ಮನೆ ಬಳಕೆಗೆ ಖರೀದಿಸುವ ದಿನಸಿ ಪ್ರಮಾಣದಿಂದ ಹಿಡಿದು ರಸ್ತೆ ಬದಿಯ ವ್ಯಾಪಾರಸ್ಥರು, ದೈನಂದಿನ ಖರ್ಚಿಗೆ ಹಣ ಬೇಡುವ ವಿದ್ಯಾರ್ಥಿಗಳು, ಮಕ್ಕಳು, ಮಾಸಿಕ ವೆಚ್ಚವನ್ನು ಸರಿದೂಗಿಸುವ ದಿಸೆಯಲ್ಲಿ ಸರ್ಕಾರಿ ನೌಕರರು, ರೈತರು, ಕಾರ್ಮಿಕರು ತಮ್ಮ ದೈನಂದಿನ ಜೀವನದಲ್ಲಿ ಸಂಖ್ಯಾಶಾಸ್ತ್ರದವನ್ನು ಅರಿತೋ ಅರಿಯದೆಯೋ ಬಳುಸುತ್ತಿದ್ದಾರೆ. ಸಾಗರ ಗರ್ಭದ ಸಂಶೋಧನೆಗಳು, ಅಂತರೀಕ್ಷ ಸಂಶೋಧನೆಗಳು, ವೈದ್ಯಕೀಯ ಸಮುದಾಯ ಅಭಿವೃದ್ದಿ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ಸಂಖ್ಯಾಶಾಸ್ತ್ರವು ಅನಿವಾರ್ಯವಾಗಿದೆ. ಸಂಖ್ಯಾಶಾಸ್ತ್ರವನ್ನು ಬಳಸದೇ ಇರುವ ಕ್ಷೇತ್ರ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರತಿಯೊಂದ ಸಮೀಕ್ಷೆ, ಗಣತಿ ಕಾರ್ಯಗಳಲ್ಲಿ ನಿಗದಿಪಡಿಸಿದ ಅವಧಿಯಲ್ಲಿ ಮಾಹಿತಿ ಸಂಗ್ರಹಣೆ, ಪರಿಶೀಲನೆ ಕೈಗೊಳ್ಳುವುದು ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಅಗತ್ಯವಾಗಿದೆ. ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂಲ ಕಾರ್ಯಕರ್ತರು ಶ್ರದ್ದೆ, ನಿಷ್ಠೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಆಡಳಿತಾತ್ಮಕ ಅಂಕಿ-ಅಂಶಗಳ ಗುಣಮಟ್ಟ ಖಾತ್ರಿಗೊಳಿಸಲು ಸಾಧ್ಯ. ಸಾಂಖ್ಯಿಕ ಇಲಾಖೆ ಸಂಗ್ರಹಿಸುವ ಪರಿಶೀಲಿಸುವ ಪ್ರತಿಯೊಂದು ಮಾಹಿತಿ ವಸ್ತುನಿಷ್ಠವಾಗಿ ಇರುವುದನ್ನು ಖಾತ್ರಿಪಡಿಸಿಕೊಂಡು ಆಡಳಿತದಲ್ಲಿ ಗುಣಮಟ್ಟ ಸುಧಾರಣೆಯಾದರೆ ಮಾತ್ರ ಸಮಾಜದ ಮತ್ತು ಸಮುದಾಯದ ಅಭಿವೃದ್ದಿಗೆ ದಾರಿದೀಪವಾಗಲಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಖ್ಯಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್‌.ಬಾಡಗಿ ದೇಶದ ಸಾಂಖ್ಯಿಕ ವಲಯಕ್ಕೆ ಪ್ರೊ.ಪ್ರಶಾಂತ ಚಂದ್ರ ಮಹಾಲನೋಬಿಸ್‌ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಅವರ ಅಧ್ಯಯಶೀಲತೆ, ಪರಿಶ್ರಮ ಮತ್ತು ಕಾರ್ಯಚಟುವಟಿಕೆಗಳಿಂದ ದೇಶದಲ್ಲಿ ಭಾರತೀಯ ಸಾಂಖ್ಯಿಕ ಸಂಸ್ಥೆ, ಕೇಂದ್ರೀಯ ಸಾಂಖ್ಯಿಕ ಘಟಕ ಸ್ಥಾಪಿಸಿ, ಪಂಚವಾರ್ಷಿಕ ಯೋಜನೆಗಳ ರೂಪುರೇಷೆ ಸಿದ್ದಪಡಿಸುವಲ್ಲಿ ಮತ್ತು ಅನುಷ್ಠಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇಂದಿನ ಅಭಿವೃದ್ದಿಶೀಲ ಭಾರತಕ್ಕೆ ಭದ್ರ ಬುನಾದಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿ.ಪಂ ಸಿಪಿಓ ಎನ್‌.ಕೆ.ಗೋಠೆ ಮತ್ತು ತಾಲೂಕಾ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮುಧೋಳ ತಾಲೂಕಿನ ಸಾಂಖ್ಯಿಕ ನಿರೀಕ್ಷಕ ಬಿ.ಎನ್‌.ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಾಂಖೀಕ ನಿರೀಕ್ಷಕರಾದ ಡಿ.ಎಸ್‌.ತೆಗ್ಗಿ, ಟಿ.ಎಸ್‌.ಬೆಳ್ಳಟ್ಟಿ, ಸವಿತಾ ಕೌಜಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಎಂ.ಎಸ್‌.ಬಡಿಗೇರ ಸ್ವಾಗತಿಸಿದರು. ಸಾಂಖ್ಯಿಕ ನಿರೀಕ್ಷಕ ಎಂ.ಎಚ್‌.ಚಿಮ್ಮನಕಟ್ಟಿ ವಂದಿಸಿದರು. ಮಲ್ಲಿಕಾರ್ಜುನ ಬಡಿಗೇರ ನಿರೂಪಿಸಿದರು.

loading...