ಆರಂಭವಾಗದ ಆರ್‌ಟಿಓ ತನಿಖಾ ಠಾಣೆ: ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ನಷ್ಟ

0
12
loading...

ದೀಪಕ ಶೆಟ್ಟಿ
ಕನ್ನಡಮ್ಮ ಸುದ್ದಿ-ಕಾರವಾರ: ರಾಜ್ಯದ ಗಡಿಭಾಗವಾದ ಮಾಜಾಳಿಯಲ್ಲಿ ಸಮುದಾಯ ಚೆಕ್‌ ಪೋಸ್ಟ್‌ ಪ್ರಾರಂಭವಾಗಿದೆಯಾದರೂ, ಈ ಸಮುದಾಯ ಚೆಕ್‌ಪೋಸ್ಟ್‌ನಲ್ಲಿ ಆರ್‌.ಟಿ.ಓ. ಇಲಾಖೆ ಮಾತ್ರ ಇಲ್ಲದ್ದರಿಂದ ರಾಜ್ಯದ ಬೊಕ್ಕಸಕ್ಕೆ ಪ್ರತಿ ತಿಂಗಳು ಕೋಟ್ಯಾಂತರ ರೂ. ಆದಾಯ ನಷ್ಟವಾಗುತ್ತಿದೆ.
ಮಾಜಾಳಿಯು ರಾಜ್ಯದ ಗಡಿಪ್ರದೇಶವಾಗಿದ್ದು ಈ ಕಾರಣದಿಂದ ರಾಜ್ಯ ಸರ್ಕಾರವು ಸಮುದಾಯ ಚೆಕ್‌ ಪೋಸ್ಟ್‌ ಆರಂಭಿಸಿತ್ತು. ಈ ಸಮುದಾಯ ಚೆಕ್‌ ಪೋಸ್ಟ್‌ನಲ್ಲಿ ಒಂದೇ ಸೂರಿನಡಿಯಲ್ಲಿ ಅರಣ್ಯ, ಗಣಿ ಮತ್ತು ಭೂವಿಜ್ಞಾನ, ಪೋಲಿಸ್‌, ಅಬಕಾರಿ ಮತ್ತಿತರ ಇಲಾಖೆಗಳಿದೆ. ಆದರೆ ಇಲ್ಲಿ ಆರ್‌.ಟಿ.ಓ ಇಲಾಖೆ ಮಾತ್ರ ಇಲ್ಲದೆ ಇರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆರಿಸುವ ಕಾರ್ಯ ಕರ್ನಾಟಕ -ಗೋವಾ ಗಡಿ ಭಾಗದಲ್ಲಿ ಬಹುತೇಕ ಪೂರ್ಣವಾಗಿದೆ. ಅಬಕಾರಿ, ಪೊಲೀಸ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಜಂಟಿಯಾಗಿ ಒಂದೇ ಸೂರಿನಡಿ ಕಮ್ಯುನಿಟಿ ಚೆಕ್‌ಪೋಸ್ಟ್‌ ಅಡಿ ಕೆಲಸ ಮಾಡುತ್ತಿವೆ. ಇದಕ್ಕಾಗಿ ಹೊಸ ಕಟ್ಟಡ ಸಹ ನಿರ್ಮಿಸಲಾಗಿದೆ. ಆದರೆ ಈ ಕಟ್ಟಡದಲ್ಲಿ ಸ್ಥಳಾವಾಕಾಶ ಇದ್ದರೂ ಸಹ ಆರ್‌.ಟಿ.ಓ. ಇಲಾಖೆ ಮಾತ್ರ ತನ್ನ ಸಿಬ್ಬಂದಿಯನ್ನು ಹೊರ ರಾಜ್ಯಗಳ ಪರ್ಮಿಟ್‌ ಪರಿಶೀಲನೆ ಮತ್ತು ಪರ್ಮಿಟ್‌ ನೀಡುವ ಕಾರ್ಯವನ್ನು ಪ್ರಾರಂಭಿಸಿಲ್ಲ. ಇದರಿಂದಾಗಿ ಸರ್ಕಾರಕ್ಕೆ ಕೋಟ್ಯಾಂತರ ರೂ. ಆದಾಯ ತಪ್ಪಿಹೋಗುತ್ತಿದೆ. ಪಕ್ಕದ ಗಡಿ ಗೋವಾ ರಾಜ್ಯದ ತಪಾಸಣಾ ಕೇಂದ್ರದಲ್ಲಿ ಆರ್‌.ಟಿ.ಓ. ಅಧಿಕಾರಿಗಳು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಾಹನಗಳನ್ನು ತಪಾಸಣೆ ಮಾಡಿ, ಪರ್ಮಿಟ್‌ ನೀಡಿಯೇ ವಾಹನಗಳು ಗೋವಾ ಪ್ರವೇಶಕ್ಕೆ ಅನುಮತಿ ನೀಡುತ್ತಾರೆ. ಆದರೆ ಇದೇ ಪ್ರಕ್ರಿಯೆಯನ್ನು ಕರ್ನಾಟಕದ, ಅದು ಕಾರವಾರದ ಆರ್‌.ಟಿ.ಓ. ಅಧಿಕಾರಿಗಳು ಮಾಡುತ್ತಿಲ್ಲ. ಗೋವಾ ಪ್ರವಾಸಿ ಟ್ಯಾಕ್ಸಿಯವರು ಕಾರವಾರಕ್ಕೆ ಬಂದೇ ವಾಹನ ಪರ್ಮಿಟ್‌ ಮಾಡಿಕೊಂಡು ಗೋಕರ್ಣ ಸೇರಿದಂತೆ ಇತರೆಡೆಗೆ ಸಾಗುತ್ತಾರೆ. ಇದರಿಂದ ಗೋವಾ ಸೇರಿದಂತೆ ಇತರೆ ರಾಜ್ಯಗಳ ಟ್ಯಾಕ್ಸಿಗಳು ಕರ್ನಾಟಕದ ಪರ್ಮಿಟ್‌ ಪಡೆಯದೇ ಜಿಲ್ಲೆಯಲ್ಲಿ ಸಂಚರಿಸುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಕರ್ನಾಟಕಕ್ಕೆ ಬರುವ ತೆರಿಗೆ ಸಹ ತಪ್ಪಿಹೋಗುತ್ತಿದೆ ಎಂಬ ಆರೋಪ ಕರ್ನಾಟಕದ ಟ್ಯಾಕ್ಸಿ ಚಾಲಕ ಮಾಲಕರಿಂದ ಕೇಳಿ ಬಂದಿದೆ. ಅಲ್ಲದೇ ಕರ್ನಾಟಕದ ಗಡಿಯ ಕಮ್ಯೂನಿಟಿ ಚೆಕ್‌ ಪೋಸ್ಟ್‌ನಲ್ಲಿ ಆರ್‌.ಟಿ.ಓ. ತಪಾಸಣಾ ಮತ್ತು ಪರ್ಮಿಟ್‌ ಕೊಡುವ ಕೆಲಸ ಪ್ರಾರಂಭಿಸಬೇಕು ಎಂಬುದು ಟ್ಯಾಕ್ಸಿ ಮಾಲೀಕರ ಒತ್ತಾಯವೂ ಆಗಿದೆ. ಸಮುದಾಯ ಚೆಕ್‌ ಪೋಸ್ಟ್‌ ರಾಜ್ಯದ ಹಲವು ಗಡಿಭಾಗಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಬೇಲೇಕೇರಿ ಅದಿರು ಹಗರಣದ ಪ್ರಕರಣ ಹೊರ ಬಂದಾಗ ಸರ್ಕಾರ ಲೋಕಾಯುಕ್ತದ ಸೂಚನೆಯ ಮೇರೆಗೆ ಸಮುದಾಯ ಚೆಕ್‌ ಪೋಸ್ಟ್‌ ಆರಂಭಿಸಿತು. ಬೇಲೇಕೇರಿ ಬಂದರಿನಲ್ಲಿ ಸಹ ಇಂಥದ ಚೆಕ್‌ ಪೋಸ್ಟ್‌ ಇತ್ತು. ಆದರೆ ಕರ್ನಾಟಕ ಗೋವಾ ರಾಜ್ಯದ ಗಡಿಭಾಗ ಮಾಜಾಳಿಯಲ್ಲಿ ಮಾತ್ರ ಈ ಮಾದರಿಯ ಚೆಕ್‌ ಪೋಸ್ಟ್‌ ಪ್ರಾರಂಭವಾಗಿರಲಿಲ್ಲ, ಈಗ ಪ್ರಾರಂಭವಾದರೂ ಇದರಿಂದ ಸಿಬ್ಬಂದಿ ಕೊರತೆಯ ನೆಪ ಹೇಳಿ ಕಮ್ಯೂನಿಟಿ ಚೆಕ್‌ ಪೋಸ್ಟ್‌ ಕಚೇರಿಯಲ್ಲಿ ತನ್ನ ಶಾಖೆಯನ್ನು ಪ್ರಾರಂಭಿಸಿಲ್ಲ. ಈ ವಿಳಂಬದಿಂದ ಲಕ್ಷಾಂತರ ರೂ.ನಷ್ಟ ಪ್ರತಿ ತಿಂಗಳು ಆಗುತ್ತಿರುವುದು ಸ್ಪಷ್ಟ. ಪ್ರತಿದಿನ ಗೋವಾದಿಂದ ಕನಿಷ್ಟ ಸಾವಿರ ವಾಹನಗಳು ಕಾರವಾರ ಮತ್ತು ಕರ್ನಾಟಕ ಪ್ರವೇಶಿಸುತ್ತಿವೆ. ಅದರಲ್ಲೂ ಪ್ರವಾಸಿ ಟ್ಯಾಕ್ಸಿಗಳು ಕಾರವಾರ ಮೂಲಕವೇ ರಾಜ್ಯದ ಇತರೆ ಭಾಗಗಳಿಗೆ ತೆರಳುತ್ತಿವೆ. ಅವರ ಪರ್ಮಿಟ್‌ ಪರೀಕ್ಷಿಸುವವರೇ ಇಲ್ಲವಾಗಿದೆ. ಸುಮಾರು ನಾಲ್ಕೈದು ವರ್ಷಗಳಿಂದ ಕಾರವಾರದಲ್ಲಿ ಪೂರ್ಣ ಪ್ರಮಾಣದ ಆರ್‌.ಟಿ.ಓ.ಅಧಿಕಾರಿಗಳಿಲ್ಲ. ಪಕ್ಕದ ಜಿಲ್ಲೆಯ ಪ್ರಭಾರ ಹೊಂದಿರುವವರು ಕಾರವಾರಕ್ಕೆ ವಾರದಲ್ಲಿ ಎರಡರಿಂದ ಮೂರು ದಿನ ಇದ್ದು ಹೋಗುವ ಸಂಪ್ರದಾಯವಿದೆ. ಅಲ್ಲದೇ ಬಹುತೇಕ ಹೊರಗುತ್ತಿಗೆ ಸಿಬ್ಬಂದಿಗಳ ಮೇಲೆ ಆರ್‌.ಟಿ.ಓ.ದಂಥ ಆದಾಯ ತರುವ ಕಚೇರಿ ನಡೆಯುತ್ತಿದೆ. ಇದು ಸಾಕಷ್ಟು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಜೊತೆಗೆ ಸರ್ಕಾರಕ್ಕೂ ಭಾರೀ ನಷ್ಟವಾಗುತ್ತಿದೆ. ಇದನ್ನು ಸರಿಪಡಿಸಲು ನೂತನ ಸರ್ಕಾರವಾದರೂ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಡ ಸಾರ್ವಜನಿಕರ ವಲಯದಲ್ಲಿ ಹೆಚ್ಚುತ್ತಿದೆ. ಪೂರ್ಣ ಪ್ರಮಾಣದ ಆರ್‌.ಟಿ.ಓ.ನೇಮಕದ ಜೊತೆಗೆ ಕಾರವಾರಕ್ಕೆ ಹಾಗೂ ಚೆಕ್‌ ಪೋಸ್ಟ್‌ಗೆ ಬೇಕಾದ ಸಿಬ್ಬಂದಿಗಳ ನೇಮಕ ಆಗಬೇಕಾಗಿದೆ.
——-ಬಾಕ್ಸ್‌ ಐಟಂ——–
ಕರ್ನಾಟಕ-ಗೋವಾ ರಾಜ್ಯಗಳ ಗಡಿ ಭಾಗವಾದ ಮಾಜಾಳಿಯಲ್ಲಿರುವ ಸಮುದಾಯ ಚೆಕ್‌ ಪೋಸ್ಟ್‌ನಲ್ಲಿ ಕೂಡಲೇ ರಾಜ್ಯ ಸರ್ಕಾರ ಆರ್‌.ಟಿ.ಓ. ವಿಭಾಗ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಆರ್‌.ಟಿ.ಓ ವಿಭಾಗ ಇಲ್ಲದಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ಹಾನಿಯಾಗುತ್ತಿದೆ. – ಪ್ರಮೋದ ನಾಯ್ಕ, ಕಾರವಾರ.

loading...