ಆರೋಪ ಸಾಬೀತುಪಡಿಸಲು ಬಹಿರಂಗ ವೇದಿಕೆ ಬರಲಿ: ಗಾಡಿವಡ್ಡರ ಸವಾಲು

0
15
loading...

ಆರೋಪ ಸಾಬೀತುಪಡಿಸಲು ಬಹಿರಂಗ ವೇದಿಕೆ ಬರಲಿ: ಗಾಡಿವಡ್ಡರ ಸವಾಲು
ಕನ್ನಡಮ್ಮ ಸುದ್ದಿ

ನಿಪ್ಪಾಣಿ 24: ಭ್ರಷ್ಟರಿಂದಲೇ ಕೂಡಿರುವ ಕೃತಿ ಸಮಿತಿಯು ಚುನಾವಣೆಯ ಪೂರ್ವ ಲಾಭಕ್ಕಾಗಿ ಆಧಾರರಹಿತ ಆರೋಪ ಮಾಡುತ್ತಿದ್ದು, ಈ ಕುರಿತು ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಎಂದು ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಸವಾಲು ಹಾಕಿದ್ದಾರೆ.

ನಗರಸಭೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಎಲ್ಲೆಲ್ಲೋ ಹೋಗಿ ಆರೋಪ ಮಾಡುವ ಬದಲು ನಗರಸಭೆ ಸಭಾಗೃಹದಲ್ಲಿ ಬಾಯಿ ತೆರೆಯಬೇಕು, ನಗರಸಭೆ ನಡೆಸಿದ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೃತಿ ಸಮಿತಿಯು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿತ್ತು ಅದಕ್ಕೆ ಗಾಡಿವಡ್ಡರ ಉತ್ತರಿಸಿದರು.

ಅಶೋಕ ನಗರದ ಉದ್ಯಾನದ ಜಾಗಕ್ಕೆ ಸಂಬಂಧಪಟ್ಟ ಕೇಸ್ ಕೋರ್ಟನಲ್ಲಿದೆ. ನಗರಸಭೆ ವತಿಯಿಂದ ಎಲ್ಲ ರೀತಿ ಅವಶ್ಯಕ ಕಾನೂನು ಕ್ರಮ ಕೈಗೊಳ್ಳಲಾಗಿದೆ. ನಗರಸಭೆ ವತಿಯಿಂದ ಆರಂಭಿಸಲಾದ ಆಂಗ್ಲ ಮಾಧ್ಯಮ ಶಾಲೆ ನೂರಾರು ಬಡಕುಟುಂಬದ ಮಕ್ಕಳಿಗೆ ವರದಾನವಾಗಿದ್ದು, ಇದರಿಂದಾಗಿ ಖಾಸಗಿ ಶಾಲೆ ನಡೆಸುವ ಚಂದ್ರಹಾಸ ಧುಮಾಳ ಅವರ ಶಾಲೆ ಬಂದ್ ಬೀಳುವ ಹಂತ ತಲುಪಿದ್ದು ಇನ್ನಿಲ್ಲದ ಅರೋಪ ಮಾಡಿದ್ದಾರೆ. ಕೆರೆಯನ್ನು ಪುನರುಜ್ಜೀವನಗೊಳಿಸಿ,ಜಲಶುದ್ಧೀಕರಣ ಘಟಕವನ್ನು ನಿರ್ಮಿಸಿ 5 ವಾರ್ಡಗಳ ನಗರೀಕರಿಗೆ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದಿದೆ. ಇದಕ್ಕಾಗಿ 44 ಲಕ್ಷ ರೂ.ಗಳನ್ನು ಮೀಸಲಿಟ್ಟಿದ್ದರೂ,25 ಲಕ್ಷ ಕಾಮಗಾರಿ ಪೂರ್ಣಗೊಂಡಿದೆ. ಡಿಸಿ ಅವರ ಅನುಮತಿಯೊಂದಿಗೆ ಕೇವಲ 4.5 ಲಕ್ಷ ರೂ.ಗಳ ವೆಚ್ಚದಲ್ಲಿ ಕುಸ್ತಿ ಮೈದಾನ ನಿರ್ಮಿಸಿ ಕುಸ್ತಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಲಾಗಿದೆ ಎಂದರು.

ಅಲ್ಲದೇ ತರಕಾರಿ ಮಾರ್ಕೆಟ್ ಕಾಮಗಾರಿ ಈಗಾಗಲೇ ಹಲವು ಚೌಕಾಶಿಗಳನ್ನು ಎದುರಿಸಿದೆ. ಆದರೂ ಮತ್ತೆ ಯಾರಿಂದ ಸಾಧ್ಯವೋ ಅವರಿಂದ ಚೌಕಾಶಿ ನಡೆಸಲಿ. ತಾವು ಮತ್ತು ತಮ್ಮ ಸಹಕಾರಿ ಸದಸ್ಯರು ಅತ್ಯಂತ ಪ್ರಾಮಾಣಿಕವಾಗಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ನಡೆಸಿದ್ದೇವೆ. ಕೇವಲ ಹೊಟ್ಟೆಕಿಚ್ಚು ರಾಜಕಾರಣದಿಂದ ಇನ್ನಿಲ್ಲದ ಆಧಾರ ರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ಇವರ ಅಧಿಕಾರವಧಿಯಲ್ಲಿ ಯಾವ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ ಎಂಬುದನ್ನು ಜನತೆಗೆ ತಿಳಿಸಲಿ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಅನೀಸ ಮುಲ್ಲಾ,ಸದಸ್ಯರಾದ ರವೀಂದ್ರ ಶಿಂಧೆ,ಬಾಳಾಸಾಹೇಬ ದೇಸಾಯಿ,ದಿಲೀಪ ಪಠಾಡೆ ಮತ್ತಿತರರು ಉಪಸ್ಥಿತರಿದ್ದರು.

..

loading...