ಆಸ್ಪತ್ರೆಗೆ ಸಕಲ ಸೌಲಭ್ಯ ಒದಗಿಸಲು ಮೊದಲ ಆದ್ಯತೆ: ಸಚಿವ ಶಿವಾನಂದ

0
13
loading...

ನಿಡಗುಂದಿ: ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿವೆ, ಆದರೆ ಸೌಲಭ್ಯಗಳಿಲ್ಲ. ಹೀಗಾಗಿ ಹೊಸ ಆಸ್ಪತ್ರೆಗೆ ಅನುಮತಿ ನೀಡುವ ಬದಲು ಇರುವ ಆಸ್ಪತ್ರೆಗೆ ಸಕಲ ಸೌಲಭ್ಯ ಒದಗಿಸಲು ಮೊದಲ ಆದ್ಯತೆ ನೀಡುತ್ತೇನೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ಬೇನಾಳ ಎನ್‌ಎಚ್‌ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ನಡೆದ “ನಮ್ಮೂರು ಸಂಭ್ರಮ” ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬೇನಾಳ ಗ್ರಾಮಸ್ಥರ ವಿಶೇಷ ಮುತುವರ್ಜಿಯಿಂದ ಈ ಬಾರಿ ಇಲ್ಲಿಯ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 100 ರಷ್ಟಾಗಿದೆ. ಇದಕ್ಕೆ ಇಲ್ಲಿಯ ಶಿಕ್ಷಕರ ಪ್ರಯತ್ನವೂ ಹೆಚ್ಚಿದೆ ಎಂದರು. ಬೇನಾಳ ಗ್ರಾಮ ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಸುಶಿಕ್ಷಿತರಾಗಿದ್ದು, ಹೆಚ್ಚಿನ ಸಂಖ್ಯೆಯ ಪತ್ರಕರ್ತರು, ಸಾಹಿತಿಗಳು, ವೈದ್ಯರಾಗಿದ್ದಾರೆ, ಅಲ್ಲಿದೇ ಕೆಲವರು ಪ್ರತಿಷ್ಠಿತ ಕಂಪನಿಗಳನ್ನು ಹೊಂದಿದ್ದು ವಿಶೇಷ ಎಂದು ಸಚಿವರು ಹೇಳಿದರು.
ಬಡತನದಲ್ಲಿಯೇ ಶಾಲೆ ಕಲಿತು ಬಸ್‌ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಬಸರಕೋಡ ಅವರು ತಾವು ಇಲ್ಲಿಯವರೆಗೆ ಬರೆದ 39 ಕವನಗಳನ್ನು ಒಟ್ಟುಗೂಡಿಸಿ ಹೊರತಂದಿರುವ “ಎದೆಯ ಬೋಧಿ ಚಿಗುರು” ಎಂಬ ಕವನಸಂಕಲನವನ್ನು ಸಚಿವರು ಬಿಡುಗಡೆಗೊಳಿಸಿದರು.
ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ ಎಸ್‌.ಎಸ್‌. ಓತಗೇರಿ, ಪ್ರೌಢಶಾಲೆಯ ಶಿಕ್ಷಕರು ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಸಚಿವರ ಪತ್ನಿ ಭಾಗ್ಯಶ್ರೀ ಪಾಟೀಲ, ಪುತ್ರಿ ಸಂಯುಕ್ತಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನೀಲಮ್ಮ ಮೇಟಿ, ಸಾಹಿತಿ ಕಾ.ಹು. ಬಿಜಾಪುರ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಾಬಾಯಿ ನಾಗರಾಳ, ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ಸಜ್ಜನ, ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳಾವಾಡಿ, ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ಎಂ.ಎ. ಗುಳೇದಗುಡ್ಡ, ಎಂ.ಬಿ. ಹೆಬ್ಬಾಳಮ ಚನ್ನಬಸಪ್ಪಗೌಡ ಪಾಟೀಲ, ಸಾಹಿತಿಗಳಾದ ಅಬ್ಬಾಸ ಮೇಲಿನಮನಿ, ಮಹಾದೇವ ಬಸರಕೋಡ, ರಾಹುಲ ಕುಬಕಡ್ಡಿ, ಶಿವಾನಂದ ಅವಟಿ, ಬಸವರಾಜ ಕುಂಬಾರ ಇತರರು ಇದ್ದರು.
ಅಶೋಕ ಹಂಚಲಿ ಪ್ರಾಸ್ತವಿಕವಾಗಿ ಮಾತನಾಡಿದರು. ಜಿ.ಸಿ. ಮುತ್ತಲದಿನ್ನಿ ಸ್ವಾಗತಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು.

loading...