ಆ.1ರಿಂದ ದೆಹಲಿ, ಪುಣೆ, ತಿರುಪತಿಗೆ ವಿಮಾನ ಸೇವೆ

0
16
loading...

ಹುಬ್ಬಳ್ಳಿ : ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಸೇವೆ ಆರಂಭವಾಗಲಿದೆ. ಆಗಸ್ಟ್‌ನಿಂದ ದೆಹಲಿ, ಪುಣೆ, ತಿರುಪತಿಗೆ ವಿಮಾನ ಸೇವೆಯನ್ನು ಆರಂಭಿಸಲಾಗುತ್ತದೆ. ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಮಂಗಳವಾರ ಸ್ಟಾರ್ ಏರ್ಲೈನ್ಸ್‌ ಮಾಲೀಕರಾದ ಸಂಜಯ್ ಘೋದಾವತ್ ಜೊತೆ ಹುಬ್ಬಳ್ಳಿಯಲ್ಲಿ ಮಾತುಕತೆ ನಡೆಸಿದ್ದಾರೆ.

ಸ್ಟಾರ್ ಏರ್ಲೈನ್ಸ್ ಆಗಸ್ಟ್ 1ರಿಂದ ಪ್ರತಿನಿತ್ಯ ಹುಬ್ಬಳ್ಳಿಯಿಂದ ದೆಹಲಿ, ಪುಣೆ, ತಿರುಪತಿಗೆ ವಿಮಾನ ಸೇವೆಯನ್ನು ಆರಂಭಿಸಲಿದೆ. ಪ್ರಹ್ಲಾದ್ ಜೋಶಿ ಜೊತೆಗಿನ ಮಾತುಕತೆಯ ವೇಳೆ ವಿಮಾನ ಸೇವೆ ಆರಂಭಿಸಲು ಸಂಜಯ್ ಘೋದಾವತ್ ಒಪ್ಪಿಗೆ ನೀಡಿದ್ದಾರೆ.

ಹುಬ್ಬಳ್ಳಿ-ತಿರುಪತಿ ನಡುವೆ ವಿಮಾನ ಸೇವೆ ಆರಂಭವಾದರೆ ಕಡಿಮೆ ದರದಲ್ಲಿ ಜನರು ತಿರುಪತಿಗೆ ಪ್ರಯಾಣ ಬೆಳೆಸಿ ದೇವಾಲಯಕ್ಕೆ ಭೇಟಿ ನೀಡಲು ಅನುಕೂಲವಾಗಲಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಹೂಡಿಕೆ ಮಾಡಲು ಸಹ ಪ್ರಹ್ಲಾದ್ ಜೋಶಿ ಅವರು ಆಹ್ವಾನ ನೀಡಿದ್ದಾರೆ.

ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ತಿಂಗಳಿನಲ್ಲಿ ಸ್ಪೈಸ್ ಜೆಟ್ ಕೊಲಂಬೋ ಮತ್ತು ದುಬೈಗೆ ವಿಮಾನ ಹಾರಾಟವನ್ನು ಆರಂಭಿಸಲಿದೆ.

loading...