ಇಒ ಕೊಠಡಿ ಹೈಜಾಕ್‌ ಸಾರ್ವಜನಿಕರಿಂದ ಆರೋಪ

0
9
loading...

ಕನ್ನಡಮ್ಮ ಸುದ್ದಿ-ಕುಮಟಾ: ಶಾಸಕ ದಿನಕರ ಶೆಟ್ಟಿ ಅವರು ಇಲ್ಲಿನ ತಾಲೂಕು ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿಯ ಕೊಠಡಿಯನ್ನು ಹೈಜಾಕ್‌ ಮಾಡಿದ್ದಾರೆಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ತಾಪಂ ಕಚೇರಿಯಲ್ಲಿ ಇಒ ಅವರ ಕೊಠಡಿಯ ಎದುರಲ್ಲಿ ಶಾಸಕರಿಗಾಗಿ ಪ್ರತ್ಯೇಕ ಕೋಣೆಯನ್ನು ಮೀಸಲಿಡಿಸಲಾಗಿದೆ. ಶಾಸಕರ ಸರ್ಕಾರಿ ಕಚೇರಿ ಇದಾಗಿರುವುದರಿಂದ ಹಿಂದಿನ ಶಾಸಕರೆಲ್ಲ ಆಗಾಗಾ ಈ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದರು. ಈ ಕಚೇರಿಯ ನಿರ್ವಹಣೆಯನ್ನು ತಾಪಂ ವಹಿಸಿಕೊಳ್ಳುತ್ತಿರುವ ಪ್ರತಿತಿ ಇದೆ. ಆದರೆ ಕುಮಟಾದಲ್ಲಿ ದಿನಕರ ಶೆಟ್ಟಿ ಅವರು ಶಾಸಕರಾದ ಮೇಲೆ ಈ ಕೊಠಡಿಯಲ್ಲಿ ಮೂಲ ಸೌಕರ್ಯವಿಲ್ಲ ತಕರಾರು ತೆಗೆದಿದ್ದರಿಂದ ಶಾಸಕರ ಕೊಠಡಿಯನ್ನು ನವೀಕರಿಸುವ ಭರವಸೆ ನೀಡಿದ ಮೇಲೆ ಇಒ ಅವರ ಕೊಠಡಿಯನ್ನೆ ಶಾಸಕರು ತಮ್ಮ ಕಚೇರಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸುವ ಧೈರ್ಯವಿಲ್ಲದ ಇಒ ಅವರು ವಿದೇಯ ವಿದ್ಯಾರ್ಥಿಯಂತೆ ಉಪಾಧ್ಯಕ್ಷರ ಕೊಠಡಿಯಲ್ಲಿಯೇ ತಮಗೊಂದು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿಕೊಂಡು, ಸುಮಾರು ಒಂದುವರೆ ತಿಂಗಳಿಂದ ಅದೇ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.
ಶಾಸಕರ ಈ ಕ್ರಮವನ್ನು ಅವರ ಬೆಂಬಲಿಗರು ಸಮರ್ಥಿಸಿಕೊಳ್ಳುತ್ತಾರೆ. ತಾಪಂ ಇಒ ಅವರು ಹವಾನಿಯಂತ್ರಿತ ಕೊಠಡಿಯಲ್ಲಿ ಕಾರ್ಯನಿರ್ವಹಿಸುವಾಗ ಈ ಕ್ಷೇತ್ರದ ಶಾಸಕರು ಏನು ವ್ಯವಸ್ಥೆಯಿಲ್ಲದ ಕೊಠಡಿಯಲ್ಯಾಕಿರಬೇಕು. ಶಾಸಕರ ಕೊಠಡಿ ನಿವೀಕರಣಗೊಳ್ಳುವವರೆಗೂ ಇಒ ಅವರ ಕೊಠಡಿಯಲ್ಲಿ ಶಾಸಕರು ಸಾರ್ವಜನಿಕರಿಗೆ ಲಭ್ಯವಿರುತ್ತಾರೆಂಬುದು ಅವರ ವಾದವಾಗಿದೆ. ಆದರೆ ಕಾಂಗ್ರೆಸ್‌ ಪಕ್ಷದ ಮುಖಂಡರು ಮಾತ್ರ ಶಾಸಕರು ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವ ಮೂಲಕ ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಳೆದ ಅವಧಿಯಲ್ಲಿ ಐದು ವರ್ಷ ಆಡಳಿತ ನಡೆಸಿದ ನಮ್ಮ ಶಾಸಕರು ಇಂಥ ದರ್ಪವನ್ನು ಅಧಿಕಾರಿಗಳ ಮೇಲೆ ತೋರಿಸಿಲ್ಲ. ಅವರಿಗೆ ಮೀಸಲಿದ್ದ ಶಾಸಕರ ಕಚೇರಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದ್ದರು. ಆದರೆ ಹಾಲಿ ಶಾಸಕರು ಇಒ ಅವರ ಕೊಠಡಿಯನ್ನು ಹೈಜಾಕ್‌ ಮಾಡಿಕೊಂಡು ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಕಾಂಗ್ರೆಸ್‌ನರ ಆರೋಪವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕುಮಟಾ ತಾಪ ಇಒ ಮಹೇಶ ಕುರಿಯವರ್‌ ಅವರು, ಶಾಸಕರ ಕೊಠಡಿಯ ನವೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲಿಯ ವರೆಗೆ ನನ್ನ ಕೊಠಡಿಯನ್ನು ಶಾಸಕರ ಕರ್ತವ್ಯಕ್ಕಾಗಿ ಬಿಟ್ಟುಕೊಟ್ಟಿರುವುದಾಗಿ ತಿಳಿಸಿದರು.

loading...