ಉದ್ಯೋಗ ಸೃಷ್ಟಿಯಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರ: ಸಚಿವ ಶ್ರೀನಿವಾಸ್‌

0
10
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗವನ್ನು ಸೃಷ್ಟಿಸುವುದರಲ್ಲಿ ಸಣ್ಣ ಕೈಗಾರಿಕೆಗಳ ಕೊಡುಗೆ ಹೆಚ್ಚಿನದ್ದಾಗಿದೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಣ್ಣ ಕೈಗಾರಿಕೆ ಇಲಾಖೆಯ ಅಭಿವೃದ್ಧಿ ಪರಿಶೀಲನೆ ಹಾಗೂ ಜಿಲ್ಲೆಯ ಉದ್ಯಮಿಗಳೊಂದಿಗೆ ಬುಧವಾರದಂದು ಏರ್ಪಡಿಸಲಾದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವನ್ನು ಸೃಷ್ಟಿಸಲು ನೆರವಾಗುತ್ತಿವೆ. ಇಂತಹ ಸಣ್ಣ ಕೈಗಾರಿಕಾ ಕ್ಷೇತ್ರವನ್ನು ಬಲಪಡಿಸಲು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ, ಕೈಗಾರಿಕೆಗಳು ಹಾಗೂ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು ಎಂದರು.
ಸಣ್ಣ ಕೈಗಾರಿಕೆಗಳು ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ತೊಂದರೆ ಎದುರಿಸುತ್ತಿವೆ. ಕೈಗಾರಿಕಾ ನೀತಿಯ ಅನುಷ್ಠಾನದ ನಂತರ ಕೈಗಾರಿಕೆ ಕ್ಷೇತ್ರದ ಬೆಳವಣಿಗೆಯಲ್ಲಿ ಮಹತ್ವದ ಬದಲಾವಣೆ ಕಂಡುಬರುತ್ತಿದೆ. ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಸಬ್ಸಿಡಿ ನೀಡುವ ಯೋಜನೆಯಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಲಾಗಿದೆ. ಆದಷ್ಟು ಶೀಘ್ರ ಬಾಕಿ ಇರುವ ಸಬ್ಸಿಡಿ ಮೊತ್ತವನ್ನು ಬಿಡುಗಡೆಗೊಳಿಸಲು ರಾಜ್ಯ ಮಟ್ಟದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರ ಕ್ರಮ ವಹಿಸಲಾಗುವುದು ಎಂದರು.
ಬಳ್ಳಾರಿ ಜಿಲ್ಲೆಗೆ ಕೊಪ್ಪಳ ಜಿಲ್ಲೆ ಸಮೀಪವಿದ್ದು, ಇಲ್ಲಿಯೂ ಗಾರ್ಮೆಂಟ್ಸ್‌ ಉದ್ಯಮ ಬೆಳವಣಿಗೆಗೆ ಉತ್ತಮ ಅವಕಾಶವಿದೆ ಎಂದು ಹೇಳಿದರು.
ಗ್ರಾನೈಟ್‌ ಉದ್ಯಮಿ ಶ್ರೀನಿವಾಸ ಗುಪ್ತ, ವಿವಿಧ ಉದ್ಯೆಮೆಗಳಲ್ಲಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಪ್ರಶಾಂತ್‌, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ, ಕರ್ನಾಟಕ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಆರ್‌. ಸಿಂಗ್‌ ಸೇರಿದಂತೆ ಹಲವು ಅಧಿಕಾರಿಗಳು, ಉದ್ಯಮಿಗಳು ಭಾಗವಹಿಸಿದ್ದರು.
ಜಿಲ್ಲೆಯ ಬಸಾಪುರ ಬಳಿ ಅಭಿವೃದ್ಧಿಗೊಳಿಸಲಾಗುತ್ತಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಗಾರ್ಮೆಂಟ್‌ ಉದ್ಯಮಿಗಳಿಗೆ ಹಾಗೂ ಮಹಿಳೆಯರಿಗೂ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಈಗಾಗಲೆ 104 ಎಕರೆ ಅಭಿವೃದ್ಧಿಗೊಳಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಇದಕ್ಕಾಗಿ 44 ಕೋಟಿ ರೂ. ಅನುದಾನವನ್ನು ಸರ್ಕಾರ ಒದಗಿಸಿದೆ. ಅಲ್ಲಾನಗರ ಬಳಿ ನೂತನವಾಗಿ ಕೈಗಾರಿಕಾ ವಸಾಹತು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದ ಅವರು ಕುಷ್ಟಗಿಯ ಕೈಗಾರಿಕಾ ವಸಾಹತು ಸ್ಥಾಪನೆಗೆ ಈಗಾಗಲೆ ಭೂಮಿ ವಶಕ್ಕೆ ಪಡೆಯಲಾಗಿದ್ದು, ಆದರೆ ಕೆಲವು ತಾಂತ್ರಿಕ ತೊಂದರೆಯಿಂದಾಗಿ ಹಾಗೂ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವುದರಿಂದ, ಅಭಿವೃದ್ಧಿ ಕಾರ್ಯದಲ್ಲಿ ವಿಳಂಬವಾಗಿದೆ.
ಎಸ್‌.ಆರ್‌. ಶ್ರೀನಿವಾಸ್‌, ರಾಜ್ಯ ಸಣ್ಣ ಕೈಗಾರಿಕೆ ಇಲಾಖೆ ಸಚಿವ.

loading...