ಎಲ್ಲಿ ಒಳ್ಳೆಯದು ಇರುತ್ತದೆಯೋ ಅದನ್ನೆಲ್ಲವೂ ಸ್ವೀಕರಿಸಿ: ಸಿದ್ದೇಶ್ವರ ಶ್ರೀಗಳು

0
10
loading...

ವಿಜಯಪುರ : ಜಗತ್ತಿನಲ್ಲಿ ಎಲ್ಲಿ ಒಳ್ಳೆಯದು ಇರುತ್ತದೆಯೋ ಅದನ್ನೆಲ್ಲವೂ ಸ್ವೀಕರಿಸಬೇಕು. ಭಾರತ ಎಂದರೆ ಸಾಮಾನ್ಯ ಭಾರತವಲ್ಲ, ಅದು ಅನೇಕ ಅಪ್ರತಿಮ ವಿದ್ವಾಂಸರನ್ನು ವಿಶ್ವಕ್ಕೆ ನೀಡಿದ ಪುಣ್ಯನೆಲ ಎಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹೇಳಿದರು.
ವಿಜಯಪುರದ ಹೊರವಲಯದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಎಸ್‌-ಹೈಪರ್‌ ಮಾರ್ಟ್‌ ಉದ್ಘಾಟಿಸಿ ಆಶೀವರ್ಚನ ಸಂದೇಶ ನೀಡಿದ ಶ್ರೀಗಳು, ಇಂದಿಗೂ ಸಹ ಎಲ್ಲ ರಾಷ್ಟ್ರಗಳಲ್ಲಿ ಭಾರತೀಯರನ್ನು ಅತ್ಯಂತ ಗೌರವಾದರಗಳಿಂದ ಕಾಣಲಾಗುತ್ತದೆ ಎಂದರು.
ಉದ್ಯಮ ಸಂಸ್ಥೆಗಳನ್ನು ಸ್ಥಾಪಿಸಿ ಮುನ್ನಡೆಸುವುದು ಸುಲಭದ ಕೆಲಸವಲ್ಲ, ಅದೊಂದು ಸಾಹಸದ ಕೆಲಸವೇ ಸರಿ. ಉದ್ಯಮ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ಒದಗಿಸುವುದು ಪವಿತ್ರವಾದ ಕಾರ್ಯ ಎಂದರು.
ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದ ಫೋರ್ಡ್‌ ವಿಶ್ವದರ್ಜೆಯ ಕಾರುಗಳನ್ನು ತಯಾರಿಸುವ ಒಡೆಯನಾದ. ಆತನೇ ಹೇಳುವಂತೆ ಮನುಷ್ಯನಿಗೆ ಅಸಾಧ್ಯವೆಂಬುದು ಏನು ಇಲ್ಲ. ಫೋರ್ಡ್‌ನ ತತ್ವವನ್ನು ಅರಿತುಕೊಂಡ ಅಸಾಧ್ಯವೆಂಬುದು ಏನು ಇಲ್ಲ ಎಂಬುದನ್ನು ಯುವಜನತೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ನಗರ ಶಾಸಕ ಹಾಗೂ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಸ್ಥಳೀಯವಾಗಿಯೇ ಬಂಡವಾಳ ಹೂಡಿಕೆ ಮಾಡುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕುತ್ತವೆ ಎಂದರು. ಜನರಿಗೆ ಒಂದೇ ಸೂರಿನಡಿಯಲ್ಲಿ ಎಲ್ಲ ಉತ್ಪನ್ನಗಳು ಲಭ್ಯವಾಗುವ ದೃಷ್ಟಿಯಿಂದ ಎಸ್‌-ಹೈಪರ್‌ ಮಾರ್ಟ್‌ ಉತ್ತಮ ಸೇವೆ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಮೇಯರ್‌ ಸಂಗೀತಾ ಪೋಳ, ಸಂ.ಗು. ಸಜ್ಜನ, ವಿಜಯಕುಮಾರ ಡೋಣಿ, ಚಂದ್ರು ಚೌಧರಿ, ಗುರು ಗಚ್ಚಿನಮಠ, ರಾಘವ ಅಣ್ಣಿಗೇರಿ, ಪ್ರೇಮಾನಂದ ಬಿರಾದಾರ ಮೊದಲಾವರು ಉಪಸ್ಥಿತರಿದ್ದರು.

loading...