ಕನ್ನಡ ಸಾಹಿತ್ಯ ಲೋಕಕ್ಕೆ ಗಿರಡ್ಡಿ ಕೂಡುಗೆ ಅಪಾರ: ಸಿದ್ದಲಿಂಗ

0
7
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಹಿರಿಯ ಸಾಹಿತಿ, ವಿಮರ್ಶಕ ಡಾ. ಗಿರಡ್ಡಿ ಗೊವೀಂದರಾಜರು ಬಹುಮುಖಿ ವ್ಯಕ್ತಿತ್ವ ಹೊಂದಿದ್ದರು. ಅವರ ಸಂಪೂರ್ಣ ಬದುಕು, ಬರಹವನ್ನು ಇಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯವಾಗಬೇಕು ಎಂದು ಖ್ಯಾತ ಸಾಹಿತಿ ಸಿದ್ದಲಿಂಗಯ್ಯ ಪಟ್ಟಣಶೆಟ್ಟಿ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ಅನ್ನದಾನೇಶ್ವರ ಶಾಖಾಮಠದಲ್ಲಿ ಭಾನುವಾರ ದಿ.ಡಾ. ಗಿರಡ್ಡಿ ಗೊವೀಂದರಾಜ ಅಭಿಮಾನಿ ಬಳಗ, ತರುಣ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದು, ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ದಿ.ಡಾ. ಗಿರಡ್ಡಿ ಗೊವೀಂದರಾಜರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಅವರ ಸ್ಮರಣೆಯ ನೇಪದಲ್ಲಿ ಅವರ ಕೃತಿಗಳನ್ನು ಇಂದಿನ ಯುವ ಜನಾಂಗಕ್ಕೆ ಮುಟ್ಟಿಸುವ ಕಾರ್ಯವಾಗಬೇಕು. ಅದಕ್ಕಾಗಿ ಡಾ.ಗಿರಡ್ಡಿ ಗೊವೀಂದರಾಜ ಫೌಂಡೇಶನ್‌ ಸ್ಥಾಪನೆಗೆ ಈಗಾಗಲೇ ಚಿಂತನೆ ನಡೆದಿದ್ದು, ಹಲವಾರು ಸಭೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಪೌಂಡೇಶನ್‌ ಸ್ಥಾಪನೆಯೊಂದಿಗೆ, ಹತ್ತು ಹಲವು ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ಜನಿಸಿದ ಗಿರಡ್ಡಿಯವರು ವಿದ್ಯಾರ್ಥಿ ಜೀವನದಿಂದ ಪರಿಶ್ರಮ ಪಟ್ಟು ಅಧ್ಯಯನಗೈದು ಆಂಗ್ಲ ಮಾಧ್ಯಮ ಉಪನ್ಯಾಸಕರಾಗಿ, ಪ್ರಧ್ಯಾಪಕರಾಗಿ ಹಾಗೂ ಕ.ವಿ.ವಿಯ ಆಂಗ್ಲ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು ಎಂದರು.
ಅಧ್ಯಾಪನೆಯೊಂದಿಗೆ ಸಾಹಿತಿಗಳಾಗಿ, ಸಂಪಾದಕರಾಗಿ ಮತ್ತು ವಿಮರ್ಶಕರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೃತಿಗಳನ್ನು ನೀಡಿದ್ದಾರೆ. ಗಿರಡ್ಡಿಯವರು ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಮೇಲೆ ಹತ್ತು ಹಲವು ಸೃಜನಾತ್ಮಕ ಕಾರ್ಯಗಳನ್ನು ಮಾಡುವ ಮೂಲಕ ಅಕಾಡಮಿಯ ಗೌರವ ಹೆಚ್ಚಿಸಿದ್ದಾರೆ ಎಂದರು.
ಖ್ಯಾತ ಜಾನಪದ ವಿದ್ವಾಂಸ ಡಾ. ಸೋಮಶೇಖರ ಇಮ್ರಾಪೂರ ಮಾತನಾಡಿ, ಇಂದು ಭೌತಿಕವಾಗಿ ಡಾ.ಗಿರಡ್ಡಿ ಗೊವೀಂದರಾಜರು ನಮ್ಮೊಂದಿಗಿಲ್ಲದಿದ್ದರೂ ಅವರು ಕೃಷಿ ಮಾಡಿದ ಅನೇಕ ಮಾರ್ಗದರ್ಶಿ ಕೃತಿಗಳು ನಮ್ಮೊಂದಿಗಿವೆ. ಅವುಗಳನ್ನು ಮನನ ಮಾಡಿಕೊಂಡು ಕನ್ನಡ ಕಟ್ಟುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು. ಅಬ್ಬಿಗೇರಿ ಗ್ರಾಮದ ನೇಲದಲ್ಲಿ ಒಂದು ಮಹತ್ತರವಾದ ಶಕ್ತಿ ಅಡಗಿದ್ದು, ಈ ನೆಲದಲ್ಲಿ ಹುಟ್ಟಿದ ಅನೇಕರು ಖ್ಯಾತನಾಮರಾಗಿದ್ದಾರೆ. ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ರಂಗ ಭೂಮಿ ಕ್ಷೇತ್ರದಲ್ಲಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅದ್ಬುತ ಸಾಧನೆ ಮಾಡಿದ್ದಾರೆ. ಅವರಲ್ಲಿ ಡಾ.ಗಿರಡ್ಡಿ ಗೊವೀಂದರಾಜ ಅಗ್ರಗಣ್ಯರಾಗಿದ್ದಾರೆ. ಬಾಲ್ಯದಿಂದ ಅವರೊಂದಿಗೆ ಒಡನಾಟ ಹೊಂದಿದ್ದ ನನಗೆ, ಅವರ ಸರಳ, ಅಹಂಕಾರ ರಹಿತ ಹಾಗೂ ಸೂಕ್ಷ್ಮ ಸಂವೇಧನೆಗಳು ಹತ್ತಿರದಿಂದ ಅರಿಯಲು ಸಾಧ್ಯವಾಗಿತ್ತು. ಯಾವುದೇ ಕಾರಣಕ್ಕೂ ಇನ್ನೊಬ್ಬರ ಮನಸ್ಸಿಗೆ ನೋವಾಗುವ ರೀತಿ ನಡೆದುಕೊಂಡವರಲ್ಲ ಗಿರಡ್ಡಿ. ಅವರ ವ್ಯಕ್ತಿತ್ವ ಇಂದಿನ ಯುವ ಜನಾಂಗಕ್ಕೆ ದಾರಿ ದೀಪವಾಗಿದೆ. ಎಂತಹ ಎತ್ತರಕ್ಕೂ ಬೆಳೆದರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವ ವ್ಯಕ್ತಿತ್ವವನ್ನು ಹೊಂದಿದ್ದರು. ಸಂಘಟನೆಗೆ ಮತ್ತೊಂದು ಹೆಸರು ಗಿರಡ್ಡಿಯಾಗಿದ್ದರೂ, ಅದಕ್ಕೆ ಉದಾಹರಣೆ ಎಂದರೆ ಧಾರವಾಡ ಸಾಹಿತ್ಯ ಸಂಭ್ರಮ. ಅದನ್ನು ಪ್ರಾರಂಭಿಸಿ, ಅದನ್ನು ಅತ್ಯಂತ ಯಶಸ್ವಿ ಸಾಹಿತ್ಯ ಕಾರ್ಯಕ್ರಮವಾಗಿಸಿದ್ದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಬಿ.ಎಸ್‌. ದಕ್ಷಿಣಮೂರ್ತಿ, ನಿವೃತ್ತ ಪ್ರಾಚಾರ್ಯ ಕೆ.ಬಿ. ತವಳಗೇರಿ, ಜಿ.ಬಿ. ಪಾಟೀಲ, ನಿವೃತ್ತ ಉಪನ್ಯಾಸಕ ಬಿ.ವಿ. ಚನ್ನಪ್ಪಗೌಡ್ರ, ಪೋ. ಮಹೇಶ ತಿಪಶೆಟ್ಟಿ ನುಡಿ ನಮನ ಸಲ್ಲಿಸಿದರು. ಡಾ.ಸಿದ್ದು ಯಾಪಲಪರವಿ, ಡಾ. ಆರ್‌.ಬಿ. ಬಸವರಡ್ಡೇರ, ಸೋಮಣ್ಣ ಹರ್ಲಾಪೂರ, ಜಿ.ಬಿ. ಕುಲಕರ್ಣಿ, ಎಂ.ಎಸ್‌. ಚಿನ್ನೂರ, ಶಿವಪ್ಪ ರಾಟಿಮನಿ, ಬಸಯ್ಯ ಶಿರೋಳ, ಎಂ.ಬಿ. ತಳಬಾಳ, ಸೇರಿದಂತೆ ಇತರರಿದ್ದರು. ಷಣ್ಮೂಖಪ್ಪ ಸಿದ್ನೆಕೊಪ್ಪ ಸ್ವಾಗತಿಸಿದರು. ಎಂ.ಎಂ. ಗುಗ್ಗರಿ ನಿರೂಪಿಸಿದರು. ಐ.ಬಿ. ಒಂಟೇಲಿ ವಂದಿಸಿದರು.

loading...