ಕಪಿಲಾ ಬಾವಿ ಜೀರ್ಣೋದ್ಧಾರ ಚಟುವಟಿಕೆ ಪರಿಶೀಲಿಸಿದ ಶಾಸಕ ಶೆಟ್ಟರ್

0
7
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಹುಬ್ಬಳ್ಳಿ-ಕಾರವಾರ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಗಿದ್ದು, ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮೊದಲೇ ನಿರ್ಮಾಣ ಕಾರ್ಯಾದೇಶ ನೀಡಲಾಗುತ್ತದೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ನಗರದ ಶ್ರೀನಗರದ ಕಪಿಲಾ ಬಾವಿ ಜೀರ್ಣೋದ್ಧಾರ ಚಟುವಟಿಕೆ ಬಗ್ಗೆ ಪರಿಶೀಲನೆ ನಡೆಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ. ಚನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗಲಿರುವ ಫ್ಲೈಓವರ್ ವಿನ್ಯಾಸ ಇನ್ನೂ ಅಂತಿಮಗೊಂಡಿಲ್ಲ. ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ ಅವರು ಸಹ ಈಗ ನೀಡಿರುವ ಪ್ರಸ್ತಾವನೆಯಲ್ಲಿ ಬದಲಾವಣೆ ಆಗಬೇಕು ಎಂದು ಸೂಚನೆ ನೀಡಿದ್ದಾರೆ. ಉಳಿದಂತೆ ವಿಸ್ತೃತ ಯೋಜನೆ ವರದಿ ಸಿದ್ಧಗೊಂಡಿದೆ ಎಂದು ತಿಳಿಸಿದರು.
ಹೊರ ವರ್ತುಲ ರಸ್ತೆಗಳ ನಿರ್ಮಾಣ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿದೆ. ವಿಜಯಪುರ ಗದಗ ಹಾಗೂ ಬೆಂಗಳೂರು ಕಾರವಾರ ರಸ್ತೆ ಸಂಪರ್ಕಿಸುವ ಹೊರ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದೆ. ವಿಜಯಪುರ ಧಾರವಾಡ ರಸ್ತೆಯ ಸರ್ವೇ ಕಾರ್ಯ ನಡೆಯುತ್ತಿದೆ. ಅದೂ ಪೂರ್ಣಗೊಂಡರೆ ಹೊರ ವರ್ತುಲ ರಸ್ತೆ ಪೂರ್ಣಗೊಳ್ಳಲಿದೆ ಎಂದರು. ಬಿಆರ್‍ಟಿಸಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೈರಿದೇವರಕೊಪ್ಪ ಸಮೀಪ ಜಾಗದ ಅವಶ್ಯಕತೆ ಇದ್ದು, ಅಲ್ಲಿ ದರ್ಗಾದವರು ಜಾಗ ಬಿಟ್ಟುಕೊಡುತ್ತಿಲ್ಲ. ಅಧಿಕಾರಿಗಳು ಸಹ ಆ ಸಮಸ್ಯೆಯನ್ನು ಬಗೆಹರಿಸಲು ಆಸಕ್ತಿ ತೋರುತ್ತಿಲ್ಲ. ಇದೇ ಕಾಮಗಾರಿಗಾಗಿ ಹಿಂದೂ ಶ್ರದ್ಧಾ ಕೇಂದ್ರದವರು ಜಾಗಬಿಟ್ಟುಕೊಟ್ಟಿದ್ದಾರೆ. ಅಭಿವೃದ್ಧಿಯ ವಿಷಯ ಬಂದಾಗ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಬಿಆರ್‍ಟಿಎಸ್ ಕಾಮಗಾರಿಯ ಪರಿಣಾಮ ಕೆಲವು ರಸ್ತೆಗಳು ಹದಗೆಟ್ಟಿವೆ. ಅವುಗಳನ್ನು ರಿಪೇರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಸಹ ನೀಡಿದ್ದೇನೆ. ಆದರೆ ಅವರು ಮಾಡುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಸಹ ಅದೇ ಹಾಳಾದ ರಸ್ತೆಯಲ್ಲಿಯೇ ಓಡಾಡುತ್ತಿದ್ದರೂ ರಿಪೇರಿ ಮಾಡಲು ಮನಸ್ಸು ಮಾಡುತ್ತಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಗುಂಡಿ ಬಿದ್ದಿರುವ ರಸ್ತೆಗಳನ್ನು ರಿಪೇರಿ ಮಾಡಬೇಕು ಎಂದರು.

loading...