ಕಾರ್ಮಿಕರಿಗೆ ನೇರ ವೇತನ ಪಾವತಿಸುವಂತೆ ಆಗ್ರಹಿಸಿ ಪ್ರತಿಭಟನೆ

0
10
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಮಾನವ ಸಂಪನ್ಮೂಲ ಸರಬರಾಜಿಗೆ ಕರೆದಿರುವ ಟೆಂಡರ್‌ನ್ನು ತಕ್ಷಣ ರದ್ದುಗೊಳಿಸಿ ರಾಜ್ಯದ ಪೌರ ಕಾರ್ಮಿಕರಿಗೆ ವೇತನ ಪಾವತಿಸಿದಂತೆ ನೇರವಾಗಿ ಕಾರ್ಮಿಕರಿಗೆ ವೇತನ ನೀಡಬೇಕು ಎಂದು ಆಗ್ರಹಿಸಿ ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಟಾಸ್ಕ್‌ ವರ್ಕ್‌ ನೌಕರರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸೋಮವಾರ ತಾಲೂಕಿನ ಮುನಿರಾಬಾದ್‌ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಸಚಿವ ವೆಂಕಟರಾವ್‌ ನಾಡಗೌಡ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಅಚ್ಚುಕಟ್ಟು ಪ್ರದೇಶಗಳಿಗೆ ನೀರು ನಿರ್ವಹಣೆಗಾಗಿ ನೀರಾವರಿ ಕೈಪಿಡಿಯಂತೆ ಗ್ಯಾಂಗ್‌ಮನ್‌ , ಸೇರಿದಂತೆ ಅನೇಕ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ. ಆದರೆ ಇವರ ವೇತನ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಈವರೆಗೂ ಯಾವುದೇ ಟೆಂಡರ್‌ ಇಲ್ಲದೇ ಗುತ್ತಿಗೆದಾರರ ಮೂಲಕ ವೇತನ ಪಾವತಿಸುತ್ತಾ ವರ್ಷವಿಡಿ ಕೆಲಸ ನೀಡುತ್ತಾ ಬಂದಿದ್ದರು. ಆದರೆ ಈಗಿರುವ ವ್ಯವಸ್ಥಾಪಕ ನಿರ್ದೇಶಕರು ಗುತ್ತಿಗೆ ಕಾರ್ಮಿಕರ ರದ್ದತಿ ಮತ್ತು ನಿಯಂತ್ರಣ ಕಾಯ್ದೆ 1970ರ 10 (1)ಮತ್ತಯ (2) ಕಾಯ್ದೆಯನ್ನು ಉಲ್ಲಂಘಿಸಿ ಟೆಂಡರ್‌ ಮಾಡಲಾಗಿದೆ. ಇದರಿಂದ ಸುಮಾರು ವರ್ಷಗಳಿಂದ ಗುತ್ತಿಗೆ ಹೊರಗುತ್ತಿಗೆ ಆಧಾರದ ಮೇಲೆ ಇಲಾಖೆಯಲ್ಲಿ ಕಾರ್ಯನಿರ್ವಯಿಸುತ್ತಾ ಬಂದಿರುವ ಕಾರ್ಮಿಕರ ಬದುಕು ಬೀದಿ ಪಾಲಾಗಿದೆ. ಅದಲ್ಲದೇ ನೀರುದ್ಯೋಗ ಸಮಸ್ಯೆ ಉದ್ಬವವಾಗುತ್ತದೆ. ಈ ಟೆಂಡರ್‌ನಿಂದ ಸರಕಾರದ ಬೊಕ್ಕಸಕ್ಕೆ ಕೊಟ್ಯಾಂತರ ರೂ. ಹೊರಬೀಳುತ್ತದೆ. ಆದ್ದರಿಂದ ಕಾರ್ಮಿಕರುಗಳಿಗೆ ಕೆಲಸ ನೀಡುದ ಟೆಂಡರ್‌ನ್ನು ರದ್ದು ಪಡಿಸಿ ಯಾವುದೇ ಮದ್ಯವರ್ತಿಗಳನ್ನು ನೆಮಿಸದೇ ನೇರವಾಗಿ ವೇತನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರು ನಿರ್ವಹಿಸುವ ಹುದ್ದೆಗಳ ಅನುಗುಣವಾಗಿ ಕಾರ್ಮಿಕ ಕಾಯ್ದೆಯಂತೆ ಕನಿಷ್ಠ ವೇತನ ನೀಡಬೇಕು. ಪ್ರತಿ ವರ್ಷದಂತೆ ಕಾರ್ಮಿಕರುಗಳಿಗೆ ವರ್ಷಪೂರ್ತಿ ಕೆಲಸ ನೀಡಬೇಕು. ಕಾರ್ಮಿಕರಿಗೆ ವೇತನ ಪಾವತಿ ಕಾಯ್ದೆಯಂತೆ ಪ್ರತಿ ತಿಂಗಳು 7ನೇ ದಿನಾಂಕದೊಳಗಾಗಿ ವೇತನ ಪಾವತಿಸಬೇಕು. ಕರ್ನಾಟಕ ಸೇವಾ ನಿಯಮ ಬಾಹಿರವಾಗಿ ಒಂದೇ ಸ್ಥಳದಲ್ಲಿ ಅವಧಿ ಮೀರಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬೇರಡೆಗೆ ವರ್ಗಗೊಳಿಸಬೇಕು. ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ವಲಯದ ಯರಮರಸ್‌ ವೃತ್ತದ ಕಾರ್ಮಿಕರುಗಳು ತಮ್ಮ ನಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸಿದ 45 ದಿನಗಳ ಕಾರ್ಮಿಕರ ಮುಷ್ಕರದ ಅವಧಿಯ ವೇತನವನ್ನು ಕಾರ್ಮಿಕರಿಗೆ ತಕ್ಷಣ ಭರಿಸಬೇಕು ಎಂದು ಆಗ್ರಹಿಸಿದರು.
ಮಾತಿನ ಚಕಮಕಿ: ಬೇಡಿಕೆಗಳ್ನು ಈಡೆರಿಸುವಂತೆ ನಡೆಸಿದ ಕಾರ್ಮಿಕರ ಮನವಿಯನ್ನು ಸಚಿವ ವೆಂಕಟರಾವ್‌ ನಾಡಗೌಡ ಅವರು ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಕಾರ್ಮಿಕರು ನೀರಾವರಿ ಇಲಾಖೆಗೆ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪ್ರತಿಭಟನಾಕಾರರ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದರ ಕುರಿತು ನೀರಾವರಿ ಇಲಾಖೆ ಗೇಟಿನ ಹೊರಗಡೆ ಪ್ರತಿಭಟನೆ ನಡೆಸುತ್ತಾ ಕುಳಿತ ಕಾರ್ಮಿಕರ ಧರಣಿಗೆ ಸ್ಪಂಧಿಸದೇ ನೇರವಾಗಿ ಸಭೆಗೆ ಹಾಜರಾದ ಸಚಿವ ನಾಡಗೌಡ ವಿರುದ್ದ ಕಾರ್ಮಿಕರು ಆಕ್ರೋಶಗೊಂಡು ಗೇಟ್‌ ಮುರಿದು ಸಭೆಗೆ ನುಗ್ಗಲು ಯತ್ನಿಸಿದರು. ಆದರೆ ಸಭೆಯ ಹೊರಗಡೆ ಪೊಲೀಸರು ಇದನ್ನು ತಡೆದಾಗ ಪ್ರತಿಭಟನಾ ಕಾರರ ಪೊಲೀಸರ ಮಧ್ಯೆ ಮಾತಿನ ಚಕಮಖಿ ನಡೆದು ಪರತಿಭಟನೆ ವಿಕೋಪಕ್ಕೆ ತಿರುಗಿತು.
ನಂತರ ಸ್ಥಳಕ್ಕೆ ಜಿಲ್ಲಾ ಎಸ್ಪಿ ಡಾ. ಅನೂಪಶೆಟ್ಟಿ ಆಗಮಿಸಿ ಸಚಿವರನ್ನು ಕರೆದುಕೊಂಡು ಮನವಿ ನೀಡಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದಾಗ ಪ್ರತಿಭಟನೆಯನ್ನು ಶಾಂತರೀತಿಯಿಂದ ನಡೆಸಿ ಮನವಿ ನೀಡಿದರು.

loading...