ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹರಿಸಿ

0
10
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಅನುಷ್ಠಾನಗೊಳಿಸಲಾಗಿರುವ ಹಳಿಯಾಳ ಪಟ್ಟಣದಲ್ಲಿ ಈ ಯೋಜನೆಯಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆ-ತೊಡಕುಗಳನ್ನು ನಿವಾರಿಸುವ ಉದ್ದೇಶದಿಂದ ಈ ವಿಷಯದ ಬಗ್ಗೆ ವಿಶೇಷ ಸಭೆಯು ಸೋಮವಾರ ಜರುಗಿತು.
ಪುರಸಭೆ ಸಭಾಭವನದಲ್ಲಿ ಅಧ್ಯಕ್ಷ ಶಂಕರ ಬೆಳಗಾಂವಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಡಿಯುವ ಹಾಗೂ ನಿತ್ಯ ಬಳಕೆಯ ನೀರು ಸರಬರಾಜು ನಿರ್ವಹಣೆಯ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಯಿತು. 24*7 ನೀರು ಸರಬರಾಜು ವ್ಯವಸ್ಥೆಯಲ್ಲಿ ಪುರಸಭೆಯ ಹಾಗೂ ಅದನ್ನು ಅನುಷ್ಠಾನಗೊಳಿಸಿರುವ ಏಜೆನ್ಸಿಯ ಪಾತ್ರದ ಬಗ್ಗೆ ಹಾಗೂ ನಲ್ಲಿ ಬಳಕೆದಾರರಿಗೆ ಆಗುತ್ತಿರುವ ಅನಾನುಕೂಲತೆಗಳ ಬಗ್ಗೆ ಪುರಸಭೆಯ ಹಲವಾರು ಸದಸ್ಯರು ಮತ್ತು ಹಿರಿಯ ನಾಗರಿಕರ ಸಂಘ, ಜಯಕರ್ನಾಟಕ ಮೊದಲಾದ ಸಂಘ-ಸಂಸ್ಥೆಗಳು, ಸಾರ್ವಜನಿಕರು ಆಕ್ಷೇಪ ಎತ್ತುತ್ತಿರುವುದರಿಂದ ಈ ಸಭೆ ಏರ್ಪಡಿಸಲಾಗಿತ್ತು.
ನೀರು ಬಳಕೆಯ ಬಿಲ್‌ ತುಂಬಲು ಈ ಹಿಂದೆ ಗ್ರಾಹಕರ ಸೇವಾ ಕೇಂದ್ರದಲ್ಲಿ ಅವಕಾಶವಿತ್ತು. ಆದರೆ ಸರ್ಕಾರದ ಹೊಸ ನಿಯಮಾವಳಿಯಂತೆ ಆನ್‌ಲೈನ್‌ ಚನಲ್‌ ಮುದ್ರಿಸಿಕೊಂಡು ನಂತರ ಸಿಂಡಿಕೇಟ್‌ ಬ್ಯಾಂಕ್‌ಗೆ ತೆರಳಿ ಅಲ್ಲಿ ಸರದಿ ಸಾಲಿನಲ್ಲಿ ಬಿಲ್‌ ತುಂಬುವ ಆದೇಶದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದೆ. ಹಾಗೂ ಅನವಶ್ಯಕವಾಗಿ ಹೆಚ್ಚಿನ ಸಮಯ ವ್ಯರ್ಥಗೊಳ್ಳುತ್ತಿದೆ. ಹೀಗಾಗಿ ಬಿಲ್‌ ತುಂಬುವ ವ್ಯವಸ್ಥೆಯನ್ನು ಸರಳಿಕರಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ವ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ಈ ವಿಷಯದ ಸಾಧಕ-ಬಾಧಕಗಳನ್ನು ಚರ್ಚಿಸಲಾಯಿತು. ಹಾಗೂ ಸರ್ಕಾರದ ನಿಯಮವನ್ನು ಪಾಲಿಸುವುದರ ಜೊತೆಗೆ ಗ್ರಾಹಕರಿಗೆ ಸೇವೆ ಒದಗಿಸುವ ದೃಷ್ಟಿಯಿಂದ ಕೌಂಟರ್‌ ಒಂದನ್ನು ಆರಂಭಿಸಲು ನಿರ್ಧರಿಸಲಾಯಿತು.
ಆಡಳಿತ ಪಕ್ಷದ ಸುರೇಶ ತಳವಾರ ಹಾಗೂ ಪ್ರತಿಪಕ್ಷದವರಾದ ಹಿರಿಯ ಸದಸ್ಯ ಶ್ರೀಕಾಂತ ಹೂಲಿ ಗಮನಸೆಳೆಯುವ ವಿಷಯವನ್ನು ಮಂಡಿಸಿದರು. ನೀರು ಬಳಕೆಯ ಬಗ್ಗೆ ಬಿಲ್‌ ಹೆಚ್ಚಿಗೆ ಬರುತ್ತಿರುವ ಕಾರಣ ಗ್ರಾಹಕರಿಗೆ ಹೊರೆಯಾಗುತ್ತಿದೆ. ಹಳಿಯಾಳ ಪಟ್ಟಣವನ್ನು ಇತರ ನಗರ ಪ್ರದೇಶಗಳಿಗೆ ಹೋಲಿಸಿ ದರ ನಿಗದಿಪಡಿಸುವುದು ಸರಿಯಲ್ಲ. ಹೀಗಾಗಿ ಈ ಬಗ್ಗೆ ಗ್ರಾಹಕಸ್ನೇಹಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು. ಈ ಬಗ್ಗೆ ಸ್ಪಂದಿಸಿದ ಅಧ್ಯಕ್ಷರು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ವಿಶೇಷ ಮನವಿ ರವಾನಿಸುವಂತೆ ಮುಖ್ಯಾಧಿಕಾರಿ ಕೇಶವ ಚೌಗುಲೆ ಅವರಿಗೆ ಸೂಚಿಸಿದರು.
ಆಡಳಿತ ಪಕ್ಷದ ಇನ್ನೋರ್ವ ಸದಸ್ಯ ಸತ್ಯಜೀತ ಗಿರಿ ಮಾತನಾಡುತ್ತಾ ಸಾರ್ವಜನಿಕ ಸ್ಥಳಗಳಾದ ವಿದ್ಯಾಲಯಗಳು, ಮಂದಿರ-ಮಸೀದಿ-ಚರ್ಚ್‌ ಮೊದಲಾದ ಶೃದ್ಧಾಕೇಂದ್ರಗಳು ಉಚಿತವಾಗಿ ಇಲ್ಲವೇ ರಿಯಾಯತಿ ದರದಲ್ಲಿ ನೀರು ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಈ ಬೇಡಿಕೆಗೆ ಒಪ್ಪಿಗೆ ಸೂಚಿಸಿ ಠರಾಯಿಸಲಾಯಿತು. ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಸದಸ್ಯರಾದ ಸುಬಾನಿ ಹುಬ್ಬಳ್ಳಿ, ಪ್ರೇಮಾ ತೋರಣಗಟ್ಟಿ, ಮಾಲಾ ಬೃಗಾಂಜಾ ಮೊದಲಾದವರು ಸಹ ಮಾತನಾಡುತ್ತಾ ನಾಗರಿಕರಿಗೆ ಹೊರೆಯಾಗದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಶುದ್ಧ ನೀರನ್ನು ಪೂರೈಸುವಂತೆ ಕೋರಿದರು. ಸ್ಥಾಯಿ ಸಮಿತಿ ಚೇರಮನ್‌ ಗಾಯತ್ರಿ ನೀಲಜಕರ, ಸದಸ್ಯರಾದ ಫಯಾಜ್‌ ಶೇಖ, ಬಾಬು ಮಾದರ, ಶ್ರೀದೇವಿ ಯಡೋಗಿ, ಮಾಧವಿ ಬೆಳಗಾಂವಕರ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮುಖ್ಯಾಧಿಕಾರಿ ಕೇಶವ ಚೌಗುಲೆ, ಇಂಜಿನೀಯರ್‌ ಹರೀಶ ಹಾಗೂ ನಿರಂತರ ನೀರು ಸರಬರಾಜು ಏಜೆನ್ಸಿಯ ಇಂಜಿನೀಯರ್‌, ಕಂದಾಯ ಅಧಿಕಾರಿ ಅಶೋಕ ಸಾಳೆನ್ನವರ ಇವರುಗಳು ನಿರಂತರ ನೀರು ಸರಬರಾಜು ಯೋಜನೆಯ ಮಂಜೂರಾತಿ, ಕಾರ್ಯವಿಧಾನ, ನಿರ್ವಹಣೆಯ ಜವಾಬ್ದಾರಿಗಳು, ಸರ್ಕಾರಿ ನಿಯಮಾವಳಿಗಳು, ಕಂದಾಯ ಸಂಗ್ರಹ ಮೊದಲಾದ ವಿಷಯಗಳ ಬಗ್ಗೆ ವಿವರಿಸಿದರು.

loading...