ಕೃಷಿ ಭೂಮಿಗೆ ನುಗ್ಗಿದ ನೈತಿ ಹಳ್ಳ: ಆತಂಕದಲ್ಲಿ ಕೃಷಿಕ

0
9
loading...

ದೀಪಕ ಶೆಟ್ಟಿ
ಕಾರವಾರ: ತಾಲೂಕಿನ ಕಡಿಯೆ ಮತ್ತು ನೈತಿ ಗ್ರಾಮಗಳ ನಡುವೆ ಹರಿಯುತ್ತಿರುವ ಹಳ್ಳ ಇಡೀ ಕೃಷಿ ಭೂಮಿಯನ್ನೆ ಅಕ್ರಮಿಸಿಕೊಂಡು ಹರಿಯುತ್ತಿರುವುದು ರೈತರಿಗೆ ಆತಂಕ ಸೃಷ್ಠಿಸಿದೆ. ತಾಲೂಕಿನ ಬಹುತೇಕ ಗ್ರಾಮೀಣ ಭಾಗಗಳಲ್ಲಿ ರೈತರು ಕೃಷಿಯಿಂದ ವಿಮುಖರಾಗಿ ಕೃಷಿಭೂಮಿ ಪಾಳು ಬೀಳುತ್ತಿದೆ. ಅಂಥದ್ದರಲ್ಲಿ ಇನ್ನೊಂದೆಡೆ ಕಾಳಿ ನದಿಗೆ ಸೇರುವ ಹಳ್ಳವೊಂದು ನಿರಂತರ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರ ಭೂಮಿಯನ್ನೇ ಆಪೋಷಣೆ ಮಾಡುವುದರ ಮೂಲಕ ರೈತರನ್ನು ನಿರ್ಗತಿಕರನ್ನಾಗಿಸುತ್ತಿದೆ. ತಾಲೂಕಿನ ಕಡಿಯೆ ಹಾಗೂ ನೈತಿ ಗ್ರಾಮಗಳ ನಡುವೆ ಈ ನೈತಿ ಹಳ್ಳ ಹರಿಯುತ್ತಿದೆ. ಇದಕ್ಕೆ ಕಾಳಿ ನದಿಯ ಉಪನದಿ ಎಂತಲೂ ಕರೆಯಲಾಗುತ್ತಿದೆ. ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಈ ಹಳ್ಳವು ಗ್ರಾಮಸ್ಥರ ಕೃಷಿ ಭೂಮಿಯನ್ನು ಕಬಳಿಸುತ್ತಲೇ ಬರುತ್ತಿದೆ. ಕೃಷಿ ಅವಲಂಬಿಸಿ ಬದುಕುವ ಇಲ್ಲಿನ ಜನರ ಪಾಲಿಗೆ ಈ ಹಳ್ಳವು ಕಣ್ಣೀರಾಗಿ ಕಾಡುತ್ತಿದೆ. ಆದರೆ ನೆರವಿಗಾಗಿ ಸಂಬಂಧಪಟ್ಟವರ ಮೊರೆ ಹೋದರೂ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ ಎಂಬುದು ಸ್ಥಳೀಯರು ನೋವು.
ಕಡಿಯೆ ಮತ್ತು ನೈತಿ ಈ ಎರಡೂ ಗ್ರಾಮಗಳು ಕೆರವಡಿ ಪಂಚಾಯ್ತಿ ವ್ಯಾಪ್ತಿಗೆ ಸೇರುತ್ತವೆ. ಈ ಭಾಗದಲ್ಲಿ ಮಳೆಗಾಲದಲ್ಲಿ ತುಂಬಿ ಹರಿಯುವ ನೈತಿ ಹಳ್ಳವನ್ನು ಕಾಣಿಕೆ ಹಳ್ಳ ಎಂದೂ ಕರೆಯಲಾಗುತ್ತದೆ. ನೈತಿ ಹಾಗೂ ಕಡಿಯೆ ಗ್ರಾಮವನ್ನು ವಿಭಜಿಸುವ ಈ ಹಳ್ಳವು ಕಳೆದ 10-20 ವರ್ಷಗಳಿಂದ ತನ್ನ ಮೂಲ ಹಾದಿಯನ್ನು ಬಿಟ್ಟು ರೈತರ ಜಮೀನಿನಲ್ಲಿ ಹರಿಯುತ್ತಿದೆ. ಹೀಗಾಗಿ ಪ್ರತಿ ಮಳೆಗಾಲಕ್ಕೆ ಸುಮಾರು ನಾಲ್ಕು ಎಕರೆಗಳಷ್ಟು ಕೃಷಿ ಭೂಮಿಯು ನೀರುಪಾಲಾಗುತ್ತಿದೆ ಎಂದು ಸ್ಥಳೀಯ ರೈತರು ಸಂಕಷ್ಟ ತೋಡಿಕೊಳ್ಳುತ್ತಾರೆ. ಸಹ್ಯಾದ್ರಿಯ ತೊಪ್ಪಲಿನಿಂದ ಹರಿದು ಬಂದು ಕಾಳಿ ನದಿ ಸೇರುವ ಈ ನೈತಿ ಹಳ್ಳದ ದಂಡೆಯ ಮೇಲೆ ಸರ್ವೆ ನಂ. 45, 46 ಹಾಗೂ 47ಕ್ಕೆ ಸಂಬಂಧಿಸಿದ 15 ಎಕರೆಗೂ ಹೆಚ್ಚಿನ ಜಮೀನು ಇದೆ. ಇಲ್ಲಿ ಹೆಚ್ಚಾಗಿ ಶೇಂಗಾ, ಕಲ್ಲಂಗಡಿಯನ್ನು ಬೆಳೆಯಲಾಗುತ್ತದೆ. ಆದರೆ ಪ್ರತಿ ವರ್ಷ ಹಳ್ಳವು ಜಮೀನು ಕಬಳಿಸುತ್ತಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರೈತ ರಮೇಶ್‌ ನಾಯ್ಕ ಎನ್ನುವವರ ಎರಡು ಎಕರೆ ಭೂಮಿಯು ನೀರುಪಾಲಾಗಿದೆ. ಉಲ್ಲಾಸ ನಾಯ್ಕ ಅವರ ಭೂಮಿ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಗೋವಿಂದ ಮೇತ್ರಿ ಅವರ ಅರ್ಧಭೂಮಿ ಮಾತ್ರ ಈಗ ಉಳಿದುಕೊಂಡಿದೆ. ಅದೇ ರೀತಿ ಮೋಹನ ಕಾಮತ್‌, ಸಂತೋಷ್‌ ನಾಯ್ಕ, ಬಾಲಚಂದ್ರ ಕಾಮತ್‌, ನಾಗೇಶ ಶೆಟ್ಟಿ ಸೇರಿದಂತೆ ಹಲವು ರೈತರ ಜಮೀನನ್ನು ಹಳ್ಳ ನುಂಗಿ ಹಾಕಿದೆ ಎಂದು ಸ್ಥಳೀಯ ರೈತ ಗಣಪತಿ ನಾಯ್ಕ ಮಾಹಿತಿ ನೀಡುತ್ತಾರೆ. ನೈತಿ ಹಳ್ಳವು ಪ್ರತಿ ಮಳೆಗಾಲದಲ್ಲಿ ತುಂಬಿ ರಭಸವಾಗಿ ಹರಿದು ಬರುವಾಗ ತನ್ನ ದಾರಿ ಬದಲಿಸುತ್ತದೆ. ಹಳ್ಳವು ಅದರ ಮಾರ್ಗದಲ್ಲೇ ಹರಿಯುವಂತೆ ಮಾಡಬೇಕು. ಅದಕ್ಕೆ ಕಾಲುವೆ ನಿರ್ಮಿಸಬೇಕು. ಕೃಷಿ ಭೂಮಿಯ ದಂಡೆಯ ಉದ್ದಕ್ಕೂ ತಡೆಗೋಡೆ ನಿರ್ಮಾಣ ಅಥವಾ ಪಿಚ್ಚಿಂಗ್‌ ಮಾಡುವ ಕಾರ್ಯಕ್ಕೆ ಸ್ಥಳೀಯ ಆಡಳಿತ ಮುಂದಾಗಬೇಕು. ಸರಕಾರ ನಮ್ಮ ಭೂಮಿಯನ್ನು ಉಳಿಸಿಕೊಡಬೇಕು ಎಂದು ಸ್ಥಳೀಯರಾದ ಶ್ರೀಪಾದ ಥಾಕು ಗೌಡ, ಗೋವಿಂದ ಮೇತ್ರಿ, ಬಾಲಚಂದ್ರ ಕಾಮತ್‌ ಮುಂತಾದವರು ಒತ್ತಾಯಿಸುತ್ತಾರೆ. ನೈತಿ ಹಳ್ಳವು ಕಾಳಿ ನದಿಯ ಉಪನದಿಯಾಗಿದ್ದು,ಹಳ್ಳ ಹರಿದು ಬರುವ ಮೂಲ ನೆಲೆಯ ಮೇಲ್ಭಾಗದಲ್ಲಿ ಕಾಣಿಕೆ ಹಳ್ಳವೆಂದು,ನಂತರ ಕೆಳಭಾಗಕ್ಕೆ ಹರಿದು ಬರುತ್ತಿದ್ದಂತೆ, ಕಡಿಯೆ ಗ್ರಾಮದಲ್ಲಿ ನೈತಿ ಹಳ್ಳವಾಗಿ ಮುಂದುವರಿಯುತ್ತದೆ. ಮೊದಲಿನಿಂದಲೂ ಎರಡೂ ಗ್ರಾಮಗಳನ್ನು ವಿಭಜಿಸುತ್ತಿದ್ದ ಈ ಹಳ್ಳವು ಇತ್ತೀಚಿನ ವರ್ಷಗಳಲ್ಲಿ ರೈತರ ಜಮೀನುಗಳತ್ತ ಹರಿದು ಗ್ರಾಮಗಳ ನಡುವಿನ ಅಂತರ ಹೆಚ್ಚಿಸುತ್ತಿದೆ. ಈಗಾಗಲೇ ಈ ಹಳ್ಳದ ದಿಶೆ ಬದಲಾವಣೆಯಿಂದ ಎರಡು ಎಕರೆಗಳಷ್ಟು ಭೂಮಿ ಕಳೆದುಕೊಂಡಿದ್ದೇನೆ ಎಂದು ನೊಂದು ನುಡಿಯುತ್ತಾರೆ ಸ್ಥಳೀಯ ರೈತ ಉಲ್ಲಾಸ ಭಿಕಾರೊ ನಾಯ್ಕ. ಕೃಷಿ ಜಮೀನು ರಕ್ಷಣೆಗೆ ಕಳೆದ ಹತ್ತು ವರ್ಷಗಳಿಂದ ಸರಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿರುವ ಇವರ ನಮ್ಮ ಬೇಡಿಕೆಯನ್ನು ಸರಕಾರ ಕಣ್ತೆರೆದು ನೋಡಿಲ್ಲ. ಈಗಲಾದರೂ ಕಣ್ತೆರೆದು ನೋಡಿ ಉಳಿದಿರುವ ಜಮೀನಿನಲ್ಲಾದರೂ ಕೃಷಿ ಕಾಯಕ ಮಾಡಿ ಬದುಕಲು ರೈತರಿಗೆ ಅವಕಾಶ ಮಾಡಿಕೊಡಲಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

loading...