ಕೆಸರು ಗದ್ದೆಯಂತಾದ ರಸ್ತೆಗಳು: ದುರಸ್ತಿಗೆ ಆಗ್ರಹ

0
13
loading...

ಕನ್ನಡಮ್ಮ ಸುದ್ದಿ-ಬ್ಯಾಡಗಿ: ಪಟ್ಟಣದ ಸೋಮೇಶ್ವರ ನಗರ, ನೇಹರು ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಯುಜಿಡಿ ಹಾಗೂ 24*7 ನೀರು ಪೂರೈಕೆ ಸಲುವಾಗಿ ರಸ್ತೆಯ ಎರಡು ಬದಿ ಕಾಲುವೆ ತೆಗೆದು ಮಣ್ಣನ್ನು ರಸ್ತೆಯಲ್ಲಿ ಹರಡಿದ ಪರಿಣಾಮ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಬೇಕಿದೆ ಎಂದು ಶಾಸಕರ ಎದುರು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ಜರುಗಿತು.
ಇಲ್ಲಿನ ರಸ್ತೆಯ ದುಸ್ಥಿತಿಯನ್ನು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿಯವರಿಗೆ ತೋರಿಸುವ ಮೂಲಕ ನಿವಾಸಿಗಳ ಹಾಗೂ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ತಪ್ಪಿಸುವಂತೆ ಆಗ್ರಹಿಸಿ ಭಾನುವಾರು ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ವಕೀಲ ಪಿ.ಆರ್‌. ಮಠದ ಮಾತನಾಡಿ, ಬ್ಯಾಡಗಿಯ ಎಲ್ಲ ರಸ್ತೆಗಳನ್ನು ಯುಜಿಡಿ ಕಾಮಗಾರಿ ಸಲುವಾಗಿ ಕಿತ್ತ ಪರಿಣಾಮ ಓಡಾಡಲು ಬಾರದಂತಾಗಿದೆ. ಹೀಗಾಗಿ ಬಹುತೇಕ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಕಾಲು ಕೀಳಲು ಪರದಾಡಬೇಕಾದ ಸ್ಥಿತಿ ಬಂದಿದೆ. ತಿಂಗಳಿಂದ ಸ್ಥಳೀಯ ನಿವಾಸಿಗಳ ಓಡಾಡಲು ತೀವ್ರ ತೊಂದರೆ ಅನುಭವಿಸಬೇಕಿದೆ. ಇಂತಹ ಬಡಾವಣೆಗಳ ನಿವಾಸಿಗಳು ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ದೂರದ ರಸ್ತೆ ಬದಿಯಲ್ಲಿ ನಿಲ್ಲಿಸಿ ತೆರಳಬೇಕಿದೆ. ಕೂಡಲೇ ರಸ್ತೆ ದುರಸ್ತಿಗೆ ವ್ಯವಸ್ಥೆ ಮಾಡಲು ಸೂಚಿಸುವಂತೆ ಶಾಸಕರು ಎದುರು ಅಳಲು ತೋಡಿಕೊಂಡರು.
ವಕೀಲ ಪ್ರಶಾಂತ ಮಾತನಾಡಿ, ಪ್ರತಿದಿನ ಸೈಕಲ್‌ ಹಾಗೂ ದ್ವಿಚಕ್ರ ವಾಹನಗಳ ಮೂಲಕ ಪೂರೈಸುತ್ತಿದ್ದ ದಿನಪತ್ರಿಕೆ, ಹಾಲು, ಹೂವು ಪೂರೈಕೆ ಸ್ಥಗಿತಗೊಂಡಿದೆ. ಪೂರೈಕೆದಾರರು ಓಡಾಡಲು ಸಾಕಷ್ಟು ತೊಂದರೆ ಪಡುತ್ತಿದ್ದಾರೆ. ಅವರ ಸೈಕಲ್‌ ಹಾಗೂ ದ್ವಿಚಕ್ರ ವಾಹನಗಳು ಕೆಸರಿನಲ್ಲಿ ಸಿಲುಕಿಕೊಳ್ಳುತ್ತಿವೆ. ಜಿಟಿಜಿಟಿ ಮಳೆಯಲ್ಲಿ ಜನರ ಪರದಾಡ ಯಾರಿಗೆ ಹೇಳ್ಬೇಕ್ರಿ..…? ಮಹಿಳೆಯರು, ವಯೋವೃದ್ಧರು ಹಾಗೂ ಶಾಲಾ ಮಕ್ಕಳ ತೊಂದರೆ ಸಾಕಷ್ಟಿದ್ದು, ಯುಜಿಡಿ ಇಂಜಿನೀಯರಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ. ಪುರಸಭೆ ಮುಖ್ಯಾಧಿಕಾರಿಗಳಂತೂ ಕ್ಯಾರೆ ಎನ್ನುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಸ್ಥಿತಿ ನಿರಂತರವಾದ್ರೆ ಜನರ ಗತಿಯೇನ್ರಿ..? ನಮ್ಮ ಗೋಳು ಯಾರಿಗೆ ಹೇಳ್ಬೇಕ್ರಿ ಎಂದು ಪ್ರಶ್ನಿಸಿದರು.
ಸೋಮೇಶ್ವರ ನಗರದ ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸ್ವತಃ ತಾವೆ ವಕೀಲರ ಕಾಲೋನಿಯ ಕೆಸರಿನ ರಸ್ತೆಯಲ್ಲಿ ತೆರಳಿದರು. ಬಳಿಕ ಮಾತನಾಡಿದ ಯುಜಿಡಿ ಕಾಮಗಾರಿ ವಿಳಂಭ ಕುರಿತು ತುರ್ತಾಗಿ ಮಾತನಾಡಿದ್ದೇನೆ. ಬಳಿಕ ಮೊಬೈಲ್‌ ಮೂಲಕ ಪುರಸಭೆ ಕಿರಿಯ ಇಂಜಿನೀಯರ್‌ ನಿರ್ಮಲಾ ನಾಯಕರಿಗೆ ಸಂಪರ್ಕಿಸಿ ಒಂದೆರಡು ದಿನದಲ್ಲಿ ಯಾವುದೆ ಕಾರಣ ಹೇಳದೆ ಸರಿಪಡಿಸಬೇಕು. ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಜು.16 ರಂದು 4 ನೇ ವಾರ್ಡ್‌ನ ನಾಗರಿಕರ ಸಮಸ್ಯೆ ಕುರಿತು ಸಭೆ ಏರ್ಪಡಿಸಿ ಎಂದರು.
ಈ ಸಂದರ್ಭದಲ್ಲಿ ವಕೀಲರಾದ ವಿ.ಎಸ್‌.ಕಡಗಿ, ಬಿ.ಎಸ್‌.ಚೂರಿ, ಎಂ.ಕೆ.ವೀರನಗೌಡ್ರ, ರುದ್ರೇಶ ಚನ್ನಗೌಡ್ರ, ವಿ.ಎಂ.ಪಾಟೀಲ, ಎನ್‌.ಬಾರ್ಕಿ, ಶಿವನಗೌಡ್ರ ಬಸನಗೌಡ್ರ, ಎಂ.ಕೆ.ಕೋಡಿಹಳ್ಳಿ, ಚಂದ್ರಪ್ಪ ಕಾರಿಗಿ, ಶಿವಬಸಪ್ಪ ಕುಳೇನೂರು ಇತರರಿದ್ದರು.

loading...