ಕೋಟಿ ವೆಚ್ಚದ ರಾಕ್‌ ಗಾರ್ಡನ್‌ಗೆ ಸಮುದ್ರ ಕೊರೆತದ ಆತಂಕ

0
15
loading...

ದೀಪಕ ಶೆಟ್ಟಿ
ಕನ್ನಡಮ್ಮ ಸುದ್ದಿ-ಕಾರವಾರ: ಸಾಂಪ್ರದಾಯಿಕ ಮೀನುಗಾರರ ಹಾಗೂ ಪರಿಸರ ಪ್ರೇಮಿಗಳ ವಿರೋಧದ ಮಧ್ಯೆಯೂ ಕಳೆದ ಆರು ತಿಂಗಳ ಹಿಂದೆ ಇಲ್ಲಿನ ಸಮುದ್ರದ ತೀರದಲ್ಲಿ ನಿರ್ಮಿಸಿದ ರಾಕ್‌ ಗಾರ್ಡನ್‌ ಸಮುದ್ರ ಕೊರೆತದಿಂದ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಪ್ರವಾಸಿಗರ ಆಕರ್ಷಣೆಗಾಗಿ ಜಿಲ್ಲಾಡಳಿತವು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಮುದ್ರ ತೀರದಲ್ಲಿ ಸುಮಾರು ಮೂರು ಕೋಟಿ ವಿನಿಯೋಗಿಸಿ ರಾಕ್‌ ಗಾರ್ಡನ್‌ ನಿರ್ಮಿಸಿದೆ. ಈ ಮಳೆಗಾಲದಲ್ಲಿ ಇಲ್ಲಿನ ಸಮುದ್ರದ ನೀರು ುಕ್ಕಿ ರಾಕ್‌ ಗಾರ್ಡನ್‌ ವರೆಗೆ ಆಗಮಿಸಿದೆ. ಒಂದೊಮ್ಮೆ ಹೀಗೆ ಸಮುದ್ರ ನೀರು ಏರಿಳಿತವಾಗುತ್ತಾ ಮುಂದೊಂದು ದಿನ ಇಡೀ ರಾಕ್‌ ಗಾರ್ಡನ್‌ ಸಮುದ್ರ ಕೊರೆತಕ್ಕೆ ಕೊಚ್ಚಿ ಹೋಗಲಿದೆ ಎಂದು ಸ್ಥಳೀಯ ಮೀನುಗಾರರು ಆತಂಕ ವ್ಯಕ್ತಪಡಿಸುತ್ತಾರೆ. ಸುಮಾರು ಎರಡು ಎಕರೆ ಸಮುದ್ರ ತೀರದಲ್ಲಿ ರಾಕ್‌ ಗಾರ್ಡನ್‌ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾದಾಗ ಸ್ಥಳೀಯ ಮೀನುಗಾರರು, ಬೀಚ್‌ ಪ್ರೇಮಿಗಳು ಮುಂದೊಂದು ದಿನ ಈ ಗಾರ್ಡನ್‌ ಸಮುದ್ರ ಕೊರೆತಕ್ಕೆ ಬಲಿಯಾಗಿ ಸರ್ಕಾರದ ಹಣ ನೀರಲ್ಲಿ ಕೊಚ್ಚಿ ಹೋಗುವುದು ಖಚಿತ. ಈ ಸ್ಥಳದಲ್ಲಿ ಮೊದಲಿದ್ದ ಪುಟಾಣಿ ರೈಲ್ವೆ ಸಹ ಸಮುದ್ರ ನೀರಿಗೆ ಕೊಚ್ಚಿ ಹೋದ ಉದಾಹರಣೆ ಕಣ್ಣು ಮುಂದಿರುವಾಗ ರಾಕ್‌ ಗಾರ್ಡನ್‌ ನಿರ್ಮಾಣ ವ್ಯರ್ಥ. ಇದರಿಂದ ಸುಮ್ಮನೆ ಸಾರ್ವಜನಿಕರ ಹಣ ಪೋಲು ಎಂದು ಜಿಲ್ಲಾಡಳಿತವನ್ನು ಎಚ್ಚರಿಸಿದ್ದರು. ಅವರ ಎಚ್ಚರಿಕೆ ರಾಕ್‌ ಗಾರ್ಡನ್‌ ನಿರ್ಮಾಣಗೊಂಡ ಕೇವಲ ಐದು ತಿಂಗಳಿನಲ್ಲಿಯೇ ಸತ್ಯವಾಗುತ್ತಿರುವುದು ನಿಜಕ್ಕೂ ದುರಂತ. ಸುಮಾರು ಐದು ತಿಂಗಳ ಹಿಂದೆ ರಾಕ್‌ ಗಾರ್ಡನ್‌ ಉದ್ಘಾಟಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಹಾಗೂ ಜಿಲ್ಲಾಡಳಿತ ಇದು ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಹೊಸ ಮೈಲಿಗಲ್ಲಾಗಲಿದೆ.
ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಈಗಾಗಲೇ ದೂರು ದಾಖಲಿಸಲಾಗಿದೆ. ಈಗ ಸಾರ್ವಜನಿಕರ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದಾಗಿ ಪರಿಸರ ಹೋರಾಟಗಾರ ಹಾಗೂ ನ್ಯಾಯವಾದಿ ಬಿ.ಎಸ್‌.ಪೈ ಎಚ್ಚರಿಸಿದ್ದಾರೆ. ಸ್ಥಳಕ್ಕೆ ಭೇಟಿದ ಮಾಜಿ ಶಾಸಕ ಸತೀಶ ಸೈಲ್‌ ಸಮುದ್ರ ತೀರದಲ್ಲಿ ರಾಕ್‌ ಗಾರ್ಡನ್‌ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾದಾಗ ಇದು ಸಮುದ್ರ ಕೊರೆತಕ್ಕೆ ತುತ್ತಾಗಬಹುದು ಎಂದು ಆಗಲೇ ಭವಿಷ್ಯ ನುಡಿದಿದ್ದೆ. ಆದರೆ ಜಿಲ್ಲಾಡಳಿತ ನನ್ನ ಸಲಹೆಗೆ ಕಿವಿಗೊಡದೆ ನಿರ್ಮಾಣ ಕಾರ್ಯ ಮುಂದುವರೆಸಿತು. ಈಗ ಅದು ನಿಜವಾಗಿದೆ ಎಂದು ಜಿಲ್ಲಾಡಳಿತದ ವಿರುದ್ಧ ಸೈಲ್‌ ತಮ್ಮ ಸಿಟ್ಟನ್ನು ಹೊರಹಾಕಿದರು.
ರಾಕ್‌ ಗಾರ್ಡನ್‌ ನಿರ್ಮಾಣದಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ ನಾಯಕ ಆರೋಪಿಸಿದ್ದಾರೆ. ಒಬ್ಬ ಸಾಮಾನ್ಯ ಮೀನುಗಾರ ಸಹ ಈ ರಾಕ್‌ ಗಾರ್ಡನ್‌ ಸಮುದ್ರ ಕೊರೆತಕ್ಕೆ ಬಲಿಯಾಗಲಿದೆ ಎಂದು ಮೊದಲೇ ಎಚ್ಚರಿಸಿದ್ದ. ಅಂತದ್ದರಲ್ಲಿ ಅಧಿಕಾರಿಗಳಿಗೆ ಯಾಕೆ ಇದು ಅರ್ಥವಾಗಲಿಲ್ಲ. ರಾಕ್‌ ಗಾರ್ಡನ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಮಾರು ಐವತ್ತು ಕೀ.ಮೀಟರ್‌ ದೂರದ ಕುಮಟಾದಿಂದ ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ತಂದು ಸಾರ್ವಜನಿಕರ ಹಣವನ್ನು ಬೇಕಾ ಬಿಟ್ಟಿಯಾಗಿ ಪೋಲು ಮಾಡಲಾಗಿದೆ. ಈಗಾಗಲೇ ಪರಿಸರ ಇಲಾಖೆಯ ಕಾರ್ಯದರ್ಶಿಗಳು ಸಮುದ್ರ ತೀರದಲ್ಲಿ ಸಿಆರ್‌ಜಡ್‌ ಕಾಯಿದೆ ಉಲ್ಲಂಘಿಸಿ ನಿರ್ಮಿಸಲಾದ ಶಾಶ್ವತ ರಚನೆಗಳನ್ನು ತೆಗೆಯುವಂತೆ ಆದೇಶ ಮಾಡಿದ್ದಾರೆ. ಆದರೆ ಈಗ ಪ್ರಕೃತಿಯೇ ಸಮುದ್ರ ಕೊರೆತದ ಮೂಲಕ ರಾಕ್‌ ಗಾರ್ಡನ್‌ನನ್ನು ಆಪೋಶನ ತೆಗೆದುಕೊಳ್ಳುತ್ತಿದೆ ಎಂದು ನಾಯಕ ವ್ಯಂಗವಾಡಿದ್ದಾರೆ.

loading...