ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಅಮಾಯಕರ ಬಿಡುಗಡೆಗೆ ಆಗ್ರಹ

0
7
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌​ಐಟಿ ಪೊಲೀಸರು ಬಂಧಿಸಿರುವ ಹುಬ್ಬಳ್ಳಿಯ ಅಮಿತ್‌ ಬದ್ದಿ ಹಾಗೂ ಗಣೇಶ ಮಿಸ್ಕಿನ್‌ ಅಮಾಯಕರಾಗಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಕ್ರಾಂತಿ ಸೇನಾ ಆಗ್ರಹಿಸಿದೆ.
ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದ ಕ್ರಾಂತಿ ಸೇನಾ ಕಾರ್ಯಕರ್ತರು, ಬಂಧಿತ ಹುಬ್ಬಳ್ಳಿಯ ಅಮಿತ್‌ ಬದ್ದಿ ಚಿನ್ನಾಭರಣ ಕೆಲಸ ಮಾಡಿಕೊಂಡಿದ್ದು, ಗಣೇಶ ಮಿಸ್ಕಿನ್‌ ಊದುಬತ್ತಿ ತಯಾರಿಕೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಇಬ್ಬರೂ ತಮ್ಮ ಕುಟುಂಬದ ಆಧಾರ ಸ್ತಂಭಗಳಾಗಿದ್ದು, ಅವರ ಬಂಧನದಿಂದ ಆ ಕುಟುಂಬಗಳು ಈಗ ಬೀದಿ ಪಾಲಾಗುವಂತಾಗಿದೆ. ಕುಟುಂಬದವರಿಗೆ ತಿಳಿಸದೆ ಏಕಾಏಕಿ ಕರೆದುಕೊಂಡು ಹೋಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಣೇಶ ಮತ್ತು ಅಮಿತ್‌ ಇಬ್ಬರೂ ಹಿಂದು ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಅವರು ಭಾಗವಹಿಸಿಲ್ಲ. ಆದರೂ ಅವರನ್ನು ಸುಖಾಸುಮ್ಮನೆ ಬಂಧಿಸಲಾಗಿದೆ. ಈ ಕೂಡಲೇ ಅವರನ್ನು ಬಿಡುಗಡೆ ಮಾಡದಿದ್ದರೆ ಪ್ರತಿಭಟನೆಯನ್ನು ತಿವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ತಹಸೀಲ್ದಾರ್‌ ಮುಖಾಂತರ ರಾಜ್ಯ ಸರ್ಕಾರ, ಪೊಲೀಸ್‌ ಮಹಾನಿರ್ದೇಶಕರು ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

loading...