ಚಾಲುಕ್ಯರ ಕಾಲದ ಸಿದ್ಧೇಶ್ವರ ದೇಗುಲಕ್ಕೆ ಬೇಕಿದ ಕಾಯಕಲ್ಪ

0
11
loading...

ವ್ಹಿ.ಎಸ್‌.ಶಿವಪ್ಪಯ್ಯನಮಠ
ಯಲಬುರ್ಗಾ: ಆರ್ಥಿಕವಾಗಿ ಬಡವಾಗಿದ್ದರೂ ಕೂಡಾ ಚಾರಿತ್ರೀಕವಾಗಿ ಮತ್ತು ಕಲಾತ್ಮಕವಾಗಿ ಕಲೆ ಸಾಹಿತ್ಯ, ಸಂಸ್ಕೃತಿ, ರಂಗಭೂಮಿಯ ಭವ್ಯ ಹಿರಿಮೆ ಹೊಂದಿರುವ ಯಲಬುರ್ಗಾ ತಾಲೂಕು ಕೂಡಾ ಒಂದು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಕಲೆಗಳ ತವರೂರು. ಇಲ್ಲಿ ಹತ್ತು ಹಲವಾರು ಶಿಲ್ಪ ಕಲೆಗಳನ್ನು ಹೊಂದಿದ್ದರು ಕೂಡ ಅವು ಇವತ್ತಿಗೂ ಬೆಳಕಿಗೆ ಬಾರದೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಆ ಕಲೆಗಳು ಇವತ್ತು ತನ್ನ ಕಳೆಯನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಶಿಲ್ಪ ಕಲೆ ಹೊಂದಿರುವ ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಯಲಬುರ್ಗಾ ಪಟ್ಟಣದಲ್ಲಿರುವ ಕೆಂಪು ಕೆರೆ ಪಕ್ಕ ಬರುವ ಸಿದ್ದೇಶ್ವರ ದೇಗುಲ ಕೂಡ ಒಂದು.
ಸಿದ್ಧೇಶ್ವರ ದೇಗುಲ ಪರಂಪರೆ: ಯಲಬುರ್ಗಾ ಪಟ್ಟಣದಲ್ಲಿರುವ ಶಿಲ್ಪ ಕಲೆಗಳಿಂದ ಕಂಗೊಳಿಸುತ್ತಿರುವ ಸಿದ್ದೇಶ್ವರ ದೇಗುಲದ ಬಗ್ಗೆ ಸಿದ್ದಶ್ರೀ ಪುಸ್ತಕದಿಂದ ನೋಡಿದಾಗ ಯಲಬುರ್ಗಾ ಪಟ್ಟಣದಿಂದ ದಕ್ಷೀಣಕ್ಕೆ ಸುಮಾರು ಒಂದು ಕಿ.ಮೀ ಅಂತರದಲ್ಲಿರುವ ದೇಗುಲದಲ್ಲಿ ಸದ್ಯ ನವರಂಗ ಮಂಟಪವು ತನ್ನ ಬೃಹದಾಕಾರದಿಂದ ಇಂದಿಗೂ ಗಮನ ಸೆಳೆಯುತ್ತಿದೆ. ಮಧ್ಯದ ಎರಡೂ ಸಾಲು ಕಂಬಗಳನ್ನು ತಿಳಿ ಹಸಿರು ಶಿಲೆಯಿಂದಲೂ ಎರಡು ಬದಿಯ ಕೊನೆಯ ಸಾಲಿನ ಕಂಬಗಳನ್ನು ಕಣಶಿಲೆಯಿಂದಲೂ ನಿರ್ಮಿಸಲಾಗಿದೆ. ಪೀಠ, ಕಾಂಡ, ಕುಂಭ, ಕಳಸ ಮತ್ತು ಬೋದುಗೆಗಳನ್ನು ಹೊಂದಿರುವ ಕಂಬಗಳು ಸಂಪೂರ್ಣ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿದೆ.
ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯಗಳಲ್ಲಿ ತೆರೆನಾದ ಭಾರಿ ಕಂಬಗಳು ಮತ್ತು ಬೃಹತ್‌ ಮಂಟಪಗಳು ಅಪರೂಪವೆಂದೇ ಹೇಳಬಹುದು. ಛತ್ತಿನ ಒಂಬತ್ತು ಅಂಕಣಗಳು ಭುವನೇಶ್ವರಿಯ ಅಲಂಕರಣಗಳನ್ನು ಹೊಂದಿರುವುದು ಇಲ್ಲಿಯ ಮತ್ತೊಂದು ವಿಶೇಷ. ಮಧ್ಯದಲ್ಲಿ ಅರಳು ಕವಲದ ಭುವನೇಶ್ವರಿ ಇದ್ದರೆ ಉಳಿದವುಗಳಲ್ಲಿ ವೃತ್ತಾಕಾರದಲ್ಲಿ ಕುಟ್ಮಲಗಳಿವೆ. ಮಂಟಪದ ಪೂರ್ವದ ಮಾಡು ಮುಂದಕ್ಕಿದ್ದು, ಭಿನ್ನ ವಾಸ್ತು ಕಟ್ಟಡವನ್ನು ಸೂಚಿಸುತ್ತದೆ. ಮಂಟಪದ ಮುಂಭಾಗದಲ್ಲಿ ಕಣಶಿಲೆಯ ವಿಶಾಲವಾದ ವೇದಿಕೆಯೊಂದಿದೆ. ಮಂಟಪದ ಸುತ್ತೆಲ್ಲ ಕೆಂಪು ಮರಳುಗಲ್ಲಿನ ತಿಳಿಹಸಿರು ಶಿಲೆಯ ಕಂಬಗಳು ಮತ್ತು ಇತರ ವಾಸ್ತು ಅವಶೇಷಗಳು ಬಿದ್ದಿವೆ. ಇವುಗಳನ್ನು ಮತ್ತು ಮಂಟಪದ ವಾಸ್ತುಶೈಲಿಯನ್ನು ವೀಕ್ಷಿಸಿದಾಗ ಇಲ್ಲಿ ಒಂದು ಅದ್ಬುತ, ಸುಂದರವಾದ ದೇವಾಲಯ ಇರುವುದು ಕಂಡುಬರುತ್ತದೆ.
ಪ್ರಸಕ್ತ ಮಂಟಪ ಬಿಟ್ಟು ಉಳಿದ ಭಾಗಗಳು ನಾಶಗೊಂಡಿರಬೇಕು. ಇಲ್ಲವೇ ನಾಶಗೊಂಡಿರಬೇಕು ಎಂದು ಊಹಿಸಬಹುದು. ಒಟ್ಟಿನಲ್ಲಿ ಇದು ಪುರ್ಣರೂಪದಲ್ಲಿ ಇದ್ದಿದ್ದರೆ ಇಟಗಿಯ ಮಹಾದೇವ ದೇವಾಯಲದಂತಹ ಒಂದು ಅಪೂರ್ವ ದೇವಾಲಯವನ್ನು ಹೊಂದಿದ ಕೀರ್ತಿ ಯಲಬುರ್ಗಾದಾಗುತ್ತಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.
ಸುಂದರ ಕೆತ್ತನೆಯಿಂದ ಕಂಗೊಳಿಸುತ್ತಿರುವ ಶಿಲ್ಪ ಕಲೆಯ ಸಿದ್ದೇಶ್ವರ ದೇಗುಲ ಇವತ್ತು ತನ್ನ ಇಡಿ ಕಲೆಯನ್ನು ಕಳೆದುಕೊಳ್ಳುತ್ತಿದೆ. ಈ ಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷಕೊಮ್ಮೆ ದಸರಾ ಸಂದರ್ಭದಲ್ಲಿ ಸ್ಥಳೀಯ ಸಂಸ್ಥಾನ ಹಿರೇಮಠದ ವತಿಯಿಂದ ಬನ್ನಿ ಮುಡಿಯುವ ಕಾರ್ಯಕ್ರಮವನ್ನು ನಡೆಯುತ್ತಿದೆ. ಆದರೆ ಈ ದೇಗುಲವನ್ನು ಸಂಬಂಧಿಸಿದ ಇಲಾಖೆಯವರು, ತಾಲೂಕು ಆಡಳಿತ ಗಮನ ಹರಿಸಿ ಸುಂದರ ಕೆತ್ತನೆಯಿಂದ ಅಕರ್ಷಿಸುತ್ತಿರುವ ಸಿದ್ದೇಶ್ವರ ದೇಗುಲವನ್ನು ಅಭಿವೃದ್ಧಿ ಪಡಿಸಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

loading...