ಜಕ್ಕಲಿ ಗ್ರಾಪಂ ಸಿಬ್ಬಂದಿ ವಿರುದ್ಧ ಪ್ರತಿಭಟನೆ

0
8
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮ ಪಂಚಾಯತಿ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇರುವುದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ಕರವೇ ಕಾರ್ಯಕರ್ತರು ಪ್ರತಿಭಟಿಸಿದ ಘಟನೆ ಸೋಮವಾರ ನಡೆದಿದೆ.
ತಾಲೂಕು ಅಧ್ಯಕ್ಷ ಉಮೇಶ ಮೇಟಿ ಮಾತನಾಡಿ, ಜಕ್ಕಲಿ ಗ್ರಾಮ ಪಂಚಾಯತಿಯ ಪಿಡಿಒ, ಬಿಲ್ಲ ಕಲೇಕ್ಟರ್‌ ಸೇರಿದಂತೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಕಚೇರಿಗೆ ಬರುವುದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನಾನಾ ಕೆಲಸಗಳಿಗೆ ಬರುವ ಜನರು ಬೆಳಗ್ಗೆಯಿಂದ ಸಂಜೆಯವರೆಗೆ ಕಾಯುವುದೇ ಕೆಲಸವಾಗುತ್ತದೆ. ಇರುವ ಸಿಬ್ಬಂದಿಯೊಂದಿಗೆ ದಿನನಿತ್ಯ ವಾಗ್ವಾದ ಮಾಡುವುದು ಸಾಮಾನ. ಮೊಬೈಲ್‌ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೆ ಮೊಬೈಲ್‌ ರೀಸಿವ್‌ ಮಾಡುವುದಿಲ್ಲ. ವಸತಿ ಯೋಜನೆ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 3 ತಿಂಗಳಿನಿಂದ ಜಮೀನುಗಳ ಪಹಣಿ ವಿತರಣೆ ಸ್ಥಗಿತಗೊಳಿಸಲಾಗಿದ್ದು, ನರೇಗಲ್ಲನ ನೇಮ್ಮದಿ ಕೇಂದ್ರಕ್ಕೆ ತೆರಳಿ ಪಹಣಿ ಪಡೆಯುವ ಅನಿವಾರ್ಯವಾಗಿದೆ. ಬೆಳೆ ವಿಮೆ ತುಂಬಲು ರೈತರಿಗೆ ಪಹಣಿ ಇಲ್ಲದೇ ತೊಂದರೆಯಾಗುತ್ತಿದೆ. ಗ್ರಾ.ಪಂ ಯಲ್ಲಿ ನೂರಕ್ಕೂ ಅಧಿಕ ಸರ್ಕಾರಿ ಸೇವೆಗಳನ್ನು ನೀಡಲು ಅಟಲ್‌ಜೀ ಕೇಂದ್ರ ಸ್ಥಾಪಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ವಸತಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ ಮಾಡಲಾಗಿದ್ದು, ಅನೇಕ ಬಾರಿ ಮನವಿ ಸಲ್ಲಿಸಿ ಫಲಾನುಭವಿ ಆಯ್ಕೆ ಮಾಡುವಂತೆ ಒತ್ತಾಯಿಸಿದರೂ ಸಹ ಫಲಾನುಭವಿ ಆಯ್ಕೆ ಮಾಡಿಲ್ಲ.
ತಮ್ಮ ಮನಸ್ಸಿಗೆ ಬಂದಾಗ ಕಚೇರಿಗೆ ಬಂದು ಹೋಗುತ್ತಾರೆ. ಕಂಪ್ಯೂಟರ್‌ ಆಪರೇಟರ್‌ ಒಂದು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದಾರೆ. ಆ ಹುದ್ದೆಗೆ ಮತ್ತೊಬ್ಬರನ್ನು ನೇಮಿಸುವ ಕಾರ್ಯವಾಗಿಲ್ಲ. ಹೀಗೆ ಹತ್ತು ಹಲವು ಸಮಸ್ಯೆಗಳಿಂದಾಗಿ ಜಕ್ಕಲಿ ಗ್ರಾಮ ಪಂಚಾಯತಿ ಇದ್ದು ಇಲ್ಲದಂತಾಗಿದೆ. ಈಗಲಾದರೂ ಮೇಲಾಧಿಕಾರಿಗಳು ಪಿಡಿಓ ಸೇರಿದಂತೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾ.ಪಂ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ಜಾಲಣ್ಣವರ ಮಾತನಾಡಿ, ಜಕ್ಕಲಿ ಗ್ರಾ.ಪಂ ಪಿಡಿಓ ಫಕ್ರುದ್ಧಿನ ನದಾಫ್‌ ಸೇರಿದಂತೆ ಸಿಬ್ಬಂದಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಶೌಚಾಲಯ, ವಸತಿ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಅನುದಾನ ಬಿಡುಗಡೆಯಾಗುತ್ತಿಲ್ಲ. ಜನರು ಪ್ರತಿನಿತ್ಯ ನಮ್ಮ ಮುಂದೆ ಗೋಳು ತೋಡಿಕೊಳ್ಳುತ್ತಾರೆ. ಅಧಿಕಾರಿಗಳ ನಿರ್ಲಕ್ಷತನದಿಂದಾಗಿ ನಾವು ಸಾರ್ವಜನಿಕರ ಮುಂದೆ ತಲೆ ತಗ್ಗಿಸುವಂತಾಗಿದೆ. ತಾಲೂಕು ಕಾರ್ಯನಿರ್ವಾಹಕ ಅದಿಕಾರಿಗಳು ಇತ್ತ ಗಮನ ಹರಿಸಿ ಪಿಡಿಒ ಹಾಗೂ ಸಿಬ್ಬಂದಿ ಸರಿಯಾಗಿ ಕಚೇರಿಗೆ ಬರುವಂತೆ ತಿಳಿಸಬೇಕು ಎಂದರು.
ರವೀಂದ್ರ ಮೇಟಿ, ಗುರಪ್ಪ ಅಸೂಟಿ, ಮಲ್ಲಿಕಾರ್ಜುನ ಮುಧೋಳ, ವಿಜಯ ತಳವಾರ, ಹನಮಪ್ಪ ಗುಬ್ಬೇನಕೊಪ್ಪ, ಮುತ್ತಣ್ಣ ವಾಲಿ, ರವಿ ಬಡಿಗೇರ, ಮಹಾದೇವಪ್ಪ ಬಡಿಗೇರ, ವೀರಪ್ಪ ಜಾಲಣ್ಣವರ, ಯಲ್ಲಪ್ಪ ಜಾಲಣ್ಣವರವ, ಜೋಗಯ್ಯ ಧಡೇಸೂರಮಠ, ಸಂಗಮೇಶ ಮೇಣಸಗಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

loading...