ಜನಸಂಖ್ಯೆ ಹೆಚ್ಚಳದಿಂದ ಅಭಿವೃದ್ಧಿಗೆ ಮಾರಕ: ಶಾಸಕ ಉದಾಸಿ

0
12
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ಹೆಚ್ಚುತ್ತಿರುವ ಜನಸಂಖ್ಯಾ ಬೆಳವಣಿಗೆ ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಶಾಸಕ ಸಿ.ಎಂ. ಉದಾಸಿ ಅಭಿಪ್ರಾಯಪಟ್ಟರು.
ಇಲ್ಲಿನ ಎಸ್‌ಕೆಎಸಿ ಕಾಲೇಜಿನಲ್ಲಿ ಆರೋಗ್ಯ ಇಲಾಖೆ, ಕಾಲೇಜಿನ ಎನ್‌ಎಸ್‌ಎಸ್‌ ಘಟಕ, ಜಿ.ಪಂ. ತಾ.ಪಂ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ, ಜನಸಂಖ್ಯೆ ಹೆಚ್ಚಳದಿಂದ ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ತೊಂದರೆಯಾಗುತ್ತದೆ. ಹೀಗಾಗಿ ಹೆಚ್ಚುತ್ತಿರುವ ಜನಸಂಖ್ಯಾ ಸ್ಫೋಟವನ್ನು ತಡೆಯುವ ಸಲುವಾಗಿ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ವಿಶ್ವ ಜನಸಂಖ್ಯಾ ನಿಯಂತ್ರಣ ಅರಿವು ಸರ್ಕಾರಿ ಕಾರ್ಯಕ್ರಮ ಎಂದು ಅಂದುಕೊಳ್ಳದೇ ನಮಗಾಗಿ ಇರುವ ಕಾರ್ಯಕ್ರಮ ಎಂದು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಜನಸಂಖ್ಯೆಯನ್ನು ನಿಯಂತ್ರಿಸುವದು ಭಾರತಕ್ಕೆ ಅನಿವಾರ್ಯವಾಗಿದೆ.
ಜನಸಂಖ್ಯೆಯನ್ನು ನಿಯಂತ್ರಿಸುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ನಿಯಂತ್ರಣ ಕುರಿತು ಮಾತನಾಡಿದರೆ ಸಾಲದು. ಪ್ರತಿಯೊಬ್ಬರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜನಸಂಖ್ಯೆಯಿಂದ ದೇಶದ ಅಭಿವೃದ್ಧಿ ಕುಂಠಿತವಾಗುವುದಲ್ಲದೇ ಪರಿಸರದ ಮೇಲು ವ್ಯತಿರಿಕ್ತ ಪರಿಣಾಮ ಬೀರಲಿದೆ. ಆಹಾರ, ಉದ್ಯೋಗ ಸಮಸ್ಯೆ ಹುಟ್ಟಿಕೊಳ್ಳುತ್ತವೆ. ಆದ್ದರಿಂದ ಸ್ವಯಂಪ್ರೇರಿತರಾಗಿ ಜನಸಂಖ್ಯಾ ನಿಯಂತ್ರಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕೆಂದು ಹೇಳಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಮಾರುತಿ ಎನ್‌.ಚಿಕ್ಕಣ್ಣನವರ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಸತ್ಯಸಾವಿತ್ರಿ ವಿ.ಬಿ. ಜನಸಂಖ್ಯಾ ನಿಯಂತ್ರಣದಲ್ಲಿ ಯುವಜನತೆಯ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್‌ ಅಧ್ಯಕ್ಷ ಎ.ಎಸ್‌.ಬಳ್ಳಾರಿ, ತಾ.ಪಂ. ಉಪಾಧ್ಯಕ್ಷ ಸರಳಾ ಜಾಧವ, ಪುರಸಭೆ ಉಪಾಧ್ಯಕ್ಷ ಗಣೇಶ ಮೂಡ್ಲಿಯವರ, ಕಾಲೇಜಿನ ಪ್ರಾಚಾರ್ಯ ಎಸ್‌.ವಿ. ಸೋಮನಾಥ, ವೈದ್ಯ ಪವನ ಪುಕಾಳೆ ಇತರರಿದ್ದರು.
ಕಸ್ತೂರೆವ್ವ ಬೊಮ್ಮನಹಳ್ಳಿ ಸ್ವಾಗತಿಸಿದರು. ಹಿರಿಯ ಪುರುಷ ಆರೋಗ್ಯ ಸಹಾಯಕ ನಿಂಗಪ್ಪ ಎನ್‌.ಎಚ್‌. ನಿರೂಪಿಸಿ ವಂದಿಸಿದರು.
ಬೆಳಗ್ಗೆ ತಾಲೂಕು ಆಸ್ಪತ್ರೆ ಆವರಣದಿಂದ ಕಾಲೇಜಿನವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಜಾಗೃತಿ ಜಾಥಾ ನಡೆಸಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ಶಶಿಧರ ಚಾಲನೆ ನೀಡಿದರು.

loading...