ಜನಸೇವೆಗೆ ಶ್ರೇಷ್ಠ ಮಾರ್ಗ ಸಹಕಾರಿ ಕ್ಷೇತ್ರ: ಹೆಗಡೆ

0
6
loading...

ಕನ್ನಡಮ್ಮ ಸುದ್ದಿ-ಶಿರಸಿ: ಜನಸೇವೆಗೆ ಇರುವ ಶ್ರೇಷ್ಠ ಮಾರ್ಗ ಸಹಕಾರಿ ಕ್ಷೇತ್ರವಾಗಿದೆ. ಇಂತಹ ಮಾರ್ಗದಲ್ಲಿ ನೂರಾರು ಸಹಕಾರಿಗಳು ಸಾಗಲು ಕಡವೆ ಶ್ರೀಪಾದ ಹೆಗಡೆಯವರು ಆದರ್ಶವಾಗಿದ್ದಾರೆ ಎಂದು ಹಿರಿಯ ಸಹಕಾರಿ ಆರ್‌.ಎನ್‌.ಹೆಗಡೆ ಗೋರ್ಸಗದ್ದೆ ಹೇಳಿದರು.
ಸಹಕಾರಿ ಭೀಷ್ಮ ಕಡವೆ ಶ್ರೀಪಾದ ಹೆಗಡೆ ಅವರ ಸ್ಮರಣಾರ್ಥ ಇಲ್ಲಿನ ವಿನಾಯಕ ಸಭಾಂಗಣದಲ್ಲಿ ಕಡವೆ ಅಭ್ಯುದಯ ಸಂಸ್ಥೆ ಆಯೋಜಿಸಿದ್ದ ಸನ್ಮಾನ ಹಾಗೂ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಿಷ್ಠುರ ವ್ಯಕ್ತಿತ್ವವಾದರೂ ಜನಪರ ನಡೆಯ ವ್ಯಕ್ತಿ ಶ್ರೀಪಾದ ಹೆಗಡೆ ಕಡವೆಯಾಗಿದ್ದರು.
ಸಾಮಾನ್ಯ ಜನರೊಡನೆ ಸರಳವಾಗಿರುತ್ತಿದ್ದ ಅವರು, ಸಹಕಾರಿ ಕ್ಷೇತ್ರದೆಡೆಗಿನ ಬದ್ಧತೆ, ನಿಷ್ಠೆ, ಸವಾಲನ್ನು ಎದುರಿಸುವ ಮನೋಶಕ್ತಿಯನ್ನು ಅಗಾಧವಾಗಿ ಗಳಿಸಿಕೊಂಡಿದ್ದರು ಎಂದರು. ಸಹಕಾರಿ ಕ್ಷೇತ್ರದಲ್ಲಿ ಮಾಡಲು ಸಾಕಷ್ಟು ಕೆಲಸ ಬಾಕಿಯಿದೆ. ಈವರೆಗೆ ಸಾಗಿಬಂದ ದಾರಿ ಕಡಿಮೆ. ಅಶಕ್ತರನ್ನು ಮೇಲಕ್ಕೆತ್ತಲು ಸಹಕಾರಿ ರಂಗ ಉತ್ತಮ ಮಾರ್ಗ ಎಂದ ಅವರು, ಕಡವೆಯವರದ್ದು ಹೋರಾಟದ ಹಾದಿಯಾಗಿದೆ. ಆ ಹೋರಾಟದ ಜೀವನವೇ ಹಲವರಿಗೆ ಆದರ್ಶವಾಗಿದೆ. ಆಮೂಲಕ ಇಂದು ಸಹಕಾರಿ ಕ್ಷೇತ್ರ ಮುನ್ನುಗ್ಗುತ್ತಿದೆ. ಕಡವೆ ಪಾಲಿಸಿದ ತತ್ವ, ಮೌಲ್ಯಗಳನ್ನು ಪ್ರಸ್ತುತ ಸಹಕಾರಿ ಕ್ಷೇತ್ರದ ಪ್ರಮುಖರು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.
ಕಡವೆ ಹೆಗಡೆ ಅವರ ಪ್ರಭಾವಕ್ಕೆ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನ ರೈತ ಕುಟುಂಬಗಳು ಒಳಗಾಗಿವೆ. ಇಂದಿಗೂ ಕೂಡ ಸಹಕಾರಿ ಮೂಲಕವೇ ಆ ಕುಟುಂಬಗಳ ಏಳ್ಗೆ ಸಾಧ್ಯವಾಗಿದ್ದು, ಕಡವೆಯವರ ದೂರದೃಷ್ಟಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೆಆರ್‌ ಎಂ ಮುಖ್ಯಸ್ಥ ಎಚ್‌.ಎಸ್‌.ಮಂಜಪ್ಪ ಮಾತನಾಡಿ, ಸಹಕಾರಿ ರಂಗದ ಮೇಲೆ ಸರ್ಕಾರದ ಹಿಡಿತ ಸಾಧಿಸುವಂತೆ ಪ್ರಯತ್ನಿದಾಗ ವಿರೋಧಿಸಿದವರು ಕಡವೆಯಾಗಿದ್ದರು. ಅವರಿಗೆ ಸಹಕಾರಿ ಕ್ಷೇತ್ರದೆಡೆಗಿನ ಬದ್ಧತೆ ಆದರ್ಶನೀಯ ಎಂದರು.
ಬೆಳೆಗಾರರ ಕ್ಷೇಮವೇ ಸಹಕಾರಿಯ ಶ್ರೇಷ್ಠತೆ ಎಂದು ತಿಳಿದಿದ್ದ ಕಡವೆ ರೈತರ ಸಮಸ್ಯೆ ನಿವಾರಿಸುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದರು. ಶೋಷಣಾ ಮುಕ್ತ ಸಮಾಜ ನಿರ್ಮಾಣ ಅವರ ಕನಸಾಗಿತ್ತು ಎಂದರು. ಸಹಕಾರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಕಡವೆ ಅವರ ಕನಸಾಗಿರುವ ವೈದ್ಯಕೀಯ ಕಾಲೇಜ್‌ ಸ್ಥಾಪನೆ ಶಿರಸಿಯಲ್ಲಿ ಆಗಬೇಕು ಎಂದರು.
ಟಿಎಸ್‌ಎಸ್‌ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಟಿಆರ್‌ ಸಿ ಬ್ಯಾಂಕ್‌ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಇದ್ದರು. ಶ್ರೀಪಾದ ಹೆಗಡೆ ಕಡವೆ ಸ್ವಾಗತಿಸಿದರು. ಅಜಯ್‌ ನಾಗ್‌ ನಿರೂಪಿಸಿದರು.

loading...