ಜಾತಿ ಆದಾಯ ಪತ್ರ ನೀಡಲು ಹೊಸ ನಿಯಮ ಖಂಡಿಸಿ ಪ್ರತಿಭಟನೆ

0
7
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಜಾತಿ ಆದಾಯ ಪ್ರಮಾಣ ಪತ್ರ ನೀಡಲು ಈ ಹಿಂದೆ ಇದ್ದ ನಿಯಮವನ್ನು ಬದಲಿಸಿ ನೂತನ ನಿಯಮ ಜಾರಿಗೆ ತಂದಿರುವುದನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟಿಸಿದ ಘಟನೆ ಮಂಗಳವಾರ ನರೇಗಲ್ಲನ ನೆಮ್ಮದಿ ಕೇಂದ್ರದಲ್ಲಿ ನಡೆಯಿತು.
ಕರವೇ ಜಿಲ್ಲಾ ಕಾರ್ಯದರ್ಶಿ ನಿಂಗಪ್ಪ ಹೊನ್ನಾಪೂರ ಮಾತನಾಡಿ, ಜಾತಿ ಆದಾಯ ಪತ್ರ ನೀಡಲು ಆಧಾರ್‌ ಕಾರ್ಡ್‌, ರಹವಾಸಿ, ಪಡಿತರ ಚೀಟಿಯನ್ನು ಪಡೆಯುತ್ತಿದ್ದರು. ಆದರೆ ಸೋಮವಾರದಿಂದ ಗ್ರಾಮಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರ ವರದಿಯನ್ನು ನೀಡಲು ತಿಳಿಸಿದ್ದಾರೆ. ಗ್ರಾಮಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರ ವರದಿ ಪಡೆಯಲು ಅವರ ಕಚೇರಿಗೆ ಹೋದರೆ ಅವರು ಸಭೆಗೆ ಹೋಗಿದ್ದಾರೆ ಎಂದು ಸಿಬ್ಬಂದಿ ಹೇಳುತ್ತಾರೆ. ಕಂದಾಯ ನಿರೀಕ್ಷರು ಗಜೇಂದ್ರಗಡದ ಕಚೇರಿಯಲ್ಲಿರುತ್ತಾರೆ. ಅಲ್ಲಿಗೆ ಹೋದಾಗ ಅವರು ಲಭ್ಯವಾಗುವುದು ವಿರಳ. ಆದ್ದರಿಂದ ನರೇಗಲ್ಲ ಕೇಂದ್ರ ವ್ಯಾಪ್ತಿಯ ಸಾರ್ವಜನಿಕರು ಅಲೆದಾಡುವುದು ಅನಿವಾರ್ಯವಾಗುತ್ತದೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ಬಡ, ರೈತಾಪಿ ವರ್ಗದವರು, ವಿದ್ಯಾರ್ಥಿಗಳು ಪ್ರತಿನಿತ್ಯ ಜಾತಿ ಆದಾಯ ಪ್ರಮಾಣ ಪತ್ರ ಪಡೆಯಲು ಅಬ್ಬಿಗೇರಿ, ಯರೇಬೇಲೇರಿ, ಕುರಡಗಿ, ಡ.ಸ. ಹಡಗಲಿ, ಜಕ್ಕಲಿ, ಮಾರನಬಸರಿ, ಬೂದಿಹಾಳ, ಹಾಲಕೆರೆ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಜನರು ಬರುತ್ತಾರೆ. ಅವರಿಗೆ ಗ್ರಾಮಲೆಕ್ಕಾಧಿಕಾರಿಗಳ ಹಾಗೂ ಕಂದಾಯ ನಿರೀಕ್ಷಕರ ವರದಿ ಸಿಗುವುದು ಕಷ್ಟ ಸಾಧ್ಯ ಆದ್ದರಿಂದ ಈ ಹಿಂದೆ ಇದ್ದ ರೀತಿಯಲ್ಲಿ ಜಾತಿ ಆದಾಯ ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಉಪತಹಸೀಲ್ದಾರ ಐ.ಜೆ. ಪಾಪಣ್ಣವರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರವು ನೂತನವಾಗಿ ಸಾರ್ವಜನಿಕರಿಗೆ ಉಪಯೋಗವಾಗುವ ದೃಷ್ಟಿಯಿಂದ ಓಟಿಸಿ(ಓವರ್‌ ದಿ ಕೌಂಟರ್‌) ನಿಯಮ ಜಾರಿಗೆ ತರಲಾಗಿದ್ದು, ಈ ಮೂಲಕ ಕುಟುಂಬದ ಸರ್ವ ಸದಸ್ಯರ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಕುಟುಂಬ ಸದಸ್ಯರೊಬ್ಬರ ಜಾತಿ ಆದಾಯ ಪ್ರಮಾಣ ಪತ್ರದೊಂದಿಗೆ ಲಿಂಕ್‌ ಮಾಡುವ ಮೂಲಕ ಎಲ್ಲ ಸದಸ್ಯರ ಜಾತಿ ಆದಾಯ ಪ್ರಮಾಣ ಪತ್ರವನ್ನು ಆಧಾರ್‌ ಸಂಖ್ಯೆಯ ನೀಡುವ ಮೂಲಕ ಪಡೆಯಬಹುದಾಗಿದೆ. ಅದಕ್ಕಾಗಿ ಗ್ರಾಮಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರ ವದರಿ ಅವಶ್ಯಕವಾಗಿದೆ. ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಅಟಲ್‌ಜೀ ಕೇಂದ್ರದಲ್ಲಿ ಈ ವ್ಯವಸ್ಥೆ ಪ್ರಾರಂಭಿಸಲಾಗಿದ್ದು, ಗ್ರಾಮೀಣ ಭಾಗದ ಜನರು ತಮ್ಮ ತಮ್ಮ ಗ್ರಾ.ಪಂ ಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಕಂದಾಯ ನಿರೀಕ್ಷಕರಿಗೆ ನರೇಗಲ್ಲ ನೆಮ್ಮದಿ ಕೇಂದ್ರದಲ್ಲಿ ಅರ್ಧ ದಿನ ಹಾಗೂ ಗಜೇಂದ್ರಗಡ ಕಚೇರಿಯಲ್ಲಿ ಅರ್ಧ ದಿನ ಇರುವಂತೆ ಸೂಚಿಸಲಾಗಿದೆ. ಅವರ ಅನುಪಸ್ಥಿತಿಯಲ್ಲಿ ಸಿಬ್ಬಂದಿ ಅರ್ಜಿ ಪಡೆದು ಅವರಿಂದ ವರದಿ ಪಡೆದು ಸಾರ್ವಜನಿಕರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ವ್ಯಾಪ್ತಿಯ ಗ್ರಾ.ಪಂ ಪಿಡಿಒ ಹಾಗೂ ಕಂಪ್ಯೂಟರ್‌ ಸಿಬ್ಬಂದಿಗೆ ಇನ್ನೆರೆಡು ದಿನಗಳಲ್ಲಿ ಸಭೆ ಕರೆದು. ಗ್ರಾ.ಪಂ ಗಳಲ್ಲಿ ಅರ್ಜಿ ಪಡೆಯುವಂತೆ ತಿಳಿಸಿ, ತರಬೇತಿ ನೀಡಲಾಗುವುದು. ಪಹಣಿ ಸೇರಿದಂತೆ ಇತರೆ ಪ್ರಮಾಣ ಪತ್ರಗಳಿಗಾಗಿ ನರೇಗಲ್ಲ ನೆಮ್ಮದಿ ಕೇಂದ್ರಕ್ಕೆ ಬರದೆ ತಮ್ಮ ವ್ಯಾಪ್ತಿಯ ಗ್ರಾ.ಪಂ ಕಚೇರಿಗಳಲ್ಲಿ ಅವುಗಳನ್ನು ಪಡೆಯುವಂತೆ ಮಾಡಲಾಗುವುದು. ಈ ಹಿಂದಿನ ನಿಯಮದ ಪ್ರಕಾರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲು 21ದಿನಗಳ ಕಾಲಾವಕಾಶವಿತ್ತು. ಆದರೆ ಹೊಸ ನಿಯಮದಡಿ ಕೇವಲ 7 ದಿನದಲ್ಲಿ ಪ್ರಮಾಣ ಪತ್ರ ಲಭ್ಯವಾಗಲಿದೆ. ಹೊಸ ನಿಯಮ ಜಾರಿಯಾದ ಪ್ರಾರಂಭದಲ್ಲಿ ಸ್ವಲ್ಪ ಕಷ್ಟವೆನಿಸಿದರೂ ಇದರ ಪರಿಣಾಮ ಉತ್ತಮವಾಗಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ನೂತನ ಪದ್ದತಿ ಜಾರಿಯಾಗಿದೆ. ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಇದನ್ನು ಮುಂದುವರಿಸಲಾಗುವುದು ಇಲ್ಲದಿದ್ದರೆ ಹಳೆ ನಿಯಮದಂತೆ ನಡೆಸಲಾಗುವುದು ಎಂದರು.
ಉಪತಹಸೀಲ್ದಾರ ಉತ್ತರಕ್ಕೆ ಸ್ಪಂದಿಸಿದ ಪ್ರತಿಭಟನಾಕಾರರು, ಹೊಸ ಯೋಜನೆಯ ಬಗ್ಗೆ ಸರ್ಮಕ ಮಾಹಿತಿ ನೀಡಿದ್ದಿರಿ, ಆದರೆ ಗ್ರಾಮಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷರು ಕಚೇರಿಯಲ್ಲಿ ಸಮಯಕ್ಕೆ ಸರಿಯಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.
ಕಂದಾಯ ನಿರೀಕ್ಷಕ ವಿ.ಬಿ. ಅಡಗತ್ತಿ, ನಿಂಗಪ್ಪ ಕಣವಿ, ಗವಿಸಿದ್ದಪ್ಪ ಗೋಡಚಪ್ಪನವರ, ಮಲ್ಲಯ್ಯ ಗುಂಡಗೋಪುರಮಠ, ಶರಣಪ್ಪ ಮಲಕಸಮುದ್ರ, ಶಿವು ಹಿರೇಗೌಡ್ರ, ರಮೇಶ ಕಾಟಿ, ಶಿರಾಜ ಹೊಸಮನಿ, ಮಲ್ಲಿಕಾರ್ಜುನ ಕಲ್ಲಶ್ಯಾಣಿ, ರಾಜು ಬಸವರಡ್ಡೇರ, ದುರಗಪ್ಪ ಬಂಡಿವಡ್ಡರ ಇದ್ದರು.

loading...