ತಾಡಪಾಲ್‌ ವಿತರಣೆಯಲ್ಲಿ ತಾರತಮ್ಯ ಖಂಡಿಸಿ ಪ್ರತಿಭಟನೆ

0
8
loading...

ಕನ್ನಡಮ್ಮ ಸುದಿ-ನರೇಗಲ್ಲ: ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿರುವ ತಾಡಪಾಲ್‌ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ರೈತರು ಸೋಮವಾರ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಕಚೇರಿಯಲ್ಲಿ ಕೂಡಿ ಹಾಕಿ, ಬೀಗ ಜಡಿದು ಪ್ರತಿಭಟಿಸಿದರು.
ಎಪಿಎಂಸಿ ಸದಸ್ಯ ನಿಂಗನಗೌಡ ಲಕ್ಕನಗೌಡ್ರ ಮಾತನಾಡಿ, ಕಳೆದ ನಾಲ್ಕು ದಿನಗಳ ಹಿಂದೆ ರೈತ ಸಂಪರ್ಕ ಕೇಂದ್ರದಲ್ಲಿ ತಾಡಪಾಲ್‌ ವಿತರಣೆಗೆ ಚಾಲನೆ ನೀಡಲಾಗಿತ್ತು, ಮೊದಲಿಗೆ ಗ್ರಾಮೀಣ ಭಾಗದ ರೈತರಿಗೆ ವಿತರಿಸಿ, ನಂತರ ನರೇಗಲ್ಲ ಪ.ಪಂ ವ್ಯಾಪ್ತಿಯ ಕೋಡಿಕೊಪ್ಪ, ಕೋಚಲಾಪೂರ, ದ್ಯಾಂಪೂರ, ಮಲ್ಲಾಪೂರ, ತೋಟಗಂಟಿ ಗ್ರಾಮಗಳ ರೈತರಿಗೆ ವಿತರಣೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಕೇವಲ 50 ಜನ ರೈತರಿಗೆ ಲಾಟರಿ ಮೂಲಕ ಆಯ್ಕೆ ಮಾಡಿ, ತಾಡಪಾಲ್‌ ವಿತರಿಸಲಾಗಿದೆ. ಗ್ರಾಮೀಣ ಭಾಗದ ರೈತರಿಗೆ ನೇರವಾಗಿ ವಿತರಿಸಿ, ನರೇಗಲ್ಲ ಭಾಗದ ರೈತರಿಗೆ ಮಾತ್ರ ಲಾಟರಿ ಪದ್ದತಿಯಲ್ಲಿ ವಿತರಿಸಲಾಗಿದೆ. ಅಲ್ಲದೆ ಲಾಟರಿಯಲ್ಲಿ ಒಂದೇ ಕುಟುಂಬದವರಿಗೆ ನಾಲ್ಕು ಐದು ತಾಡಪಾಲ್‌ ನೀಡಲಾಗಿದೆ. ಇದರಿಂದಾಗಿ ಉಳಿದ ರೈತರಿಗೆ ಅನ್ಯಾಯವಾಗಿದೆ. ಅಲ್ಲದೇ ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ತಾಡಪಾಲ್‌ ವಿತರಿಸಿ, ನರೇಗಲ್ಲ ಹಾಗೂ ಮಜರೆ ಗ್ರಾಮಗಳ ರೈತರಿಗೆ ಕೇವಲ 50 ತಾಡಪಾಲ್‌ ವಿತರಿಸಿ ಅನ್ಯಾಯ ಮಾಡಲಾಗಿದೆ. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ. ತಕ್ಷಣವೇ ಹೆಚ್ಚಿನ ಪ್ರಮಾಣದ ದಾಸ್ತಾನು ತರಿಸಿಕೊಂಡೂ, ತಾಡಪಾಲ್‌ ಸೀಗದಿರುವ ರೈತರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.
ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಾಳಪ್ಪ ಸೋಮಗೊಂಡ ಮಾತನಾಡಿ, ತರಾತುರಿಯಲ್ಲಿ ತಾಡಪಾಲ್‌ ವಿತರಣೆ ಪ್ರಾರಂಭಿಸಿದ ಕಾರಣಕ್ಕೆ ಸಮಸ್ಯೆ ಉದ್ಭವವಾಗಿದೆ. ಸಮರ್ಪಕವಾದ ದಾಸ್ತಾನು ಬಂದ ಮೇಲೆ ವಿತರಣೆಯನ್ನು ಪ್ರಾರಂಭಿಸಬೇಕಿತ್ತು. ಅದನ್ನು ಬಿಟ್ಟು, ಕೇಲವು ಪ್ರಭಾವಿಗಳ ಒತ್ತಡಕ್ಕೆ ಮಣಿದು ಬೇಕಾ ಬಿಟ್ಟಿಯಾಗಿ ತಾಡಪಾಲ್‌ ವಿತರಿಸಲಾಗಿದೆ. ಬಹುತೇಕ ರೈತರಿಗೆ ತಾಡಪಾಲ್‌ ಸಿಕ್ಕಿಲ್ಲ. ನರೇಗಲ್ಲದಲ್ಲ್ಲಿ ಹೋಬಳಿಯ ರೈತ ಸಂಪರ್ಕ ಕೇಂದವಿದ್ದರೂ ಸಹ ಇಲ್ಲಿನ ರೈತರಿಗೆ ತಾಡಪಾಲ್‌ ವಿತರಿಸಲಾಗಿಲ್ಲ. ರೈತರ ಮಧ್ಯೆ ತಾರತಮ್ಯ ಮಾಡಲಾಗುತ್ತಿದೆ. ಈ ಭಾಗದ ರೈತರಿಗೆ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ಲಭಿಸುತ್ತಿಲ್ಲವೆಂದರೆ, ಈ ಕೇಂದ್ರ ಇದ್ದು ಏನು ಉಪಯೋಗ? ಆದ್ದರಿಂದ ಎಲ್ಲ ರೈತರಿಗೂ ಸರ್ಕಾರದ ಯೋಜನೆಯನ್ನು ಯಾವುದೇ ಬೇಧ ಭಾವವಿಲ್ಲದೆ ಮುಟ್ಟಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದರು.
ಸುಮಾರು ಎರಡು ಗಂಟೆಗಳ ಕಾಲ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಲಾಗಿತ್ತು. ಸಹಾಯಕ ಕೃಷಿ ನಿರ್ದೇಶಕ ಸಿದ್ದೇಶ ಕೋಡಿಹಳ್ಳಿ ದೂರವಾಣಿ ಮೂಲಕ ಪ್ರತಿಭಟನಾ ನಿರತ ರೈತರಿಗೆ ಸಮಾಧಾನಿಸಿ, ಪ್ರಸಕ್ತ ವರ್ಷ ಕಡಿಮೆ ಪ್ರಮಾಣದಲ್ಲಿ ತಾಡಪಾಲ್‌ಗಳು ಬಂದಿದ್ದು, ಎಲ್ಲ ಭಾಗಗಳಿಗೆ ಹಂಚಿಕೆ ಮಾಡಲಾಗಿದೆ. ಅದರಂತೆ ನರೇಗಲ್ಲ ರೈತ ಸಂಪರ್ಕ ಕೇಂದ್ರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗಿದೆ. ಆದರೂ ಇನ್ನೂ ಹೆಚ್ಚನ ಬೇಡಿಕೆ ಬಂದಿರುವುದರಿಂದ ಮೇಲಾಧಿಕಾರಿಗಳ ಗಮನಕ್ಕೆ ತಂದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಾಡಪಾಲ್‌ಗಳನ್ನು ತರಿಸಲು ಪ್ರಯತ್ನಿಸುತ್ತೆನೆ ಎಂದು ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆದರು.
ಬಿ.ಕೆ. ಪೊಲೀಸ್‌ಪಾಟೀಲ, ಶರಣಪ್ಪ ಸೋಮಗೊಂಡ, ಶರಣಪ್ಪ ಹೊಸಮನಿ, ಹುಲಗಪ್ಪ ಬಂಡಿವಡ್ಡರ, ಮಲ್ಲಿಕಾರ್ಜುನ ಹೂಗಾರ, ಶಿವನಗೌಡ ಮದ್ನೂರ, ಆನಂದ ಕಳಕಣ್ಣವರ, ಕುಬೇರಪ್ಪ ಹೂಗಾರ, ಸೇರಿದಂತೆ ಮಜರೆ ಗ್ರಾಮಗಳ ರೈತರು ಉಪಸ್ಥಿತರಿದ್ದರು.

loading...