ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ತಿರ್ಮಾಣ

0
11
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಬಳ್ಳಾರಿ, ರಾಯಚೂರು, ಹಾಗೂ ಕೊಪ್ಪಳ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದಿಂದ ಇಂದಿನಿಂದಲೆ ಕುಡಿಯುವ ನೀರಿಗಾಗಿ ವಿವಿಧ ಕಾಲುವೆಗಳಿಂದ ಹಾಗೂ ಜು. 20 ರಿಂದ ಬೆಳೆಗಳಿಗೆ ನೀರು ಹರಿಸುವುದಕ್ಕೆ ತುಂಗಭದ್ರಾ ಯೋಜನೆಯ 111ನೇ ನೀರಾವರಿ ಸಲಾಹ ಸಮಿತಿ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಗಿದೆ ಎಂದು ಪಶುಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಸೋಮವಾರ ಕಾಡಾ ಟ.ಬಿ.ಪಿ ಮುನಿರಾಬಾದ್ ಸಭಾಂಗಣದಲ್ಲಿ ನಡೆದ ಐಸಿಸಿ ಸಭೆಯುಲ್ಲಿ ಮಾತನಾಡಿದ ಅವರು, ಜಲಾಶಯದಲ್ಲಿ ತುಂಬಿಕೊಂಡಿರುವ ಹೊಳೆತ್ತುವುದಕ್ಕೆ ಪರ್ಯಾಯ ಕ್ರಮಗಳು, ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಆಂಧ್ರ ಪ್ರದೇಶ ಸರ್ಕಾರದ ಅಧಿಕಾರಿಗಳ ಕಿರುಕುಳ, ಖಾಲಿ ಇರುವ ಹುದ್ದೆ ಭರ್ತಿ, ಕಾರ್ಖಾನೆಗಳಿಗೆ ನೀರು ಹಂಚಿಕೆ, ಕುಡಿಯುವ ನೀರಿನ ಯೋಜನೆಗಳು, ಗುಣಮಟ್ಟದ ಕಾಮಗಾರಿಗಳ ನಿರ್ವಹಣೆ ಸೇರಿದಂತೆ ಇತರೆ ವಿಷಯಗಳ ಕುರಿತು ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಡ್ಯಾಂನಲ್ಲಿ ತುಂಬಿಕೊಂಡಿರುವ ಹೊಳೆತ್ತುವುದಕ್ಕೆ ಪರ್ಯಾಯ ಕ್ರಮಗಳು, ಸಿಂಗಟಾಲೂರು ಏತನೀರಾವರಿ ಯೋಜನೆಯಿಂದ ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಗೆ ಯೋಜನೆ ಉದ್ದೇಶದಂತೆ ನೀರು ಬಳಕೆ ಮಾಡಿಕೊಳ್ಳುವುದು, ಹಾಗೂ ಪಾವಗಡಕ್ಕೆ ನೀರು ಬಿಡುವ ವಿಚಾರವಾಗಿ ಸದ್ಯದಲ್ಲಿ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಜಲಾಶಯದ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಶೀಘ್ರ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ವೆಂಕಟರಾವ್ ನಾಡಗೌಡ ಅವರು ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜು. 16 ರಿಂದ ಮೂರು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ತಕ್ಷಣದಿಂದ ನೀರು ಬಿಡಲಾಗತ್ತಿದ್ದು, ಜು.20 ರಿಂದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ, ಬಲದಂಡೆ ಮೇಲ್ಮಟ್ಟದ ಕಾಲುವೆ, ಬಲದಂಡೆ ಕೆಳಮಟ್ಟದ ಕಾಲುವೆ, ರಾಯ ಬಸವಣ್ಣ ಕಾಲುವೆ ಹಾಗೂ ಎಡದಂಡೆ ಮೇಲ್ಮಟ್ಟದ ಕಾಲುವೆಗಳಿಂದ ಬೆಳೆಗಳಿಗೆ ನೀರು ಬಿಡಲಾಗುತ್ತದೆ. ಇದೇ ವೇಳೆ ಆಂಧ್ರ ಪ್ರದೇಶಕ್ಕೂ ನೀರು ಹರಿಸಲಾಗುತ್ತದೆ.
1 ಟಿಎಂಸಿ ಕುಡಿಯುವ ನೀರಿಗಾಗಿ ರಾಯಚೂರ ಜಿಲ್ಲೆ ಗಣೇಕಲ್ ಜಲಾಶಯಕ್ಕೆ ಬಿಡುವುದು. ಬಳ್ಳಾರಿ ಜಿಲ್ಲೆಯ ಗುಂಡಿಗನೂರು ಕೆರೆಗೆ 2 ಟಿಎಂಸಿ ನೀರು ಬಿಡುವುದು ಹಾಗೂ ಇದಕ್ಕೆ ಆಂಧ್ರದ ಅಧಿಕಾರಿಗಳು ಯಾವುದೇ ತಕರಾರು ಮಾಡದಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಉಳಿದಂತೆ ಜಲಾಶಯದಿಂದ ಪ್ರತಿ ದಿನ 2,500 ಕ್ಯೂಸೆಕ್ ನಂತೆ ಎಡದಂಡೆ ಮುಖ್ಯ ಕಾಲುವೆ ಮೂಲಕ ನೀರು ಹರಿಸಲು ನಿರ್ಧಾರ. ಜುಲೈ 20 ರಿಂದ ನವೆಂಬರ್ 30 ರವರೆಗೆ ಎರಡು ಪ್ರಮುಖ ಕಾಲುವೆಗೆ ಕೃಷಿಗಾಗಿ ಎಡದಂಡೆ ಮುಖ್ಯ ಕಾಲುವೆಗೆ ಕಾಲುವೆಗೆ ಕೃಷಿಗೆ ಪ್ರತಿ ದಿನ 4100 ಕ್ಯೂಸೆಕ್ ನೀರು, ಬಲದಂಡೆ ಕೆಳ ಮಟ್ಟದ ಕಾಲುವೆಗೆ ಕೃಷಿಗೆ ಪ್ರತಿ ದಿನ 750 ಕ್ಯೂಸೆಕ್ ನೀರು, ಹಾಗೂ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜುಲೈ 19 ರಿಂದ ಕೃಷಿಗೆ ಪ್ರತಿ ದಿನ 1200 ಕ್ಯೂಸೆಕ್ ನೀರು ಹರಿಸಲು ಐಸಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ತಜ್ಞರ ವರದಿ ಆಧಾರಿಸಿ ತುಂಗಭದ್ರಾ ಹೊಳೆತ್ತುವುದು ಅಸಾಧ್ಯ ಎಂದು ಸರ್ಕಾರ ವಿಧಾನಸಭೆಯಲ್ಲಿ ಹೇಳಿಕೆ ಕೊಟ್ಟಿದೆ ಎಂದು ಹೇಳಿದ ಸಚಿವ ನಾಡಗೌಡ ಅವರು ಇದಕ್ಕಾಗಿ ಪರ್ಯಾಯ ಕ್ರಮಗಳನ್ನು ತೆಗದುಕೊಂಡು ನೀರು ಬಳಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಜಿಲ್ಲೆಯ ನವಲಿ ಬಳಿ ನೀರು ಸಂಗ್ರಹಣೆ ಮಾಡುವ ಕುರಿತು ಸರ್ಕಾರದ ಗಮನದಲ್ಲಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ಬಳಿಕ ಈ ಬಗ್ಗೆ ಅಂತಿಮ ತಿರ್ಮಾನಕ್ಕೆ ಬರಲಾಗುತ್ತದೆ ಎಂದು ಹೇಳಿದ್ದಾರೆ.
ತುಂಗಭದ್ರಾ ಜಲಾಶಯದಿಂದ ಪಾವಗಡಕ್ಕೆ ನೀರು ಬಿಡಲಾಗುತ್ತದೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಐಸಿಸಿಯಲ್ಲಿ ನಿರ್ಣಯವಾಗಿಲ್ಲ. ಆದರೆ ಇದು ಸಚಿವ ಸಂಪುಟ ಸಭೆಯಲ್ಲಿ ತಿರ್ಮಾನವಾಗಿದ್ದರಿಂದ ಹಾಗೂ ಕುಡಿಯುವ ನೀರಿನ ಉದ್ದೇಶವಾಗಿರುವದರಿಂದ ನಾವು ಅದಕ್ಕೆ ಈ ಸಭೆಯಲ್ಲಿ ಏನೂ ಮಾಡಲು ಆಗುವುದಿಲ್ಲವೆಂದರು. ಮಂಜೂರಿ ಆಗಿರುವ 351 ಸಿಬ್ಬಂದಿಗಳ ಪೈಕಿ ಕೇವಲ 132 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 219 ಹುದ್ದೆಗಳು ಖಾಲಿ ಇದ್ದು ಇವುಗಳಿಗೆ ತಕ್ಷಣ ಭರ್ತಿ ಮಾಡಿಕೊಡುವಂತೆ ಸಭೆಯು ಸರ್ಕಾರದ ಗಮನಕ್ಕೆ ತರಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಬಿ.ವಿ.ನಾಯಕ, ಶಾಸಕ ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗರ, ಪ್ರತಾಪಗೌಡ, ನಾಗೇಂಧ್ರ, ಸೋಮಶೇಖರ ರಡ್ಡಿ, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಜೆ.ಎಸ್.ಗಣೇಶ, ಸೇರಿದಂತೆ ಬಳ್ಳಾರಿ, ಕೊಪ್ಪಳ, ರಾಯಚೂರ ಜಿಲ್ಲೆಗಳ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಎಸ್ಪಿ ಡಾ.ಅನೂಪ್ ಶೆಟ್ಟಿ, ಮುಖ್ಯ ಇಂಜನೀಯರ್ ಶಂಕರಗೌಡ ಇದ್ದರು.

loading...