ದೇಶದ ಅಭಿವೃದ್ಧಿ ದೃಷ್ಟಿಯಿಂದ ಜನಸಂಖ್ಯೆ ಕಡಿಮೆಯಾಗಬೇಕು: ಶಾಸಕ ದಿನಕರ

0
11
loading...

ಕನ್ನಡಮ್ಮ ಸುದ್ದಿ-ಕುಮಟಾ: ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಜನಸಂಖ್ಯೆ ಕಡಿಮೆಯಾಗಬೇಕಾದ ಅಗತ್ಯವಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನಸಂಖ್ಯೆ ನಿಯಂತ್ರಣದ ಹಲವಾರು ಕಾರ್ಯಕ್ರಮಗಳ ನಡುವೆಯು ಜನಸಂಖ್ಯೆ ಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಒಂದುಕಡೆ ಜನಸಂಖ್ಯೆ ಬೆಳೆದರೂ ಕ್ರೀಡಾ ಕ್ಷೇತ್ರದಲ್ಲಿ ನಾವು ಅತೀ ಹಿಂದಿದ್ದೇವೆ. ಇಂದಿನ ಆಧುನಿಕತೆಯಲ್ಲಿ ಜನರು ಸಂಪತ್ತು ಗಳಿಕೆಗಿಂತ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಅಗತ್ಯ. ಭಾರತ ವಿಶ್ವದಲ್ಲಿ ಅತಿ ಹೆಚ್ಚು ಜನ ಸಂಖ್ಯೆವುಳ್ಳ ಎರಡನೇ ರಾಷ್ಟ್ರ. ಬೆಳೆಯುವ ಜನಸಂಖ್ಯೆಯಿಂದ ದೀರ್ಘಕಾಲದ ಯೋಜನೆಗಳ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದ್ದು, ಅಭಿವೃದ್ಧಿಗೆ ಹಿನ್ನೆಡೆಯಾಗುತ್ತದೆ. ಕಡಿಮೆ ಜನಸಂಖ್ಯೆವುಳ್ಳ ವಿಶ್ವದ ಇತರ ರಾಷ್ಟ್ರಗಳು ಅಭಿವೃದ್ಧಿಗೊಂಡಿರುವುದು ಗಮನಾರ್ಹ ಎಂದರು.
ತಾಲೂಕಾ ವೈದ್ಯಾಧಿಕಾರಿ ಡಾ ಆಜ್ಞಾ ನಾಯಕ ಅವರು ಪ್ರಾಸ್ತಾವಿಕ ಮಾತನಾಡಿ, ಜನಸಂಖ್ಯೆ ಏರಿಕೆಯಿಂದ ಉಂಟಾಗುವ ದುಷ್ಪರಿಣಾಮ ಹಾಗೂ ಜನಸಂಖ್ಯೆ ನಿಯಂತ್ರಣಕ್ಕೆ ಕೈಗೊಂಡಿರುವ ಹಲವಾರು ಕಾರ್ಯಕ್ರಮಗಳ ಕುರಿತು ವಿವರಿಸಿದರು.
ತಾಲೂಕ ಪಂಚಾಯತ ಅಧ್ಯಕ್ಷೆ ವಿಜಯಾ ಪಟಗಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಉತ್ತಮ ಆರೋಗ್ಯ ಸೇವೆ ಗೈದ ಹಿರಿಯ ಆರೋಗ್ಯ ಸೇವಕಿಯರು ಹಾಗೂ ಆಶಾ ಕಾರ್ಯಕರ್ತೆಯನ್ನು ಸನ್ಮಾನಿಸಲಾಯಿತು. ಡಾ|| ರಾಧಿಕಾ ಕೊಡ್ಲೆಕೇರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರ್‌ ಜಿ ನಾಯ್ಕ ಸ್ವಾಗತಿಸಿದರು. ಹಿರಿಯ ಆರೋಗ್ಯಾಧಿಕಾರಿ ದಿನೇಶ ನಿರೂಪಿಸಿ, ವಂದಿಸಿದರು.

loading...