ನಗರದ ನೈರ್ಮಲ್ಯ ಸುಧಾರಣೆಗೆ ಕ್ರಮ ಕೈಗೊಳ್ಳಿ: ಹಾದಿಮನಿ

0
8
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ನರೇಗಲ್ಲ ಪಟ್ಟಣವನ್ನು ಸಂಪೂರ್ಣ ಬಯಲು ಶೌಚಮುಕ್ತ ಹಾಗೂ ಸುಂದರವಾಗಿಸಲು ಹಂತ ಹಂತವಾಗಿ ಯೋಜನೆ ತಯಾರಿಸಲಾಗಿದೆ. ಅದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪ.ಪಂ ಹಿರಿಯ ಆರೋಗ್ಯ ನಿರೀಕ್ಷಕ ಎನ್‌. ಎಂ. ಹಾದಿಮನಿ ಹೇಳಿದರು.
ಸ್ಥಳೀಯ ಪ.ಪಂ ಸಭಾಭವನದಲ್ಲಿ ಶನಿವಾರ ನಡೆದ ಸಿಟಿ ಸ್ಯಾನಿಟೇಶನ್‌ ಟಾಸ್ಕ್‌ ಫೋರ್ಸ್‌ ಕಮೀಟಿಯ ಪ್ರಥಮ ಸಭೆಯಲ್ಲಿ ಮಾತನಾಡಿದರು. ನಗರದ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಹರಿಸುವ ದೃಷ್ಟಿಯಿಂದ ಸಿಟಿ ಸ್ಯಾನಿಟೇಶನ್‌ ಟಾಸ್ಕ್‌ ಫೋರ್ಸ್‌ ಕಮೀಟಿ ರಚಿಸಲಾಗಿದ್ದು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ಈ ಕಮೀಟಿಯಲ್ಲಿ ಸದಸ್ಯರನ್ನಾಗಿಸಿಕೊಳ್ಳಲಾಗಿದೆ. ಬೆಂಗಳೂರು ಮೂಲದ ಟ್ರೈಲಿ ಪ್ರೈ.ಲೀ ಸಹಯೋಗದಲ್ಲಿ ಟಾಸ್ಕ್‌ ಫೋರ್ಸ್‌ ಕಾರ್ಯನಿರ್ವಹಿಸಲಿದೆ. ಸದಸ್ಯರೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸುವ ಮೂಲಕ ಪಟ್ಟಣದ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿಲಾಗುವುದು. ಕುಡಿಯುವ ನೀರು, ಶೌಚಾಲಯ, ಘನತ್ಯಾಜ ವಿಲೇವಾರಿ ಹಾಗೂ ಚರಂಡಿ ವ್ಯವಸ್ಥೆಗಳ ಸುಧಾರಣೆಯ ಉದ್ಧೇಶದಿಂದ ಟಾಸ್ಕ ಪೋರ್ಸ್‌ ರಚಿಸಲಾಗಿದೆ ಎಂದರು.
ಸಿಟಿ ಸ್ಯಾನಿಟೇಶನ್‌ ಟಾಸ್ಕ್‌ ಫೋರ್ಸ ಕಮೀಟಿಯ ಸದಸ್ಯ, ಉದ್ಯಮಿ ಬಸವರಾಜ ವಂಕಲಕುಂಟಿ ಮಾತನಾಡಿ, ನರೇಗಲ್ಲ ಪಟ್ಟಣದಲ್ಲಿ ಈ ಹಿಂದಿನಿಂದಲೂ ಸಾಕಷ್ಟು ಹಣವನ್ನು ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕಾಗಿ ವ್ಯಯಿಸಲಾಗಿದೆ. ಆದರೆ, ಶೌಚಾಲಯಗಳ ನಿರ್ವಹಣೆಯಿಲ್ಲದ ಕಾರಣ ನಿರ್ಮಾಣವಾದ ಕೇಲ ದಿನಗಳಲ್ಲಿ ಹಾಳಾಗುತ್ತಿವೆ. ಪಟ್ಟಣದ ವ್ಯಾಪ್ತಿಯಲ್ಲಿ ಸುಮಾರು 7 ಕಡೆಗಳಲ್ಲಿ ಮಹಿಳಾ ಸುಲಭ ಶೌಚಾಲಯಗಳನ್ನು ಲಕ್ಷಾಂತರ ರೂ.ಗಳನ್ನು ಖರ್ಚುಮಾಡಿ ನಿರ್ಮಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಬಹುತೇಕ ಶೌಚಾಲಯಗಳು ಹಾಳಾಗಿವೆ. ಆದ್ದರಿಂದ ಪ್ರಥಮವಾಗಿ ಸಾರ್ವಜನಿಕ ಶೌಚಾಲಯಗಳಿಗೆ ಸೂಕ್ತ ವ್ಯವಸ್ಥೆ ಹಾಗೂ ನಿರ್ವಹಣೆಯನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ನರೇಗಲ್ಲನ ಹಿರೇಕೆರೆ ಇಂದು ಸಾರ್ವಜನಿಕ ಶೌಚಾಲಯವಾಗಿದೆ. ಮೊದಲು ಕೆರೆಯನ್ನು ಸರ್ವೆ ಮಾಡಿಸಿ, ಒತ್ತುವರಿಯನ್ನು ತೆರವುಗೊಳಿಸಿ, ಸುತ್ತಲೂ ತಂತಿ ಬೇಲಿ ನಿರ್ಮಾಣ ಮಾಡಬೇಕು. ಅಂದಾಗ ಕೆರೆಯು ಉಳಿಯಲು ಸಾಧ್ಯ. ಪಟ್ಟಣದ ಕಲುಷಿತ ನೀರು ಒಂದು ಕಡೆ ಹಿರೇಕೆರೆಗೆ ಇನ್ನೊಂದು ಕಡೆ ನಾಗರ ಕೆರೆ ಸೇರುತ್ತಿದೆ. ಅದನ್ನು ತಪ್ಪಿಸಿ, ಕಲುಷಿತ ನೀರು ಶುದ್ಧಿಕರಣ ಘಟಕ ಸ್ಥಾಪಿಸಿ, ನೀರನ್ನು ಶುದ್ಧಿಕರಿಸುವ ಕಾರ್ಯವಾಗಬೇಕು ಎಂದರು.
ಟ್ರೈಲಿ ಪ್ರೈ.ಲಿ ನ ವಿವೇಕಾನಂದ ಹಾಗೂ ಶಶಿಕಲಾ ಮಾತನಾಡಿ ಸಿಟಿ ಸ್ಯಾನಿಟೇಶನ್‌ ಟಾಸ್ಕ್‌ ಫೋರ್ಸ್‌ನ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಶಿವಮ್ಮ ಬಾದನಟ್ಟಿ, ಪ.ಪಂ ಸದಸ್ಯರಾದ ಶರಣಬಸಪ್ಪ ಜುಟ್ಲ, ಯಲ್ಲಪ್ಪ ಮಣ್ಣವಡ್ಡರ, ಖಾದರಬಾಷಾ ಹೂಲಗೇರಿ, ಮುಖ್ಯ ಶಿಕ್ಷಕ ಡಿ.ಎಚ್‌. ಪರಂಗಿ, ಪೌರ ಕಾರ್ಮಿಕರ ಮುಖಂಡ ನೀಲಪ್ಪ ಚಳ್ಳಮರದ, ಮಲ್ಲಿಕಾರ್ಜುನ ದಿಂಡೂರ, ನಿಂಗಪ್ಪ ಮಡಿವಾಳರ, ಮಲ್ಲಯ್ಯ ಗುಂಡಗೋಪೂರಮಠ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ.ಪಂ ಸಿಬ್ಬಂದಿ ಎಸ್‌.ಎ. ಜಕ್ಕಲಿ ನಿರ್ವಹಿಸಿದರು.

loading...