ನಳಗಳಿಗೆ ಮೀಟರ್‌ ಅಳವಡಿಕೆ ಅವೈಜ್ಞಾನಿಕ: ಬಿಜೆಪಿ ಪ್ರತಿಭಟನೆ

0
11
loading...

ಕನ್ನಡಮ್ಮ ಸುದ್ದಿ-ಶಿರಸಿ: ನಗರಾಡಳಿತ ಏಕಾಏಕಿ ನಳಗಳಿಗೆ ಮೀಟರ್‌ ಅಳವಡಿಸುವ ನಿರ್ಧಾರ ಕೈಗೊಂಡಿದ್ದು ಅವೈಜ್ಞಾನಿಕವಾಗಿದ್ದು, ಈ ಕುರಿತು ವಿಶೇಷ ಸಭೆ ನಡೆಸಿ ಜನಾನುಕೂಲಿ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿಗರು ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ಬುಧವಾರ ನಗರಸಭೆ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ ಬಿಜೆಪಿಗರು ನಗರಸಭೆ ನಿರ್ಣಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ನಗರದಲ್ಲಿ ಸಮರ್ಪಕ ನೀರಿನ ಸರಬರಾಜು ಇಲ್ಲ. 2-3 ದಿನಗಳಿಗೊಮ್ಮೆ ನೀರು ನೀಡಲಾಗುತ್ತಿದ್ದು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ನೀರಿನ ಕರ ಹೆಚ್ಚಿಸಲಾಗಿದೆ. ಈ ನಡುವೆ ಮೀಟರ್‌ ಕೂಡ ಗ್ರಾಹಕರೇ ಅಳವಡಿಸಿಕೊಳ್ಳಬೇಕು ಎಂಬುದು ಉದ್ಧಟತನವಾಗಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ 3 ವಾರ್ಡ್‌ಗಳಿಗೆ ನಗರಸಭೆಯಿಂದಲೇ ನಳಗಳಿಗೆ ಮೀಟರ್‌ ಅಳವಡಿಸಲಾಗಿತ್ತು. ಆದರೆ ಇದೀಗ ನಗರಸಭೆಯಲ್ಲಿ ಅಂದಾ ದರ್ಬಾರ್‌ ನಡೆಯುತ್ತಿದ್ದು, ಜನರಿಗೆ ಹೊರೆಯಾಗುವ ನಿರ್ಣಯ ಕೈಗೊಂಡಿರುವುದು ಖಂಡನೀಯ ಎಂದರು. ಮೀಟರ್‌ ಅಳವಡಿಕೆ ಕುರಿತು ತರಾತುರಿಯ ನಿರ್ಣಯದಿಂದಲೇ ಇಂದು ಗೊಂದಲ ಸೃಷ್ಟಿಯಾಗುತ್ತಿದೆ. ಹಾಗಾಗಿ ತಕ್ಷಣ ಈ ಬಗ್ಗೆ ವಿಶೇಷ ಸಭೆ ಕರೆದು ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರ ವ್ಯಾಪ್ತಿಯಲ್ಲಿ 24 ಗಂಟೆ ನೀರು ಸರಬರಾಜು ಮಾಡಬೇಕು ಎಂಬ ನಿಯಮವಿದ್ದರೂ ಪಾಲನೆ ಆಗುತ್ತಿಲ್ಲ. ನಳದಲ್ಲಿ ನೀರೇ ಬರದ ಇಂತಹ ಸನ್ನಿವೇಶದಲ್ಲಿ ಮೀಟರ್‌ ಅಳವಡಿಕೆಗೆ ತರಾತುರಿ ಏಕೆ? ಎಂಬ ಅನುಮಾನ ಕಾಡುತ್ತಿದೆ ಎಂದು ಬಿಜೆಪಿ ಪ್ರಮುಖ ನಂದನ ಸಾಗರ ಹೇಳಿದರು. ಬಿಜೆಪಿ ಅಧಿಕಾರಾವಧಿಯಲ್ಲಿ ಹಾಕಿಸಿದ ಮೀಟರ್‌ಗಳ ರೀಡಿಂಗ್‌ ಈವರೆಗೆ ನಡೆದಿಲ್ಲ. ಇದರಿಂದ ನಗರಸಭೆಗೆ ಅಂದಾಜು 15 ಲಕ್ಷ ರೂಪಾಯಿಗೂ ಅಧಿಕ ನಷ್ಟವಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳದೇ ಇದೀಗ ಹೊಸದಾಗಿ ಮೀಟರ್‌ ಅಳವಡಿಸುತ್ತಿರುವುದು ಹಾಸ್ಯಾಸ್ಪದ ಎಂದರು.
‘ನಳಕ್ಕೆ ಮೀಟರ್‌ ಜೋಡಣೆ ಪಾರದರ್ಶಕವಾಗಿ ಮಾಡಬೇಕು. ತರಾತುರಿಯಲ್ಲಿ ಮೀಟರ್‌ ಅಳವಡಿಕೆ ಕ್ರಮ ಕೈಬಿಡಬೇಕು. ನಗರದ ಹಲವೆಡೆ ಸಿಸಿ ಕ್ಯಾಮರಾ ಅಳವಡಿಸುತ್ತಿದ್ದು, ಸಮರ್ಪಕವಾಗಿ ನಡೆಸಬೇಕು. ಅತಿಕ್ರಮಣದಾರರಿಗೂ ನಳದ ಜೋಡಣೆ ಕೊಡಬೇಕು. ನಗರ ವ್ಯಾಪ್ತಿಯ ಗಟಾರ ಸ್ವಚ್ಛತೆ ನಿರ್ವಹಿಸಬೇಕು. ನಿತ್ಯವೂ ನೀರು ಸರಬರಾಜು ಮಾಡಬೇಕು. ಫಾರ್ಮ ನಂಬರ್‌ 3 ವಿತರಣೆಯಲ್ಲಿ ಸರಳೀಕರಣ ತರಬೇಕು. ಖಾತಾ ಬದಲಾವಣೆಗೆ ವೇಗ ನೀಡಬೇಕು’ ಎಂದು ಮನವಿ ನೀಡಲಾಯಿತು.
ಪೌರಾಯುಕ್ತೆ ಅಶ್ವಿನಿ ಬಿ.ಎಂ. ಮನವಿ ಸ್ವೀಕರಿಸಿ, ಮೀಟರ್‌ ಅಳವಡಿಕೆ ಸರ್ಕಾರದ ಸೂಚನೆಯಾಗಿದ್ದು, ಪಾಲನೆಯಷ್ಟೇ ನಗರಸಭೆ ಮಾಡುತ್ತಿದೆ. ಈ ಕುರಿತು ನಗರಸಭೆ ಸದಸ್ಯರೇ ಸರ್ವಾನುಮತದಿಂದ ಒಪ್ಪಿಗೆ ನೀಡಿದ ಕಾರಣ ಅನುಷ್ಠಾನವಾಗಿದೆ ಎಂದರು. ವಿದ್ಯುತ್‌ ಸಮಸ್ಯೆಯಿಂದ ನಿತ್ಯವೂ ನೀರು ನೀಡಲು ಸಮಸ್ಯೆಯಾಗಿತ್ತು. ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಯಲಿದ್ದು ನಗರವಾಸಿಗಳಿಗೆ ನಿತ್ಯವೂ ನೀರು ಪೂರೈಸಲಾಗುವುದು ಎಂದು ಹೇಳಿದರು.
ಈ ವೇಳೆ ಗ್ರಾಮೀಣ ಘಟಕದ ಅಧ್ಯಕ್ಷ ಆರ್‌.ವಿ.ಹೆಗಡೆ, ಪಕ್ಷದ ಪ್ರಮುಖರಾದ ಶೋಭಾ ನಾಯ್ಕ, ವೀಣಾ ಭಟ್ಟ, ಉಷಾ ನಾಯ್ಕ, ರಮಾಕಾಂತ ಭಟ್ಟ, ರಿತೇಶ ಕೆ., ಸಿಕಂದರ್‌ ಶುಂಠಿ, ನಗರಸಭೆ ಸದಸ್ಯರಾದ ರವಿ ಚಂದಾವರ, ಶ್ರೀಧರ ಮೊಗೇರ, ಶ್ರೀಧರ ಕಂಚುಗಾರ, ರಮೇಶ ಆಚಾರಿ, ಅರುಣ ಕೋಡ್ಕಣಿ, ವೀಣಾ ಶೆಟ್ಟಿ, ಪವಿತ್ರಾ ಹೊಸೂರು ಹಾಗೂ ಇತರರು ಇದ್ದರು.

loading...