ನಳಗಳಿಗೆ ಮೀಟರ್‌ ಅಳವಡಿಕೆ: ಸಾರ್ವಕನಿಕರ ಗೊಂದಲ

0
10
loading...

ಕನ್ನಡಮ್ಮ ಸುದ್ದಿ-ಶಿರಸಿ: ನಗರಸಭೆ ವ್ಯಾಪ್ತಿಯಲ್ಲಿ ನಳಕ್ಕೆ ಮೀಟರ್‌ ಜೋಡಣೆ ವಿಚಾರವಾಗಿ ಕೆಲವು ಸ್ವಹಿತಾಸಕ್ತಿಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿವೆ. ಹೀಗೆ ಅನಗತ್ಯ ಆರೋಪ ಮಾಡುವವರು 500 ರೂಪಾಯಿಗೆ ಮೀಟರ್‌ ಅಳವಡಿಸಲು ಸಿದ್ದರಿದ್ದರೆ ನಗರಸಭೆ ಅನುಮತಿ ನೀಡುವ ಜೊತೆಗೆ ಜೋಡಣಾ ವೆಚ್ಚವನ್ನೂ ಸಹ ಭರಿಸಲಿದೆ ಎಂದು ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಸವಾಲು ಹಾಕಿದರು.
ಸೋಮವಾರ ಶಿರಸಿ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಗರಸಭೆ ಸೂಚಿಸಿದ ಗ್ರಾಹಕ ಸ್ನೇಹಿ ನಿಯಮಾವಳಿಗಳನ್ನು ಒಪ್ಪಿದ ಸಂಸ್ಥೆಯ ಮೀಟರ್‌ ಅಳವಡಿಕೆ ಆಸಕ್ತಿ ತೋರಲಾಗಿದೆಯೇ ವಿನಾ ಈ ವಿಚಾರದಲ್ಲಿ ನಗರಾಡಳಿತಕ್ಕೆ ಯಾವುದೇ ಲಾಭದ ಲೆಕ್ಕಾಚಾರವಿಲ್ಲ. ಕೆಲವು ಸ್ವಹಿತಾಸಕ್ತಿ ಇರುವ ವ್ಯಕ್ತಿಗಳು, ಈಗ ಜೋಡಿಸುತ್ತಿರುವ ಮೀಟರ್‌ ಕಳಪೆ ಗುಣಮಟ್ಟದ್ದಾಗಿದೆ, ಮಾರುಕಟ್ಟೆಯಲ್ಲಿ ಕೇವಲ 500 ರೂಪಾಯಿಗೆ ಸಿಗುತ್ತದೆ ಎಂಬೆಲ್ಲ ಹೇಳಿಕೆ ನೀಡುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಇದು ಚುನಾವಣಾ ಹೊಸ್ತಿಲಿನಲ್ಲಿ ಸ್ವಹಿತಾಸಕ್ತಿಗಳು ನಡೆಸುತ್ತಿರುವ ನಾಟಕವಾಗಿದೆ ಎಂದರು.
ನಗರಸಭೆ ಯಾರಿಗೂ ಮೀಟರ್‌ ಅಳವಡಿಸಲು ಗುತ್ತಿಗೆ ನೀಡಿಲ್ಲ. ಮೀಟರ್‌ಗೆ 4 ವರ್ಷಗಳ ಗ್ಯಾರಂಟಿ ಜೊತೆಗೆ ಉಳಿದ 3 ನಿಯಮಗಳನ್ನು ಪೂರೈಸಿದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದ ಗ್ರಾಹಕರಿಗೆ ಯಾವುದೇ ಅನಾನುಕೂಲವಿಲ್ಲ ಬದಲಾಗಿ ಸಾಕಷ್ಟು ಅನುಕೂಲವಾಗಲಿದೆ ಎಂದ ಅವರು, ಇಂತಹ ಅನಗತ್ಯ ಹೇಳಿಕೆ ನೀಡುವವರು ಹಾಗೊಮ್ಮೆ ನಗರಸಭೆ ಸೂಚಿಸಿದ ನಿಯಮಾವಳಿಗೊಳಪಟ್ಟು 500 ರೂಪಾಯಿಗೆ ಮೀಟರ್‌ ಅಳವಡಿಸಿದರೆ ಜೋಡಣಾ ವೆಚ್ಚವನ್ನು ನಗರಸಭೆಯೇ ಭರಿಸಲಿದೆ ಎಂದು ಹೇಳಿದರು.
ನಗರಾಡಳಿತ ಮೀಟರ್‌ ಅಳವಡಿಸದೇ ಹೋದರೆ ಮುಂದೆ ಸರ್ಕಾರದ ಆದೇಶದಡಿ ನಗರಸಭೆ ಸದಸ್ಯರು ಅದರ ಹೊರೆ ಹೊರಬೇಕಾಗುತ್ತದೆ. ಅಲ್ಲದೇ, ಅಧಿಕಾರಿಗಳಿಗೂ ತೊಂದರೆ ಆಗಬಹುದು. ಸದ್ಯ ಮೀಟರ್‌ಗೆ 980 ರೂ. ದರವಿದ್ದು, ಜೋಡಣೆಗೆ 200 ರೂ. ನಿಗದಿ ಮಾಡಲಾಗಿದೆ. ಇವೆಲ್ಲ ಗೊಂದಲ ಮುಗಿದರೆ ಕಾರ್ಯಕ್ಕೆ ವೇಗ ಸಿಗಲಿದೆ ಎಂದರು.
ನಗರಸಭಾ ಸದಸ್ಯ ಶ್ರೀಧರ ಮೊಗೇರ ಮಾತನಾಡಿ, ಮೀಟರ್‌ನ ಫಲಾನುಭವಿಗಳು ಜನರೇ ಆಗುವದರಿಂದ ನಗರಸಭೆಗೆ ನೇರವಾಗಿ ಟೆಂಡರ್‌ ಕರೆಯಲು ಬರುವದಿಲ್ಲ. ಇಂತದ್ದೇ ಕಂಪನಿಯ ಮೀಟರ್‌ ಅಳವಡಿಸಬೇಕೆಂಬ ಒತ್ತಾಯ ಯಾರೂ ಮಾಡಿಲ್ಲ. ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸದಸ್ಯರಾದ ಸುಧಾಕರ ಶೆಟ್ಟಿ, ರವಿ ಚಂದಾವರ, ಯಶವಂತ ಮರಾಠೆ, ರಾಕೇಶ ತಿರುಮಲೆ, ಖಾದರ ಅನವಟ್ಟಿ, ಫ್ರಾನ್ಸಿಸ್‌ ನರೋನ್ಹಾ, ಪ್ರಮುಖ ಬಶೀರ ಶೇಖ್‌ ಇದ್ದರು.

loading...