ನಿಖರತೆವಿರದ ಯೋಜನೆಗಳು ವಿಫಲವಾಗುತ್ತವೆ: ತುಕಾರಾಮ ರಾವ್

0
0
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಜನರ ಅಭ್ಯುದಯಕ್ಕಾಗಿ ಸರ್ಕಾರ ರೂಪಿಸುವ ಯಾವುದೇ ಯೋಜನೆಗಳು, ಆಯಾ ವ್ಯಾಪ್ತಿಯ ಅಂಕಿ-ಅಂಶಗಳ ನಿಖರತೆಯನ್ನು ಅವಲಂಬಿಸಿರುತ್ತದೆ. ಅಂಕಿ-ಅಂಶಗಳ ನಿಖರತೆಯಲ್ಲಿ ವ್ಯತ್ಯಾಸವಾದಲ್ಲಿ ಅಂತಹ ಯೋಜನೆಗಳು ವಿಫಲವಾಗುತ್ತವೆ ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಮ್ ರಾವ್ ಹೇಳಿದರು.

ನಗರದ ಗವಿಸಿದ್ದೇಶ್ವರ ಪ.ಪೂ. ಮಹಾವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭಾರತದ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್ ರವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಪರಿಣಾಮಕಾರಿ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಗಳು ಏಕೆ ಬೇಕು, ಯಾವ ರೀತಿ ಅನುಷ್ಠಾನಗೊಳ್ಳಬೇಕು, ಯಾವ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು ಎನ್ನುವುದರ ಬಗ್ಗೆ ಅಂಕಿ-ಅಂಶಗಳ ಸಹಿತ ಸಾಕಾರಗೊಳ್ಳುವಲ್ಲಿ ಪ್ರೊ. ಮಹಾಲನೋಬಿಸ್ ಅವರ ಕೊಡುಗೆ ಅತ್ಯಂತ ಪ್ರಮುಖವಾಗಿದೆ ಎಂದ ಅವರು ಜಗತ್ತಿನ ಮುಂದುವರೆದಿರುವ ದೇಶಗಳು ವಸ್ತುನಿಷ್ಠ ಮಾದರಿಯಲ್ಲಿ ನಿಖರ ಮಾಹಿತಿ ಸಂಗ್ರಹಿಸುವ ಮೂಲಕವೇ ಯಶಸ್ಸು ಗಳಿಸಿವೆ. ಅವಶ್ಯಕತೆಗಳನ್ನು, ಆದ್ಯತತೆಗಳನ್ನು ಗುರುತಿಸಿ, ಅಗತ್ಯ ಯೋಜನೆಗಳನ್ನು ಸಿದ್ಧಪಡಿಸಲು, ಆದ್ಯತಾ ವಲಯಗಳನ್ನು ಗುರುತಿಸಲು, ಅಂಕಿ-ಸಂಖ್ಯೆ ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಅಂಕಿ-ಅಂಶಗಳ ಪ್ರಕುಖ ಪಾತ್ರ : ಸಾರ್ವಜನಿಕರ ಆಡಳಿತ ನಿಂತಿರುವುದೇ ಅಂಕಿ-ಅಂಶಗಳಿಂದ, ಹೀಗಾಗಿ ಅಂಕಿ-ಅಂಶಗಳನ್ನು ಸಮರ್ಪಕವಾಗಿ ಹೊಂದಾಣಿಕೆ ಮಾಡುವಂತಹದ್ದೇ ವ್ಯವಸ್ಥಿತ ಆಡಳಿತವಾಗಿದೆ ಎಂದು ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಭುರಾಜ ನಾಯಕ ಅವರು ಹೇಳಿದರು.

 

ಸಮಸ್ಯೆಗಳನ್ನು ಗುರುತಿಸಲು ಅಂಕಿ-ಅಂಶಗಳು ಅವಶ್ಯವಾಗಿವೆ. ಒಂದು ನಿರ್ಧಿಷ್ಟ ಗುರಿ ತಲುಪಬೇಕಾದರೆ, ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಲು, ಒಂದು ಯೋಜನೆ ಯಶಸ್ವಿಗೊಳ್ಳಬೇಕಾದರೆ ಹಾಗೂ ಯೋಜನೆಗಳ ನಿಯಂತ್ರಣ ಮಾಡಬೇಕಾದರೆ ಅಂಕಿ-ಅಂಶಗಳು ಮುಖ್ಯವಾಗಿವೆ. ಸರಿಯಾದ ಅಂಕಿ-ಅಂಶಗಳು ದೇಶಕ್ಕೆ ದೂರದೃಷ್ಟಿಯಲ್ಲಿ ಕೊಂಡೊಯುತ್ತವೆ. ಪ್ರೋ. ಪಿ.ಸಿ. ಮಹಾಲನೋಬಿಸ್ ಅವರು 2ನೇಯ ಪಂಚವಾರ್ಷಿಕ ಯೋಜನೆ ರೂಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದರು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಸಿದ್ದಲಿಂಗಪ್ಪ ಕೊಟ್ನೇಕಲ್ ವಹಿಸಿದ್ದರು. ಕಾಲೇಜಿನ ಉಪನ್ಯಾಸಕ ಪರೀಕ್ಷಿತರಾಜ್ ಅವರು ಮಾತನಾಡಿದರು. ಕಾಲೇಜಿನ ಉಪನ್ಯಾಸಕ ಗುರುರಾಜ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್ ಅವರ ಭಾವಚಿತ್ರಕ್ಕೆ ಎಲ್ಲ ಗಣ್ಯರು ಪುಷ್ಪನಮನ ಸಲ್ಲಿಸಿದರು. ಅಲ್ಲದೆ ದಿನಾಚರಣೆಯ ಅಂಗವಾಗಿ ಪ್ರೊ. ಪಿ.ಎಸ್. ಮಹಲನೋಬಿಸ್ ಅವರ ಸಂಕ್ಷಿಪ್ತ ಪರಿಚಯ ಅಳವಡಿಸಿದ ನೋಟ್‍ಬುಕ್‍ಗಳನ್ನು ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

loading...