ನಿಲ್ಲುವುದೆಂದು ವಾಹನಗಳ ಟಾಪ್‌ ಪ್ರಯಾಣ….?

0
13
loading...

ಧನ್ಯಕುಮಾರ ಧನಶೆಟ್ಟಿ
ಇಂಡಿ: ಎಗ್ಗಿಲ್ಲದೇ ಓಡಾಡುವ ಖಾಸಗಿ ಜೀಪುಗಳಿಗೆ ಸಂಚಾರಿ ನಿಯಮ ಪಾಲನೆ ಮತ್ತು ಪ್ರಯಾಣಿಕರನ್ನು ಕೂರಿಸಿಕೊಳ್ಳಲು ಮಿತಿ ಇಲ್ಲವೇ? ಇಂತಹ ಜೀಪುಗಳಲ್ಲಿ ಪ್ರಯಾಣ ಬೆಳೆಸಿ ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಿರುವ ನಾಗರಿಕರ ಪ್ರಶ್ನೆಯಾಗಿದೆ ಅಲ್ಲದೇ ಪೊಲೀಸರು ಎದುರುಗಡೆ ನಿಯಮ ಉಲ್ಲಂಘಣೆ ಮಾಡಿದರೂ ನಮಗೇನು ಸಂಬಂಧವಿಲ್ಲ ಅನ್ನುವಂತೆ ಪೊಲೀಸ ಇಲಾಖೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ನಾಗರಿಕರ ದೂರಾಗಿದೆ.
ಜನತೆಯ ದೂರಿಗೆ ಪೂರಕ ಎನ್ನುವಂತೆ ಬಹುತೇಕ ಖಾಸಗಿ ಜೀಪುಗಳು ಮಿತಿ ಮೀರಿದ ಅಂದರೆ 10 ಮಂದಿ ಕೂರುವ ಬದಲು 20 ರಿಂದ 30 ಪ್ರಯಾಣಿಕರನ್ನು ಕೂರಿಸಿಕೊಳ್ಳುವುದು ಅವ್ಯಾಹತವಾಗಿ ನಡೆದಿದೆ. ಇದರಿಂದ ಅನೇಕ ಬಾರಿ ಅಪಘಾತಗಳೂ ಸಂಭವಿಸಿದೆ. ಅಗರಖೇಡ, ಆಲಮೇಲ, ಸಿಂದಗಿ, ಸೋಲಾಪುರ ರಸ್ತೆಗಳಲ್ಲಿ ಇತ್ತೀಚಿಗೆ ಅಪಘಾತಗಳು ಸಂಭವಿಸಿ ಹಲವಾರು ಪ್ರಯಾಣಿಕರು ಮೃತ ಪಟ್ಟಿದ್ದು ಸಂಚಾರಿ ನಿಯಮ ಉಲ್ಲಂಘನೆಗೆ ತಾಜಾ ಉದಾರಣೆಗಳಾಗಿವೆ. ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿತೆಂದು ಹೇಳಲಾಗಿದೆ. ನಿಯಂತ್ರಣ ಕಳೆದುಕೊಳ್ಳಲು ಅತಿಯಾದ ವೇಗ ಹಾಗೂ ಹೆಚ್ಚು ಪ್ರಯಾಣಿಕರನ್ನು ಒಯ್ಯುವುದೇ ಪ್ರಮುಖ ಕಾರಣ ಎನ್ನುತ್ತಾರೆ ಸಾರ್ವಜನಿಕರು.
ಈಶಾನ್ಯ ಸಾರಿಗೆ ಇಲಾಖೆ ಬಸ್‌ ನಿಲ್ದಾಣದ ಮುಂದೆ 200 ಮೀ ದೂರದಲ್ಲಿ ಖಾಸಗಿ ವಾಹನಗಳು ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಬಸ್‌ ನಿಲ್ದಾಣದ ಬಾಗಿಲಲ್ಲೇ ನಿಲ್ಲಿಸುತ್ತಾರೆ ಮತ್ತು ಖಾಸಗಿ ವಾಹನಗಳ ಪಕ್ಕದಲ್ಲಯೇ ಪೊಲೀಸ್‌ ಪೇದೆ ನಿಂತಿದ್ದರು ಅವರು ಯಾವುದೇ ಕ್ರಮ ಕೈಕೊಳ್ಳುತ್ತಿಲ್ಲ ಇದರಿಂದ ನಾಗರಿಕರಿಗೆ ಬೇಸರ ಉಂಟು ಮಾಡಿದೆ ಮತ್ತು ಇಂಡಿ ಘಟಕದ ಬಸ್ಸ್‌ಗಳಲ್ಲಿ ಪ್ರಯಾಣಿಕರಿಲ್ಲದೇ ಘಟಕವು ಹಾನಿ ಉಂಟಾಗುತ್ತಿದೆ.
ಇನ್ನು ಸಂಚಾರಿ ನಿಯಮ ಪಾಲನೆ ಎಂಬುದು ಇಲ್ಲವೇ ಇಲ್ಲ ಇದರಿಂದಾಗಿ ದಿನನಿತ್ಯ ಹಲವಾರು ಅಪಘಾತಗಳು ಸಂಭವಿಸಿದೆ. ಇದರ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆಯ ಪಕ್ಕದಲ್ಲಿರುವ ಖಾಸಗಿ ಜೀಪುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಾಗರಿಕರ ಮನವಿಯಾಗಿದೆ.
ಅನುಚಿತ ವರ್ತನೆ; ಬಹತೇಕ ಖಾಸಗಿ ವಾಹನಗಳು ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ಅನೇಕ ಪ್ರಯಾಣಿಕರು ದೂರಿದ್ದಾರೆ. ಮತ್ತು ಕೆಲವರು ದರದಲ್ಲೂ ವಂಚನೆ ಮಾಡುತ್ತಾರೆ.
ಖಾಸಗಿ ಜೀಪಿನವರು ಪ್ರಯಾಣಿಕರನ್ನು ಕುರಿಯಂತೆ ತುಂಬಿಕೊಂಡು ಓಡಾಡುವ ದೃಶ್ಯವನ್ನು ವಿವಿಧ ಗ್ರಾಮಗಳಿಗೆ ಹೋಗುತ್ತಿರುವುದನ್ನು ಕಂಡು ಬರುತ್ತದೆ ಆದರೆ ಇವರು ಹೆಚ್ಚಿನ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ.
ಬೇರೆ ಕಡೆಯಿಂದ ಪರವಾನಗಿ ಪಡೆದ ಜೀಪುಗಳು ಪಟ್ಟಣದಿಂದ ವಿವಿಧ ಗ್ರಾಮಗಳಿಗೆ ಓಡಾಡುತ್ತಿವೆ. ಕೆಲವು ಚಾಲಕರಿಗೆ ಡ್ರೈವಿಂಗ್‌ ಲೈಸನ್ಸ್‌ ಇರುವುದಿಲ್ಲ. ಅಥವಾ ಆರ್‌ಟಿಓ ಅವರಿಗೆ ರಹದಾರಿ ಪರವಾನಗಿ ನೀಡಿದ್ದಾರೆಯೇ? ಹೆಚ್ಚಿದ ಜೀಪುಗಳಿಂದಾಗಿ ಅವರಲ್ಲೇ ಜಗಳಕ್ಕೆ ಕಾರಣವಾಗುತ್ತದೆ. ಇದಕ್ಕೆಲ್ಲ ಆರ್‌ಟಿಓ ಕಡಿವಾಣ ಹಾಕುವುದಿಲ್ಲವೇ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರು ಈ ಬಗ್ಗೆ ಎಚ್ಚರಿಕೆ ವಹಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಸಾರ್ವಜನಿಕರ ಮನವಿಯಾಗಿದೆ.

loading...