ನೀರಾ ತೆಗೆಯಲು ಅವಕಾಶ ಕಲ್ಪಿಸುವಂತೆ ಒತ್ತಾಯ

0
11
loading...

ಕನ್ನಡಮ್ಮ ಸುದ್ದಿ-ಕುಮಟಾ: ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಯಾದ ತೆಂಗಿಗೆ ಎಲ್ಲಿಲ್ಲದ ಬೇಡಿಕೆ ಇರುವುದಲ್ಲದೇ ತೆಂಗಿನ ಮರಗಳ ಪೋಷಣೆ ಮತ್ತು ನಿರ್ವಹಣೆ ಬೆಳೆಗಾರರಿಗೆ ಶ್ರಮದಾಯಕವಾಗಿದೆ. ಆದರೆ ಕೆಲ ರೋಗಗಳ ಬಾಧೆಯಿಂದ ಇಳುವರಿ ಕಡಿಮೆಯಾಗುವುದಲ್ಲದೆ ಕೋತಿಗಳ ಕಾಟದಿಂದ ಬೆಳೆ ನಾಶವಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ನಿಭಾಯಿಸಿಕೊಂಡ ಬಳಿಕ ದೊರೆಯುವ ಇಳುವರಿಗೆ ಸೂಕ್ತ ಬೆಲೆ ದೊರೆಯದ ಕಾರಣ ರೈತರು ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ. ಹಾಗಾಗಿ ಜಿಲ್ಲೆಯ ತೆಂಗು ಬೆಳೆಗಾರರ ಆರ್ಥಿಕ ಸುಧಾರಣೆಗೆ ನೀರಾ ತೆಗೆಯಲು ಅವಕಾಶ ಕಲ್ಪಿಸುವಂತೆ ಬೆಳೆಗಾರರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ದಿನನಿತ್ಯ ಬಳಸುವ ಬಹುತೇಕ ಆಹಾರ ಪದಾರ್ಥಗಳಲ್ಲಿ ತೆಂಗಿನ ಕಾಯಿಯನ್ನು ಬಳಸುವುದರಿಂದ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ತೆಂಗಿನ ಬೆಳೆ ಸಾಲದೆ, ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಬೆಲೆಗಳಲ್ಲಿ ಏರಿಳಿತವುಂಟಾದರೂ ಅದರ ಲಾಭವನ್ನು ಹೆಚ್ಚಾಗಿ ಮಧ್ಯವರ್ತಿಗಳೇ ಪಡೆಯುವುದರಿಂದ ಬೆಳೆಗಾರರ ಆರ್ಥಿಕ ಮಟ್ಟ ಸುಧಾರಣೆ ಅಡ್ಡಿಯಾಗಿರುವುದರಿಂದ ಪರ್ಯಾಯವಾಗಿ ಜಿಲ್ಲೆಯ ರೈತರಿಗೆ ನೀರಾ ತೆಗೆಯಲು ಅವಕಾಶ ನೀಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಲಾಗುತ್ತಿದೆ.
ಕುಮಟಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆರಂಭವಾದ ತೆಂಗು ಉತ್ಪಾದಕರ ಒಕ್ಕೂಟವು ಈ ದೀಶೆಯಲ್ಲಿ ಪ್ರಯತ್ನಿಸುತ್ತಿದ್ದು, ಜಿಲ್ಲೆಯ ಬಹುತೇಕ ರೈತರನ್ನು ಸಂಪರ್ಕಿಸಿ, ನೀರಾ ಯೋಜನೆಯ ಕುರಿತು ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ನೀರಾ ತೆಗೆಯಲು ಜಿಲ್ಲೆಯಲ್ಲಿ ಅವಕಾಶ ನೀಡುವಂತೆ ಕೋರಿ ಈಗಾಗಲೇ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ವಿನಂತಿಸಿದೆ. ನೀರಾ ತೆಗೆಯಲು ಸರ್ಕಾರ ಈಗಾಗಲೇ ಪರವಾನಗಿ ನೀಡಿದ್ದರಿಂದ ಒಕ್ಕೂಟ ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ ಜಿಲ್ಲಾಡಳಿತ ತೆಂಗು ಬೆಳೆಗಾರರ ಹಿತವನ್ನು ಗಮನದಲ್ಲಿಟ್ಟುಕೊಂಡು, ನೀರಾ ಯೋಜನೆ ಜಾರಿ ಮಾಡಲು ಸಮಿತಿಯೊಂದನ್ನು ರಚಿಸುವಂತೆ ಅಬಕಾರಿ ಇಲಾಖೆಗೆ ಸೂಚಿಸಿದೆ. ಇಲಾಖೆಯ ಅಧಿಕಾರಿಗಳು ಸಮಿತಿ ರಚಿಸಿದ ಬಳಿಕ ಈ ಯೋಜನೆಯ ಪ್ರಕ್ರಿಯೆ ಆರಂಭವಾಗಲಿದೆ. ಅಲ್ಲದೇ ಜಿಲ್ಲಾಡಳಿತವು ಜಿಲ್ಲೆಯಲ್ಲಿ ನೀರಾ ಯೋಜನೆ ಜಾರಿ ಮಾಡಲು ಸಮಿತಿಯೊಂದನ್ನು ರಚಿಸುವ ಜವಾಬ್ದಾರಿಯನ್ನು ಅಬಕಾರಿ ಇಲಾಖೆಗೆ ವಹಿಸಿ, ಐದಾರು ತಿಂಗಳು ಗತಿಸಿದರೂ ಸಮಿತಿ ರಚನೆಯಾಗಿಲ್ಲ. ಅಬಕಾರಿ ಅಧಿಕಾರಿಗಳು ಈ ಕುರಿತು ನಿರ್ಲಕ್ಷೃ ಧೋರಣೆ ತಾಳಿರುವುದಕ್ಕೆ ಇಲಾಖೆ ವಿರುದ್ಧ ರೈತರಿಗೆ ಅಸಮಧಾನ ಮೂಡುವಂತಾಗಿದೆ. ಸಮಿತಿ ರಚನೆ ಮಾಡುವಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.
ಈ ಕುರಿತು “ಕನ್ನಡ ಜನಾಂತರಂಗಕ್ಕೆ” ಪ್ರತಿಕ್ರಿಯಿಸಿದ ತೆಂಗು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಗಣಪತಿ ನಾಯ್ಕ ಅವರು, ನೀರಾ ಯೋಜನೆ ಜಾರಿ ಮಾಡುವ ಸಂಬಂಧ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ಅವರು ಅಬಕಾರಿ ಇಲಾಖೆಗೆ ಸೂಚಿಸಿದರೂ ಇನ್ನುವರೆಗೂ ಸಮಿತಿ ರಚನೆಯಾಗದೇ ಇರುವುದನ್ನು ಗಮನಿಸಿದರೆ ಕೆಲ ಮದ್ಯ ಮಾರಾಟಗಾರರು ಅಧಿಕಾರಿಗಳ ಮೇಲೆ ಒತ್ತಡ ಹೇರಿರುವ ಶಂಕೆ ಮೂಡುವಂತಾಗಿದೆ. ಹಾಗಾಗಿ ಈ ಕುರಿತು ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ತಿಳಿಸಿದ್ದಾರೆ.

loading...