ನೇಕಾರರಿಗೂ ಸಂಪೂರ್ಣ ಸಾಲ ಮನ್ನಾ ಮಾಡಿ: ದುಂಡಪ್ಪ

0
12
loading...

ಕನ್ನಡಮ್ಮ ಸುದ್ದಿ-ಬನಹಟ್ಟಿ; ರೈತ ನೇಕಾರ ಈ ದೇಶದ ಎರಡು ಕಣ್ಣಿದಂತೆ ಸರ್ಕಾರ ಇತ್ತೀಚಿಗೆ ಮಂಡಿಸಿದ ಬಜೆಟ್‌ನಲ್ಲಿ ನೇಕಾರರಿಗೆ ಅನ್ಯಾಯ ಮಾಡಿದೆ. ರೈತರಂತೆ ನೇಕಾರರಿಗೂ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ನೇಕಾರ ಮುಖಂಡ ದುಂಡಪ್ಪ ಮಾಚಕನೂರ ಹೇಳಿದರು.
ರಬಕವಿ-ಬನಹಟ್ಟಿ ತಾಲೂಕಾ ಕಚೇರಿ ಎದಿರು ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಸಮಸ್ತ ನೇಕಾರ ಬಾಂಧವರ ಬೃಹತ್‌ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಸಿಎಂ ಕುಮಾರಸ್ವಾಮಿಯವರು ಜು.6 ರಂದು ಮಂಡಿಸಿದ ಬಜೆಟ್‌ನಲ್ಲಿ ಕೇವಲ ರೈತರ ಸಾಲಮನ್ನಾ ಮಾಡಿದ್ದು. ಅದನ್ನು ನೇಕಾರರಿಗೂ ಅನ್ವಯಿಸುವಂತೆ ಕೂಡಲೇ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ನೇಕರರಿಗೆ ರೂ. 50 ಸಾವಿರ ಸಾಲ ಮನ್ನಾ ಮಾಡಿದ ಹಣವನ್ನು ಕೂಡಲೇ ನೇಕಾರರ ಖಾತೆಗೆ ಜಮಾ ಆಗುವಂತೆ ಕ್ರಮ ಜರುಗಿಸಬೇಕು. ನೇಕಾರರು ಪಡೆದ ಸಾಲದ ಮೇಲಿನ ಶೇ. 1% ಮತ್ತು 3%ರ ಬಡ್ಡಿ ಅನುದಾನ ಹಣ 2015 ರಿಂದ ಜಮಾ ಆಗಿರುವುದಿಲ್ಲ. ಅದು ಕೂಡಲೇ ಜಮಾ ಆಗಬೇಕು. ಇದನ್ನು ಸರಳಿಕರಿಸಿ ಪ್ರತಿ 6 ತಿಂಗಳಿಗೆ ಬಡ್ಡಿ ಅನುದಾನದ ಹಣ ನೇಕಾರನ ಸಾಲದ ಖಾತೆಗೆ ಜಮಾ ಆಗುವಂತೆ ಕ್ರಮ ಕೈಗೊಳ್ಳಬೇಕು. ಅತಿ ಹೆಚ್ಚು ನೇಕಾರ ಸಾಂದ್ರತೆ ಹೊಂದಿದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ನೂತನ ಮಾದರಿಯ ಜವಳಿ ಪಾರ್ಕ ಪ್ರಾರಂಭಿಸಿ ನೇಕಾರಿಕೆಯ ಉದ್ಯೋಗವನ್ನು ಅಭಿವೃದ್ಧಿ ಪಡಿಸಬೇಕು. ಕೆಎಚ್‌ಡಿಸಿ ನಿಗಮದ ಅಡಿಯಲ್ಲಿ ಕೆಲಸ ಮಾಡುವ ನೇಕಾರರ ಪರಸ್ಥಿತಿ ತುಂಬಾ ಚಿಂತಾಜನಕವಾಗಿದ್ದು, ಕೈಮಗ್ಗ ನೇಕಾರರ ಹಿತ ಕಾಪಾಡುವ ಸಲುವಾಗಿ ನಿಗಮಕ್ಕೆ ಕೂಡಲೇ ಕನಿಷ್ಠ 100 ಕೋಟಿ ಅನುದಾನದ ಹಣವನ್ನು ಬಿಡುಗಡೆ ಮಾಡಬೇಕು. ಕರ್ನಾಟಕ ಸರಕಾರವು ವಿವಿಧ ಇಲಾಖೆಗಳಿಗೆ ಸಮವಸ್ತ್ರಗಳನ್ನು ಬೇರೆ, ಬೇರೆ ರಾಜ್ಯಗಳಿಂದ ಖರೀದಿಸುತ್ತಿದ್ದು, ಅದನ್ನು ಕೆ.ಎಚ್‌ಡಿಸಿ ಹಾಗೂ ಕೆ.ಎಸ್‌.ಪಿ.ಡಿ.ಸಿ ಯಿಂದ ಖರೀದಿಸುವ ವ್ಯವಸ್ಥೆ ಆಗಬೇಕು. ಇದರಿಂದ ರಾಜ್ಯದ ನೇಕಾರರಿಗೆ ಉದ್ಯೋಗ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ.
ನೇಕಾರ ಕಾರ್ಮಿಕರು ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ನೇಕಾರ ಮಕ್ಕಳಿಗೆ ಕೊಡುತ್ತಿರುವ ಶಿಷ್ಯ ವೇತನವನ್ನು ಸುಮಾರು 2 ವರ್ಷಗಳಿಂದ ಬಂದಾಗಿರುತ್ತದೆ ಇದ್ದರಿಂದ ನೇಕಾರ ಮಕ್ಕಳಿಗೆ ಸಾಕಷ್ಟು ತೊಂದರೆಯಾಗಿರುತ್ತದೆ. ಕಾರಣ ಈ ಯೋಜನೆಯನ್ನು ಪುನಃ ಜಾರಿಗೊಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮತ್ತೋರ್ವ ನೇಕಾರ ಮುಖಂಡ ಬ್ರಿಜ್‌ಮೋಹನ ಡಾಗಾ, ನಮ್ಮ ಈ ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ಈಗ ನಡೆದಿರುವ ಬಜೆಟ್‌ ಅಧಿವೇಶನದಲ್ಲಿ ಮಂಜೂರು ಮಾಡಬೇಕಾಗಿ ವಿನಂತಿ. ಮಾಡದೆ ಇದ್ದ ಪಕ್ಷದಲ್ಲಿ ನಾವು ಅನಿವಾರ್ಯವಾಗಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಭೀಮಶಿ ಮಗದುಮ, ಜಿ.ಪಂ. ಮಾಜಿ ಅಧ್ಯಕ್ಷ ಮಹಾದೇವಪ್ಪ ಹಟ್ಟಿ, ನೇಕಾರ ಮುಖಂಡ ಮನೋಹರ ಶಿರೋಳ ಸೇರಿದಂತೆ ಅನೇಕರು ಮಾತನಾಡಿದರು. ಇದಕ್ಕೂ ಪೂರ್ವ ನಗರದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಬಂದ್‌ಗೆ ಮಿಶ್ರ ಪ್ರತಿಕ್ರೀಯೆ ದೊರಕಿತು. ನಗರದಲ್ಲಿ ಎಂದಿನಂತೆ ಅಂಗಡಿ ಮುಗ್ಗಟ್ಟುಗಳು ತೆರೆದಿದ್ದವು. ಪ್ರತಿಭಟನೆಯ ನಂತರ ನೂತನ ತಾಲೂಕು ಕಚೇರಿಯ ಆವರಣದಲ್ಲಿ ಬೃಹತ್‌ ಸಭೆ ನಡೆಸಿ ರಬಕವಿ-ಬನಹಟ್ಟಿ ತಹಸೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಶಂಕರ ಜುಂಜಪ್ಪನವರ, ಶಂಕರ ಜಾಲಿಗಿಡದ, ಮಲ್ಲಿಕಾರ್ಜುನ ಬಾಣಕಾರ, ಜಿ.ಎಸ್‌. ಗೊಂಬಿ, ಬಸವರಾಜ ತೆಗ್ಗಿ, ಕಣೆಪ್ಪ ಹಾರೂಗೇರಿ, ಶ್ರೀಶೈಲ ಯಾದವಾಡ, ಸಿದ್ರಾಯಪ್ಪ ಶೀಲವಂತ, ಮಹಾದೇವ ಕೋಟ್ಯಾಳ, ಸುರೇಶ ಆರಿ, ಶಂಕರ ಟಿರಕಿ, ಶಂಕರ ಕುರಂದವಾಡ, ಮಹಾದೇವಪ್ಪ ಹಟ್ಟಿ, ಮನೋಹರ ಶಿರೋಳ, ಬಸಯ್ಯ ಹಿರೇಮಠ, ಪ್ರಭು ಪೂಜಾರಿ, ಈರಣ್ಣ ಚಿಂಚಖಂಡಿ, ಶಿವಾನಂದ ಕಾಗಿ, ಚಿದಾನಂದ ಕಕಮರಿ, ಮಹಾದೇವ ಚರ್ಕಿ, ಶಿವು ಭದ್ರನ್ನವರ, ಓಂಪ್ರಕಾಶ ಕಾಬರಾ, ಸುರೇಶ ಅಕ್ಕಿವಾಟ ಸೇರಿದಂತೆ ಅನೇಕರು ಇದ್ದರು.

loading...