ನೈಸರ್ಗಿಕ ಸಂಪನ್ಮೂಲ ಮುಂದೊಂದು ದಿನ ಬರಿದಾಗುವ ಸಾಧ್ಯತೆ

0
19
loading...

ಕಮತಗಿ : ಮುಂದೊಂದು ದಿನ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುವ ಸಾಧ್ಯತೆ ಇರುವುದರಿಂದ ತ್ಯಾಜ್ಯ ವಸ್ತುಗಳ ಮರು ಉತ್ಪಾದನೆ ಮತ್ತು ನಿರ್ವಹಣೆ ಮಾಡುವುದು ಇತ್ತೀಚಿನ ದಿನಗಳಲ್ಲಿ ತುಂಬ ಮಹತ್ವವನ್ನು ಪಡೆದುಕೊಂಡಿದೆ ಎಂದು ಬಾಗಲಕೋಟ ನಗರಸಭೆಯ ಪರಿಸರ ಅಭಿಯಂತರರಾದ ಎಚ್‌.ವಿ ಕಲಾದಗಿ ಹೇಳಿದರು.
ಸಮೀಪದ ಬೇವೂರ ಗ್ರಾಮದ ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಬಾಗಲಕೋಟೆಯ ಬಿ.ವಿ.ವಿ ಸಂಘದ ಜನ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿನ ಬೆಳಗ್ಗೆಯಿಂದ ಸಂಜೆಯವರೆಗೆ ಪ್ರತಿಯೊಬ್ಬ ಮನುಷ್ಯನು ಕೂಡಾ ಸರಿಸುಮಾರು 200 ಮೀಲಿ ವಿವಿಧ ರೀತಿಯ ತ್ಯಾಜ್ಯ ವಸ್ತುಗಳನ್ನು ಪರಿಸರದಲ್ಲಿ ಬಿಡುತ್ತಿದ್ದಾನೆ. ಇದರಿಂದ ಪರಿಸರ ಹಾಳಾಗಿ ವಿಷಕಾರಿಯಾದ ವಸ್ತುಗಳು ಉತ್ಪಾದನೆಗೊಳ್ಳಲು ದಾರಿ ಮಾಡಿಕೊಟ್ಟಂತಾಗುತ್ತದೆ. ನಾವು ಬಿಸಾಡುವ ಕಸದಲ್ಲಿ ಮುಖ್ಯವಾಗಿ ಎರಡು ಬಗೆಗಳಲ್ಲಿ ವಿಂಗಡಿಸಬಹುದಾಗಿದೆ. ಅದರಲ್ಲಿ ಒಂದು ಹಸಿ ಕಸ ಮತ್ತೊಂದು ಒಣ ಕಸ ಇವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಬೇರ್ಪಡಿಸಿ, ಸಂಸ್ಕರಿಸಿ, ಮರು ಬಳಕೆ ಆಗುವಂತೆ ನೋಡಿಕೊಳ್ಳಲಾಗುತ್ತಿದೆ. ಒಣ ಕಸವನ್ನು ಸಿಮೆಂಟ್‌ ಕಾರ್ಖಾನೆಗಳಲ್ಲಿ ಬಳಸಿದರೆ, ಹಸಿ ಕಸವನ್ನು ಗೊಬ್ಬರ ತಯಾರಿಕೆ ಮತ್ತು ವಿದ್ಯುತ್‌ ಶಕ್ತಿ ಉತ್ಪಾದನೆ ಮಾಡಲು ಬಳಸಲಾಗುತ್ತಿದೆ. ಅಲ್ಲದೇ ಕರಿದು ಉಳಿದ ಎಣ್ಣೆಯಿಂದಲೂ ಬಯೋಡಿಸೈಲ್‌ ತಯಾರಿಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಕೂಡಾ ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು. ಬಾಗಲಕೋಟ ರೋಟರಿ ಕ್ಲಬ್‌ ಅಧ್ಯಕ್ಷ ನಾರಾಯಣ ಹೆರಕಲ್ಲ ಮಾತನಾಡಿ, ಗ್ರಾಮದಲ್ಲಿನ ಪ್ರತಿಯೊಬ್ಬ ವ್ಯಕ್ತಿಯು ಕೂಡಾ ಶೌಚಾಲಯಗಳನ್ನು ಬಳಸುವಂತಾಗಬೇಕು.ಇದರಿಂದ ವೈಯಕ್ತಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಮತ್ತು ಪರಿಸರವೂ ಸ್ವಚ್ಚವಾಗಿರುತ್ತದೆ ಎಂದರು. ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಡಾ. ನಾಗರತ್ನ ಟಿ.ಎಂ ಪ್ರಾಸ್ತಾವಿಕ ಮಾತನಾಡಿ, ಸ್ವಚ್ಚತಾ ಆಂದೋಲನದ ಮಹತ್ವ ಕುರಿತಂತೆ ವಿವರಿಸುತ್ತಾ, ಸ್ವಚ್ಚತೆ ಕೆವಲ ಸರ್ಕಾರದ ಜವಾಬ್ದಾರಿಯಲ್ಲ ಅದು ನಮ್ಮೆಲ್ಲರ ಹೊಣೆ. ನಾವು ಪ್ರತಿನಿತ್ಯ ಬಳಕೆ ಮಾಡುವ ವಸ್ತುಗಳನ್ನು ಅದರ ಉಪಯೋಗದ ನಂತರ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ಮನೆಯ ಒಳಗಡೆ ಹಾಗೂ ಹೊರಗಡೆ ಸೊಳ್ಳೆ, ನೋಣ ಮತ್ತು ಕ್ರೀಮಿಕೀಟಗಳ ಪ್ರಮಾಣ ಹೆಚ್ಚಾಗಿ ವೈಯಕ್ತಿಕ ಆರೋಗ್ಯ ಹಾಗೂ ಸಮೂದಾಯದ ಆರೋಗ್ಯ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಎಲ್‌.ಎ ಚಲವಾದಿ ಇವರು ವಹಿಸಿಕೊಂಡಿದ್ದರು, ಶಿಕ್ಷಕ ಜೆ.ಎಂ ಮಲ್ಲಾಪೂರ, ಜನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ರವಿ ಮೇಳಿ, ರೋಟರಿ ಸಂಸ್ಥೆಯ ಸದಸ್ಯರು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

loading...