ನೌಕರಿ ಖಾಯಂಗೊಳಿಸಲು ಆಗ್ರಹಿಸಿ ಧರಣಿ

0
16
loading...

ಕನ್ನಡಮ್ಮ ಸುದ್ದಿ-ಕಾರವಾರ: ನೌಕರಿ ಖಾಯಂ ಮಾಡಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರಳೊಬ್ಬಳು ಪಂಚಾಯಿತಿಯಲ್ಲಿಯೇ ಅನಿರ್ಧಿಷ್ಟಾವಧಿಗೆ ಧರಣಿ ಕುಳಿತ ಘಟನೆ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಪಂನಲ್ಲಿ ನಡೆದಿದೆ.
ಸುರೇಖಾ ಕೊನಪ್ಪಾ ನಾಯ್ಕ ಎಂಬುವವಳೆ ಧರಣಿ ಕುಳಿತ ಮಹಿಳೆ. ಈಕೆ ಭಾವಿಕೇರಿ ಗ್ರಾಪಂ ನಲ್ಲಿ ಡಾಟಾ ಎಂಟ್ರಿ ಆಪರೇಟರ್‌ ಆಗಿ ಕಳೆದ 2007 ರಿಂದ ಕಾರ್ಯನಿರ್ವಹಿಸುತ್ತಿದ್ದಾಳೆ. ಸರ್ಕಾರ ಮೂರು ವರ್ಷ ಕಾರ್ಯನಿರ್ವಹಿಸಿದ ಜಿಲ್ಲೆಯ ಎಲ್ಲಾ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಖಾಯಂಗೊಳಿಸಿದೆ. ಆದರೆ ಕಳೆದ ಹನ್ನೊಂದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸುರೇಖಾಳನ್ನು ಮಾತ್ರ ಖಾಯಂ ಮಾಡಲಾಗಿಲ್ಲ. ಇದಕ್ಕೆ ಭಾವಿಕೇರಿ ಗ್ರಾಪಂನ ಕೆಲ ಸದಸ್ಯರು ಅಡ್ಡಿಯಾಗಿದ್ದಾರೆಂದು ಸುರೇಖಾ ಅರೋಪಿಸಿದ್ದಾಳೆ. ಗ್ರಾಪಂ ಸದಸ್ಯರೊಬ್ಬರು ತಮ್ಮದೇ ಜಾತಿಗೆ ಸೇರಿದವರೊಬ್ಬರಿಗೆ ಈ ಹುದ್ದೆ ನೀಡುವ ಸಲುವಾಗಿ ತಮಗೆ ವಿನಾಕಾರಣ ತೊಂದರೆ ನೀಡುತಿದ್ದಾರೆ. ಈ ಸದಸ್ಯ ಪ್ರತಿ ಗ್ರಾಪಂ ಸಭೆಯಲ್ಲಿ ತನಗೆ ಹಾಗೂ ಗ್ರಾಪಂ ಸದಸ್ಯರಿಗೆ ಬೆದರಿಸುವ ಕೆಲಸ ಮಾಡುತ್ತಾರೆ. ಇದರ ಹೊರತಾಗಿಯೂ ತನ್ನನ್ನು ಖಾಯಂ ಗೊಳಿಸಬೇಕೆಂದು ಭಾವಿಕೇರಿ ಗ್ರಾಪಂ ನಾಲ್ಕು ಬಾರಿ ಠರಾವು ಪಾಸು ಮಾಡಿದೆ. ಆದರೆ ಈ ಸದಸ್ಯ ಅನಾವಶ್ಯಕವಾಗಿ ಒಂದಾದ ಮೇಲೊಂದು ಸಮಸ್ಯೆಗಳನ್ನು ಸೃಷ್ಠಿ ಮಾಡುತ್ತಾ ತನ್ನ ಹುದ್ದೆ ಖಾಯಂ ಆಗಲು ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತನಗೆ ನ್ಯಾಯ ಸಿಕ್ಕಿ ತನ್ನ ಕೆಲಸ ಖಾಯಂ ಆಗುವವರೆಗೂ ತಾನು ಹೋರಾಟ ಕೈಬಿಡುವುದಿಲ್ಲ ಎನ್ನುವ ಸುರೇಖಾ ನಾಯ್ಕ ಸಂಬಂಧಪಟ್ಟ ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಪಂಚಾಯತ್‌ ಸದಸ್ಯನಿಂದ ತನಗಾಗಿರುವ ಅನ್ಯಾಯದ ಬಗ್ಗೆ ವಿವರಣೆ ನೀಡಬೇಕು. ಕೆಲವರು ತಾನು ಕೆಲಸವನ್ನು ಬಿಟ್ಟು ಇನ್ನೊಬ್ಬರಿಗೆ ಅವಕಾಶ ಮಾಡಿಕೊಡಬೇಕೆಂದು ಸಹ ಬೆದರಿಕೆ ಹಾಕುತ್ತಿದ್ದು ತನಗೆ ನ್ಯಾಯ ಸಿಗುವವರೆಗೂ ಧರಣಿ ಮುಂದುವರೆಸುತ್ತೇನೆ ಎನ್ನುತ್ತಾರೆ. ಈ ಬಗ್ಗೆ ಗ್ರಾಪಂ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಇಲಾಖೆಯ ಹಿರಿಯ ಅಧಿಕಾರಿಗಳೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಜಾರಿಕೊಂಡರು.

loading...