ಪತ್ರಕರ್ತರು ಭಾಷೆ ಉಳಿಸುವ ಹೊಣೆಗಾರಿಕೆ ಹೊರಬೇಕು: ಉಮಾಕಾಂತ

0
16
loading...

ಕನ್ನಡಮ್ಮ ಸುದ್ದಿ-ಶಿರಸಿ: ಕನ್ನಡ ಭಾಷೆಯ ಉಳಿವಿನ ಸವಾಲಿನ ಸಂದರ್ಭದಲ್ಲಿ ಪತ್ರಿಕೆ ಹಾಗೂ ಪತ್ರಕರ್ತರು ಭಾಷೆ ಉಳಿಸುವ ಹೊಣೆಗಾರಿಕೆ ಹೊರಬೇಕು. ಸರಳ ಹಾಗೂ ಶುದ್ಧ ಮಾದರಿಯಲ್ಲಿ ಕನ್ನಡ ಬೆಳೆಸುವ ಕಾರ್ಯಕ್ಕೆ ವೇಗ ಸಿಗಬೇಕು ಎಂದು ಹಿರಿಯ ವಿದ್ವಾಂಸ ಉಮಾಕಾಂತ ಭಟ್ಟ ಕೆರೆಕೈ ಹೇಳಿದರು.
ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ತಾಲೂಕಿನ ಯಡಳ್ಳಿ ವಿದ್ಯೋದಯ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಉಪನ್ಯಾಸ, ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಾಮಾಜಿಕ ಬದ್ಧತೆಯನ್ನು ಕೇವಲ ಪತ್ರಕರ್ತರು ಮಾತ್ರ ಹೊಂದಿರುವುದಿಲ್ಲ. ಆದರೆ ಈ ವಿಷಯದಲ್ಲಿ ಪತ್ರಕರ್ತರನ್ನು ಸಮಾಜ ವಿಶೇಷವಾಗಿ ಗಮನಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ಪತ್ಕರ್ತ ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕು ಎಂದರು. ಇಂದು ಇಂಗ್ಲೀಶ್‌ ವ್ಯಾಮೋಹದಲ್ಲಿ ನಮ್ಮ ಭಾಷೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಅದು ಕಳೆದರೆ ಸಾವಿರ ವರ್ಷಗಳ ಇತಿಹಾಸ ಕಳೆದುಕೊಂಡಂತೆ ಆಗುತ್ತದೆ. ಇಂತಹ ವಿಷಮ ಸ್ಥಿತಿಯಲ್ಲಿ ಕನ್ನಡ ಭಾಷೆ ಬೆಳೆಸುವಲ್ಲಿ ಪತ್ರಕರ್ತರ ಕೊಡುಗೆ ಅನುಪಮವಾಗಿದೆ ಎಂದ ಅವರು, ಕನ್ನಡ ಭಾಷೆಯ ಶೇಕಡಾ 70ರಷ್ಟು ಶಬ್ದಗಳು ಇಂದು ಕಳೆದು ಹೋಗಿವೆ. ಈ ಕಾಲಘಟ್ಟದಲ್ಲಿ ಶುದ್ಧ ಕನ್ನಡವನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಕನ್ನಮಡ ಭಾಷೆ ಬೆಳೆಸಲು ಕೈಜೋಡಿಸಬೇಕು ಎಂದರು. ಟಿವಿ, ಮೊಬೈಲ್‌, ಟ್ಯಾಬ್‌ಗಳಂಥ ಆಧುನಿಕ ತಂತ್ರಜ್ಞಾನಗಳ ನಡುವೆಯೂ ಪತ್ರಿಕೆಗಳು ಅದರದೇ ಆದ ಘನತೆ ಹಾಗೂ ಅಸ್ತಿತ್ವ ಉಳಿಸಿಕೊಂಡಿವೆ ಎಂದ ಅವರು, ಈ ಹಿಂದೆ ಪತ್ರಕರ್ತರಿಗೆ ಭದ್ರತೆ ಹಾಗೂ ಗೌರವ ಇರದ ಸಮಯದಲ್ಲಿ ಪತ್ರಿಕಾ ಕ್ಷೇತ್ರ ಕಟ್ಟಿ ಬೆಳೆಸಿದವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಈ ವೇಳೆ ಪತ್ರಿಕಾ ಕ್ಷೇತ್ರದ ಜೀವಮಾನ ಸಾಧನೆಗೆ ಹಿರಿಯ ಪತ್ರಕರ್ತರಾದ ಜಯರಾಮ ಹೆಗಡೆ, ರಾಜೀವ ಅಜ್ಜೀಬಳ, ಮಂಜುನಾಥ ಭಟ್ಟ ಬೆಳಖಂಡ ಹಾಗೂ ಸೀತಾರಾಮ ಭಟ್ಟ ಬೆಳಖಂಡ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಜಯರಾಮ ಹೆಗಡೆ, ಇಂದು ಸನ್ಮಾನಗಳ ಮೌಲ್ಯ ಕುಸಿಯುತ್ತಿದೆ. ಪತ್ರಕರ್ತರಿಗೆ ಹಿಂದೆ ಸೇವಾ ಭದ್ರತೆ ಕೊರತೆಯಿದ್ದರೂ ಗೌರವ ಹೆಚ್ಚು ಇತ್ತು. ಇಂದು ಗೌರವ ಕಡಿಮೆಯಾಗುತ್ತಿರುವದು ಖೇದಕರ ಸಂಗತಿ ಎಂದು ಹೇಳಿದರು. ಪತ್ರಿಕೆಗಳು ಇಂದು ಕವಲುದಾರಿಯಲ್ಲಿದ್ದು, ಪತ್ರಿಕೆಗಳನ್ನು ನಡೆಸುವದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರು ಪ್ರಭಾವಿ ವರದಿ, ಲೇಖನಗಳ ಮೂಲಕ ಸಮಾಜಕ್ಕೆ ಅನಿವಾರ್ಯವೆಂದು ನಿರೂಪಿಸಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ರಾಜೀವ ಅಜ್ಜೀಬಳ ಮಾತನಾಡಿ, ಪತ್ರಕರ್ತರು ವಾಸ್ತವ ಅಂಶ ಬರೆಯಬೇಕು. ಹೊಸಬರು ವೇತನಕ್ಕಾಗಿ ಕ್ಷೇತ್ರಕ್ಕೆ ಬರದೇ ಸಮಾಜಮುಖಿ ಬದ್ದತೆಯ ತೋರಿಸಬೇಕು ಎಂದರು. ಹಿರಿಯ ಪತ್ರಕರ್ತ ಮಂಜುನಾಥ ಭಟ್ಟ ಬೆಳಖಂಡ ಮಾತನಾಡಿ, ಪತ್ರಕರ್ತರು ಭಾಷಾ ಶುದ್ಧತೆ, ವ್ಯಾಕರಣದತ್ತ ಹೆಚ್ಚು ಲಕ್ಷ್ಯ ಹಾಕಬೇಕು. ಕನ್ನಡ ಹೌದೇ ಅಲ್ಲವೇ ಎಂದು ಅರ್ಥವಾಗದ ರೀತಿಯ ಹೊಸ ಹೊಸ ಕನ್ನಡ ಶಬ್ದಗಳನ್ನು ಉಪಯೋಗಿಸದೇ, ಲಕ್ಷ÷್ಯ ವಹಿಸಿ ಕನ್ನಡ ಶಬ್ದಗಳನ್ನು ಬಳಸಬೇಕು. ಇದರಿಂದ ವರದಿಗಳು ಹೆಚ್ಚು ಅರ್ಥಪೂರ್ಣವಾಗಿ ಬರಲು ಸಾಧ್ಯ ಎಂದರು. ಹಿರಿಯ ಪತ್ರಕರ್ತ ಸೀತಾರಾಮ ಭಟ್ಟ ಬೆಳಖಂಡ ಮಾತನಾಡಿ, ಪತ್ರಿಕೆಗಳು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಅವಕಾಶ ನೀಡಿದೆ. ಮುಂದೆ ರೈತರ ಸಮಸ್ಯೆಗಳಿಗೆ, ಅದನ್ನು ಬಗೆಹರಿಸಲು ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದರು.
ಯಡಳ್ಳಿ ವಿದ್ಯೋದಯ ಶಿಕ್ಷಣ ಸಮಿತಿ ಅಧ್ಯಕ್ಷ ಶ್ರೀಧರ ಹೆಗಡೆ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪ್ರಾಚಾರ್ಯ ಆರ್‌.ಟಿ.ಭಟ್ಟ, ಮುಖ್ಯಾಧ್ಯಾಪಕ ಎಂ.ಜಿ.ಭಟ್ಟ ಇದ್ದರು. ಅಧ್ಯಕ್ಷ ವಿರೂಪಾಕ್ಷ ಹೆಗಡೆ ಪ್ರಸ್ತಾವಿಕ ಮಾತನಾಡಿದರು. ಪತ್ರಕರ್ತ ನರಸಿಂಹ ಅಡಿ ಸ್ವಾಗತಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ರಾಜೇಂದ್ರ ಹೆಗಡೆ ಸನ್ಮಾನ ಪತ್ರ ವಾಚಿಸಿದರು.

loading...