ಪರಿಶಿಷ್ಟರ ಒಣಭೂಮಿಗಳಿಗೆ ನೀರಾವರಿ ಸೌಲಭ್ಯ: ಪೃಥ್ವಿ ಕತ್ತಿ

0
6
loading...

ಕನ್ನಡಮ್ಮ ಸುದ್ದಿ
ಹುಕ್ಕೇರಿ 19: ಪರಿಶಿಷ್ಟ ಜಾತಿ ಜನಾಂಗದ ಒಣ ಭೂಮಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಯುವ ಉದ್ಯಮಿ ಪೃಥ್ವಿ ರಮೇಶ ಕತ್ತಿ ಹೇಳಿದರು.
ತಾಲೂಕಿನ ಸಾರಾಪುರ ಗ್ರಾಮದಲ್ಲಿ ನೀರಾವರಿ ನಿಗಮದ ಎಸ್ಸಿಪಿ ಯೋಜನೆಯಡಿ ಕೈಗೆತ್ತಿಕೊಂಡಿರುವ ತೆರೆದ ಬಾವಿ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಯೋಜನೆಯಡಿ ಎರಡು ತೆರೆದ ಬಾವಿಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ತಲಾ 25 ಲಕ್ಷ ರೂ,ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ಪೈಪಲೈನ್ ಹಾಗೂ ಬಾವಿಗಳಿಗೆ ಪಂಪಸೆಟ್ಗಳ ಅಳವಡಿಕೆ, ವಿದ್ಯುತ್ ಸಂಪರ್ಕ ಕಲ್ಪಿಸಿ ಈ ಜನರ ಒಣ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸಲಹೆ ನೀಡಿದರು.

ಯೋಜನೆ ವ್ಯಾಪ್ತಿಯಲ್ಲಿ 45 ಜನ ರೈತ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು ಸುಮಾರು 66 ಎಕರೆ ಒಣ ಭೂಮಿ ನೀರಾವರಿಗೆ ಒಳಪಡಲಿದೆ. ಇದರಿಂದ ಈ ಜನಾಂಗದ ರೈತರು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಾರಾಪುರ ಗ್ರಾಮದಲ್ಲಿ ಕೈಗೆತ್ತಿಕೊಂಡಿರುವ ಈ ಕಾಮಗಾರಿಗೆ ಕ್ಷೇತ್ರದ ಶಾಸಕ ಉಮೇಶ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ ಅವರು ಇಲಾಖೆಗೆ ಹಲವು ಬಾರಿ ಪತ್ರ ಬರೆದಿದ್ದಲ್ಲದೇ ಯೋಜನೆ ಮಂಜೂರಾತಿಗೆ ಸಾಕಷ್ಟು ಶ್ರಮಿಸಿದ್ದಾರೆ. ಈ ಮೂಲಕ ಹುಕ್ಕೇರಿ ಕ್ಷೇತ್ರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸಮಗ್ರ ಅಭಿವೃದ್ಧಿಗೆ ಕತ್ತಿ ಕುಟುಂಬವು ಸದಾ ಸಿದ್ಧವಿದೆ ಎಂದು ಅವರು ಹೇಳಿದರು.
ಎಪಿಎಂಸಿ ನಿರ್ದೇಶಕ ಕೆ.ಜಿ.ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎಂ.ಪಾಟೀಲ, ನೀರಾವರಿ ಇಲಾಖೆ ಅಭಿಯಂತರ ಸಾಧಿಕ್ ಮುಲ್ಲಾ, ಗುತ್ತಿಗೆದಾರ ಆರ್.ಬಿ.ಹೊಸಮನಿ, ಸದಸ್ಯರಾದ ನಾಗರಾಜ ಗಸ್ತಿ, ಸುರೇಶ ಹೆಬ್ಬಾಳ, ಸೀತಾ ಹಾಲಟ್ಟಿ, ಮುಖಂಡರಾದ ಸಿದ್ದಪ್ಪ ಮದಕರಿ, ಶಂಕರ ಬಡಗಾಂವಿ, ಅನ್ನಪ್ಪಾ ಬೆಳವಿ, ತುಕಾರಾಮ ಪರೀಟ, ಸತ್ತೆಪ್ಪಾ ಗಸ್ತಿ, ಮಾಕಪ್ಪಾ ಮಾದರ, ಪಾಂಡು ಗುಡದಿ, ಬಾಬು ಮಾದರ ಮತ್ತಿತರರು ಉಪಸ್ಥಿತರಿದ್ದರು.
..

loading...