ಪಲಾನುಭವಿಗಳಿಗೆ ಪಟ್ಟಾ ಹಂಚಿಕೆಯಲ್ಲಿ ವಿಳಂಬ: ರವಿಗೌಡ ಆಕ್ರೋಶ

0
8
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ತಾಲೂಕಿನ ಗ್ರಾ.ಪಂ ವ್ಯಾಪ್ತಿಯ ಕೆಲ ಬಡ ಪಲಾನುಭವಿಗಳಿಗೆ ಪಟ್ಟಾ ಹಂಚಿಕೆಯಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದರಿಂದ ಬಡವರು ಪರದಾಡುವಂತಾಗಿದೆ ಎಂದು ಜಿ.ಪಂ. ಸದಸ್ಯ ರವಿಗೌಡ ಪಾಟೀಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ದ್ವನಿ ಎತ್ತಿದ ಅವರು, ಆಶ್ರಯ ಯೋಜನೆಯಡಿ ಮಂಜೂರಿಯಾದ ಮನೆಗಳಿಗೆ ಸಮರ್ಪಕವಾಗಿ ಬಿಲ್‌ ಮಾಡಲಾಗುತ್ತಿಲ್ಲ ಎಂಬ ಆರೋಪಗಳು ಸಾಕಷ್ಟು ಕೇಳಿ ಬರುತ್ತಿವೆ. ಅಲ್ಲದೇ ಹಲವರಿಗೆ ಪಟ್ಟಾ ವಿತರಿಸಲಾಗಿಲ್ಲ ಏಕೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಿ.ಡಿ.ಒ ಗಳು ಈಗಾಗಲೇ ಫಲಾನುಭವಿಗಳಿಗೆ ಪಟ್ಟಾ ವಿತರಣೆ ಮಾಡಲಾಗಿದೆ. 2016-17ನೇ ಸಾಲಿನ ಬಸವ ವಸತಿ ಯೋಜನೆಯಡಿಯಲ್ಲಿ ಮಂಜೂರಿ ಪತ್ರ ವಿತರಣೆಯಾದ 90ದಿನಗಳ ಒಳಗಾಗಿ ಜಿ.ಪಿ.ಎಸ್‌ ಮಾಡಿಸಿ ಕನಿಷ್ಠ ಒಂದಾದರೂ ಕಂತನ್ನು ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಸ್ವಯಂಚಾಲಿತವಾಗಿ ಆನ್‌ಲೈನ್‌ನಲ್ಲಿ ಫಲಾನುಭವಿಗಳ ಖಾತೆ ಲಾಕ್‌ ಆಗುತ್ತದೆ ಎಂದು ಹೇಳಿದರು. ನೀವು ಪಟ್ಟಾ ಇಟ್ಟುಕೊಂಡು ಸುಮ್ಮನೇ ಕುಳಿತುಕೊಳ್ಳಬೇಡಿ. ಈ ಸಮಸ್ಯೆಗಳ ಬಗ್ಗೆ ನೀವು ತಾ.ಪಂ ಜಿ.ಪಂ.ಗಳಿಗೆ ಹಾಗೂ ನಿಗಮಕ್ಕೆ ಮಾಹಿತಿ ನೀಡಬೇಕು ಹಾಗೂ ತಾಲೂಕಿನ 16 ಗ್ರಾಮ ಪಂಚಾಯತಿ ಪಿ.ಡಿ.ಒ ಗಳು ಶಾಸಕರಿಗೆ ಮತ್ತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ರವಿಗೌಡ ಪಾಟೀಲ ಪಿ.ಡಿ.ಒ.ಗಳಿಗೆ ಸೂಚಿಸಿದರು. ತಾಲೂಕಿನ ಟಿಬೇಟಿಯನ್‌ ಕಾಲೋನಿ, ಯಲ್ಲಾಪುರ ಹಾಗೂ ಶಿರಸಿ-ಹುಬ್ಬಳ್ಳಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿರುವ ಮರಗಳನ್ನು ಕಡಿಯಲು ಲೋಕೋಪಯೋಗಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಭೆಯಲ್ಲಿ ತಾ.ಪಂ ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ ಹಾಗೂ ತಾ.ಪಂ.ಸದಸ್ಯರು ಸಾಮೂಹಿಕವಾಗಿ ಒತ್ತಾಯಿಸಿದರು. ತಾಲೂಕಿನಲ್ಲಿ ಕಳೆದ ವರ್ಷ 9800 ಹೆಕ್ಟೆರ್‌ ಭತ್ತ ಬೆಳೆಯಲಾಗಿತ್ತು. ಈ ಬಾರಿ 9000ಹೆಕ್ಟೆರ್‌ ಆಗಿದ್ದು. ಇದಕ್ಕೆ ಅನಾವೃಷ್ಟಿಯೇ ಕಾರಣವಾಗಿದೆ. ಈವರೆಗೆ ಮಳೆ ಪ್ರಮಾಣ ವಾಡಿಕೆಗಿಂತ ಶೇ15ರಷ್ಟು ಕಡಿಮೆಯಾಗಿದ್ದು, ಭತ್ತಕ್ಕೆ ಬೆಂಕಿ ರೋಗ ಹರಡುವ ಸಂಭವವಿದೆ. ಇದನ್ನು ಹತೋಟಿಗೆ ತರಲು ಮುನ್ನೆಚ್ಚರಿಕೆ ವಹಿಸಲಾಗಿದೆ. 2016-17ನೇ ಸಾಲಿನ ಬೆಳೆ ವಿಮೆ 16ಕೋಟಿ ಬಂದಿದ್ದು 2017-18ನೇ ಸಾಲಿನ ವಿಮೆ ಇನ್ನೆರಡು ದಿನಗಳಲ್ಲಿ ಜಮಾ ಆಗಲಿದೆ ಎಂದು ಕೃಷಿ ಅಧಿಕಾರಿ ಎಮ್‌.ಎಸ್‌ ಕುಲಕರ್ಣಿ ತಿಳಿಸಿದರು.
ತಾಲೂಕಿನ ನ್ಯಾಸರ್ಗಿ ಗ್ರಾಮದ ಹೊಲ ಒಂದರಲ್ಲಿ ವಿದ್ಯುತ್‌ ಲೈನಗಳು ಜೋತು ಬಿದ್ದು ಮೃತ್ಯುವಿಗೆ ಆಹ್ವಾನ ನೀಡುವಂತಿದ್ದರೂ ಈವರೆಗೆ ಹೆಸ್ಕಾಂ ಇಲಾಖೆಯವರು ಗಮನ ಹರಿಸಿಲ್ಲ ಎಂದು ನ್ಯಾಸರ್ಗಿ ಗ್ರಾಮದ ರೈತ ಶಿವಾನಂದ ಕುರುಬರ ಸಭೆಯಲ್ಲಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಧಿಕಾರಿ ಶೀಘ್ರದಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದರು. ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ, ಕಾರ್ಯನಿರ್ವಹಣಾಧಿಕಾರಿ ಎಚ್‌.ಪೂಜೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಜರೀನಾಬಾನು ನಾಗರೊಳ್ಳಿ, ತಾ.ಪಂ. ಸದಸ್ಯ ರಮೇಶ ರಾಯ್ಕರ, ಗಣಪತಿ ವಡ್ಡರ, ಹುಸೇನಸಾಬ ದುಂಡಸಿ, ರೇಣುಕಾ ಕೋಡಣ್ಣವರ, ರಾಧಾಬಾಯಿ ಸಿಂಗನಳ್ಳಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

loading...