ಪಿವಿಪಿ ಗಣೇಶ ಮೂರ್ತಿ ನಿಷೇದಕ್ಕೆ ಆಗ್ರಹ

0
14
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ:ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟರ್‌ ಆಫ್‌ ಫ್ಯಾರಿಸನಿಂದ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟ, ತಯಾರಿಕೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿ ಪಟ್ಟಣದ ಶ್ರೀ ಗಣೇಶ ಮೂರ್ತಿಕಾರರ ಸಂಘದ ಪದಾಧಿಕಾರಿಗಳು ಬುಧವಾರ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ನೀಡಿದರು. ಸಂಘದ ಅಧ್ಯಕ್ಷ ರಾಜು ಬಡಿಗೇರ ಮಾತನಾಡಿ, ಸರ್ಕಾರ ಪ್ರತಿವರ್ಷ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ಲಾಸ್ಟರ್‌ ಆಫ್‌ ಫ್ಯಾರಿಸನಿಂದ ತಯಾರಿಸಿದ ಮೂರ್ತಿಗಳ ಮಾರಾಟಕ್ಕೆ ನಿರ್ಭಂಧ ಹೇರಿತ್ತು. ಆದರೂ ಕೂಡಾ ಕೆಲ ವಲಸಿಗರಿಂದ ತಾಲೂಕಿನಾದ್ಯಂತ ಗಣೇಶ ಚತುರ್ಥಿ ಸಮಯದಲ್ಲಿ ಇಂತಹ ಪರಿಸರ ಮಾರಕ ಮೂರ್ತಿಗಳ ಮಾರಾಟದಲ್ಲಿ ತೊಡುಗುತ್ತಾರೆ. ಸರ್ಕಾರ ನಿಷೇಧ ಹೇರಿದ್ದರೂ ಅಂತಹವರ ಮೇಲೆ ಕ್ರಮ ಕೈಗೊಳ್ಳದಿರುವದರಿಂದ ಇದು ನಿಯಂತ್ರಣಕ್ಕೆ ಬಂದಿಲ್ಲ. ಮೂಲ ಮೂರ್ತಿ ತಯಾರಿಕೆದಾರರು ಚತುರ್ಥಿ ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ನೀಡಲು ಮೂರ್ನಾಲ್ಕು ತಿಂಗಳು ಶ್ರಮ ವಹಿಸಿ ಗಣೇಶ ಮೂರ್ತಿಗಳನ್ನು ತಯಾರಿಸಿರುತ್ತೇವೆ. ಪರಿಸರ ವಿರೋಧಿ ಮೂರ್ತಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಮೂಲ ವೃತ್ತಿದಾರರಿಗೆ ಅನ್ಯಾಯ ಮಾಡುತ್ತಿರುವದರ ಜೊತೆಗೆ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಅಂತಹ ಪ್ಲಾಸ್ಟರ ಆಫ್‌ ಫ್ಯಾರಿಸ ಮೂರ್ತಿಗಳ ತಯಾರಿಕಾ ಘಟಕಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಗುಡಿ ಕೈಗಾರಿಗೆಕೆ ಮರುಜೀವ ಕಲ್ಪಿಸಬೇಕೆಂದರು. ಮಲ್ಲಿಕಾರ್ಜುನ ಆನಿಗೋಳ ಮಾತನಾಡಿ, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪರಿಸರ ವಿರೋಧಿ ಮೂರ್ತಿಕಾರರ ಮೇಲೆ ಕ್ರಮ ಜರುಗಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಸಂಘದ ಉಪಾಧ್ಯಕ್ಷ ಮೋಹನ ಚವ್ಹಾನ, ಕಾರ್ಯದರ್ಶಿ ವಿನೋದ ಬಡಿಗೇರ, ರಾಜು ಚಿತ್ರಗಾರ, ಅರವಿಂದ ಪತ್ತಾರ, ರಾಮಕೃಷ್ಣ ಬಡಿಗೇರ, ಮಹಾದೇವಪ್ಪ ಪತ್ತಾರ, ಗುರುನಾಥ ಬಡಿಗೇರ, ಶಂಕರ ಕಂಬಾರ, ಮಂಜು ಕಂಬಾರ, ಗಣೇಶ ಚಿತ್ರಗಾರ, ಬಿ.ಎಂ.ಪತ್ತಾರ, ಸುರೇಶ ಬಡಿಗೇರ, ಈರಣ್ಣ ಬಡಿಗೇರ ಚಂದ್ರಕಾಂತ ಕುಂಬಾರ ಮುಂತಾದವರು ಇದ್ದರು.

loading...