ಪ್ರಗತಿ ಪರಿಶೀಲನಾ ಸಭೆ: ಎಸ್‌ಸಿ, ಎಸ್‌ಟಿ ಸಮಗ್ರ ಮಾಹಿತಿ ತಯಾರಿಸಲು ಡಿಸಿ ಸೂಚನೆ

0
11
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ಜನರ ಸಮಗ್ರ ಮಾಹಿತಿ ತಯಾರಿಸಿ ಜುಲೈ 30 ರೊಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಸಮಾಹ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಪ್ರಸಕ್ತ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ಜನರ ಡಾಟಾ ಬೇಸ್‌ ತಯಾರಿಸಬೇಕು. ಅದರಲ್ಲಿ ಜಿಲ್ಲೆಯಲ್ಲಿರುವ ಒಟ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದ ಕುಟುಂಬಗಳ ಸಂಖ್ಯೆ, ಅವರ ವೃತ್ತಿ ಹಾಗೂ ಈಗಾಗಲೇ ಸರಕಾರದಿಂದ ಸೌಲಭ್ಯ ಪಡೆದವರು, ಪಡದೇ ಇರುವವರ ಮಾಹಿತಿ ಕಲೆ ಹಾಕಿ ವರದಿ ನೀಡುವಂತೆ ಸೂಚಿಸಿದರು. ಈ ಪ್ರಕ್ರಿಯೆ ಜುಲೈ 30 ರೊಳಗಾಗಿ ಮುಗಿಸಬೇಕು. ಸಮಗ್ರ ವರದಿ ತಯಾರಿಕೆಯಲ್ಲಿ ಯಾವುದೇ ರೀತಿಯ ಸಬೂಬು ಹೇಳದೆ ಗುಣಾತ್ಮಕ ಕೆಲಸ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಪ್ರತಿಯೊಂದು ಇಲಾಖೆಯಲ್ಲಿ ಎಸ್‌.ಸಿ.ಪಿ ಮತ್ತು ಟಿ.ಎಸ್‌.ಪಿ ಯೋಜನೆಯಡಿ ಗುರಿ ನಿಗದಿಪಡಿಸಿದಾಗ ಅನುದಾನ ಬಿಡುಗಡೆಯಾಗುವವರೆ ಕಾಯದೇ ಕ್ರೀಯಾ ಯೋಜನೆ ರೂಪಿಸಬೇಕು.
ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಸರಕಾರದಿಂದ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ವಿನಿಯೋಗವಾಗಬೇಕು. ಅನುಷ್ಠಾನದಲ್ಲಿ ನಿರ್ಲಕ್ಷ ತೋರಿದಲ್ಲಿ ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ಎಸ್‌.ಸಿ ಮತ್ತು ಎಸ್‌ಟಿ ಜನಾಂಗದ ಸಂಪೂರ್ಣ ಮಾಹಿತಿ ನಿಮ್ಮಲ್ಲಿರಬೇಕು. ಈ ಮಾಹಿತಿ ಇದ್ದಾಗ ಮಾತ್ರ ಅವರಿಗೆ ಸರಕಾರದ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ. ಇದರಿಂದ ಸೌಲಭ್ಯಗಳಿಂದ ವಂಚಿತರ ಮಾಹಿತಿ ಸಿಗಲಿದ್ದು, ಅವರಿಗೆ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಚುರುಕಾಗಿ ಕೆಲಸ ನಿರ್ವಹಿಸುವಂತೆ ವಿಧಾನ ಪರಿಷತ್‌ ಸದಸ್ಯ ಆರ್‌.ಬಿ.ತಿಮ್ಮಾಪೂರ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯವರು ಪ್ರತಿಯೊಂದು ಇಲಾಖೆಯಲ್ಲಿ ಸಮರ್ಪಕವಾಗಿ ಅನುದಾನ ವಿನಿಯೋಗವಾಗುತ್ತಿರುವ ಬಗ್ಗೆ ನಿಗಾ ವಹಿಸುತ್ತಿರಬೇಕು ಎಂದರು.
ಸರಕಾರ ಬಿಡುಗಡೆ ಮಾಡಿದ ಅನುದಾನ ಅರ್ಹರಿಗೆ ತಲುಪಿಸುವ ಕೆಲಸವಾಗಬೇಕು. ಅಲ್ಲದೇ ಅವರು ಯಾವ ಉದ್ಯೋಗದಲ್ಲಿ ತೊಡಗಿದ್ದಾರೆ ಅನ್ನುವ ಮಾಹಿತಿ ನಿಮ್ಮಲ್ಲಿದ್ದರೆ ಮಾತ್ರ ಅವರ ವೃತ್ತಿಗೆ ಪೂಕರ ಸಾಧನಗಳನ್ನು ನೀಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅವರ ಅಭಿವೃದ್ದಿ ಹೇಗೆ ಸಾಧ್ಯವಾಗುತ್ತದೆ ಎಂಬ ಪ್ರಶ್ನೆಯನ್ನು ಆರ್‌.ಬಿ.ತಿಮ್ಮಾಪೂರ ಎತ್ತಿದಾಗ ಜಿಲ್ಲಾಧಿಕಾರಿಗಳು ಪ್ರತಿಯೊಂದು ಇಲಾಖೆಯವರು ಜಿಲ್ಲೆಯಲ್ಲಿ ಬರುವ ವೃತ್ತಿ ನಿರತ ಹಾಗೂ ಅವರ ಸ್ಥಿತಿಗತಿಯ ಮಾಹಿತಿ ಕಲೆ ಹಾಕಬೇಕು. ಅಂದಾಗ ಮಾತ್ರ ಅವರ ಜೀವನಕ್ಕೆ ಏನು ಕೊಡಬಹುದೆಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಸಹಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಪ್ರವಾಸೋದ್ಯಮ, ಆಹಾರ, ಸಾರ್ವಜನಿಕ ಶಿಕ್ಷಣ, ಸಣ್ಣ ನೀರಾವರಿ, ಜಿಲ್ಲಾ ಕೈಗಾರಿಕೆ, ಕಾರ್ಮಿಕ ಸೇರಿದಂತೆ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಜಿ.ಪಂ ಸಿಇಓ ವಿಕಾಸ ಸುರಳಕರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಬಿ.ವಿ.ಚೈತ್ರಾ, ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...