ಪ್ರಾರಂಭವಾಗದ ಜನರಿಕ್‌ ಔಷಧಿ ಮಳಿಗೆ

0
10
loading...

ಕನ್ನಡಮ್ಮ ಸುದ್ದಿ-ನರಗುಂದ: ಪಟ್ಟಣದ ಬಾಬಾಸಾಹೇಬ ಭಾವೆ ತಾಲೂಕು ಆರೋಗ್ಯ ಕೇಂದ್ರ 100 ಬೆಡ್‌ಗಳ ಮೇಲ್ದರ್ಜೆ ಏರಿಕೆಯಾದ ನಂತರ ಈ ಹೊಸ ಆಸ್ಪತ್ರೆಯನ್ನು 2016ರ ಸೆಪ್ಟೆಂಬರ್‌ನಲ್ಲಿ ಆಗಿನ ಆರೋಗ್ಯ ಸಚಿವ ರಮೇಶಕುಮಾರ ಉದ್ಘಾಟನೆ ನೆರವೇರಿಸಿದ್ದರು. ಇದರ ಜೊತೆಗೆ ಒಂದು ತಿಂಗಳಿನಲ್ಲಿ ಜನರಿಕ್‌ ಔಷಧಿ ಮಳಿಗೆ ಮತ್ತು ಕ್ಯಾಂಟೀನ್‌ ಹಾಗೂ ಹಣ್ಣಿನ ಇತರ ಉಪಯುಕ್ತ ಮಳಿಗೆಗಳನ್ನು ಆರೋಗ್ಯ ಕೇಂದ್ರದ ಆವರಣದಲ್ಲಿಯೇ ತೆರೆಯಲಾಗುವುದೆಂದು ನೀಡಿದ್ದ ಭರವಸೆ ಇನ್ನೂ ಭರವಸೆಯಾಗಿದೆ ಉಳಿದುಕೊಂಡಿದೆ.
ಆರೋಗ್ಯ ಸಚಿವರು ಭರವಸೆ ನೀಡಿ ತೆರಳಿದ್ದಾಯು.್ತ ಆದರೆ ಆರೋಗ್ಯ ಕೇಂದ್ರದ ಆವರಣದಲ್ಲಿ ಜನರಿಕ್‌ ಮಳಿಗೆ ಮತ್ತು ಕ್ಯಾಂಟೀನ್‌ ಹಾಗೂ ಇನ್ನಿತರ ಸ್ಟಾಲ್‌ಗಳ ಕಟ್ಟಡ ಕಾಮಗಾರಿ ಆರಂಭಗೊಳ್ಳುವುದೇ ವಿಳಂಬವಾಗಿ ನಂತರ 2017 ರಲ್ಲಿ ಈ ಕಟ್ಟಡಗಳನ್ನು ನಿರ್ಮಿಸಲಾಯಿತು.
ಆವರಣದಲ್ಲಿ ನಿರ್ಮಿಸಿರುವ ಕ್ಯಾಂಟೀನ್‌ ಆರಂಭಗೊಂಡು ಇದೀಗ ಕೇವಲ ಒಂದು ವರ್ಷ ಗತಿಸಿದೆ. ಇನ್ನು ಜನರಿಕ್‌ ಔಷಧಿ ಮಳಿಗೆ ಹಾಗೂ ಹಣ್ಣಿನ ಸ್ಟಾಲ್‌ ಮತ್ತು ನಂದಿನಿ ಪಾರ್ಲರ್‌ ಇವು ನಿರ್ಮಾಣಗೊಂಡ ಕಟ್ಟಡಗಳ ಅರಂಭವನ್ನು ಈ ಹಿಂದೆ ಇದ್ದ ಶಾಸಕ ಯಾವಗಲ್‌ ಅವರು 2018ರ ಜನೇವರಿಯಲ್ಲಿ ಉದ್ಘಾಟಿಸಿ ಚಾಲನೆ ನೀಡಿದರೆ ಹೊರತು, ಇದುವರೆಗೂ ಜನರಿಕ್‌ ಮಳಿಗೆ ಹಾಗೂ ಇನ್ನಿತರ ಕಟ್ಟಡಗಳಲ್ಲಿ ಯಾವುದೇ ಸೇವೆ ಆರಂಭ ಕಂಡಿಲ್ಲ.
ಇದೀಗ ಈಗಿನ ಶಾಸಕ ಸಿ.ಸಿ. ಪಾಟೀಲ ಅವರು ಅನೇಕ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳ ಬಳಿ ಚರ್ಚಿಸಿದ್ದಾರೆ. ಈ ವಾರದಲ್ಲಿ ಜನರಿಕ್‌ ಔಷಧಿಮಳಿಗೆ ಆರಂಭಗೊಳಿಸಲಾಗುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಆದರೆ ಹಣ್ಣಿನ ಹಾಗೂ ನಂದಿನಿ ಪಾರ್ಲರ್‌ ಆರಂಭ ಯಾವಾಗ ಎನ್ನುವುದು ಇನ್ನು ತಿಳಿದು ಬಂದಿಲ್ಲ. ಹೀಗಾಗಿ ತಮ್ಮ ಆರೋಗ್ಯ ಚಿಕಿತ್ಸೆಗಾಗಿ ಬರುವ ಅನೇಕ ರೋಗಿಗಳ ಸಂಬಂಧಿಕರು ದೂರದ ಹೊಟೇಲ್‌ ಮತ್ತು ಹಣ್ಣಿನ ಅಂಗಡಿಗಳಿಂದ ಪಡೆದು ತರುವಂತಾಗಿದೆ.
ಈ ಕುರಿತು ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಪ್ರವೀಣ ಮೇಟಿ ಪ್ರತಿಕ್ರಿಯಿಸಿ ಅರೋಗ್ಯ ಕೇಂದ್ರದಲ್ಲಿ ಕ್ಯಾಂಟೀನ್‌ ಮತ್ತು ರೋಗಿಗಳ ಅನುಕೂಲಕ್ಕಾಗಿ ಕೆಲ ಉಪಯುಕ್ತ ಅಂಗಡಿಗಳನ್ನು ನಿರ್ಮಿಸಲು ವಿಳಂಬಗೊಂಡಿತು. ಯಾವ ಜಾಗೆಯಲ್ಲಿ ನಿರ್ಮಿಸಬೇಕೆನ್ನುವ ಚರ್ಚೆ ನಡೆದು ಇದಕ್ಕಾಗಿ ಕಾಲವಿಳಂಬವಾಗಿದೆ. ಸ್ಥಳ ಗೊತ್ತುಪಡಿಸಿ ಉಪಯುಕ್ತ ಅಂಗಡಿಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡು ಈಗಾಗಲೇ ಕ್ಯಾಂಟೀನ್‌ ಆರಂಭಿಸಲಾಗಿದೆ. ಇನ್ನು ಜನರಿಕ್‌ ಮಳಿಗೆ ಮತ್ತು ಇತರ ಅಂಗಡಿಗಳ ಆರಂಭಕ್ಕಾಗಿ ಅನೇಕ ಭಾರಿ ಮನವಿ ಮಾಡಿಕೊಂಡಾಗಲೂ ಜಿಲ್ಲಾ ಆಸ್ಪತ್ರೆಯಿಂದ ಸರಿಯಾಗಿ ಉತ್ತರ ದೊರೆಯದ ಪರಿಣಾಮ ಕಗ್ಗಂಟಾಗಿತ್ತು. ಈ ಸಮಸ್ಯೆ ಪರಿಹರಿಸಲು ಈಗಿನ ಶಾಸಕರು ಮುಂದಾಗಿ ಜಿಲ್ಲಾ ವೈದ್ಯರ ಜೊತೆ ಮಾತನಾಡಿದ್ದಾರೆ. ಸಧ್ಯ ಒಂದು ವಾರದಲ್ಲಿ ಜನರಿಕ್‌ ಔಷಧಿ ಮಳಿಗೆ ಆರಂಭಗೊಳ್ಳಲಿದೆ. ಇತರ ಉಪಯುಕ್ತ ಕಟ್ಟಡದಲ್ಲಿಯೂ ಹಣ್ಣಿನ ಅಂಗಡಿ ಮತ್ತು ಹಾಲಿನ ಪಾರ್ಲರ್‌ ಆರಂಭಗೊಳಿಸುವ ಕಾರ್ಯ ನಡೆಸಲಾಗುವುದು. ಈ ಕುರಿತು ಶಾಸಕರು ಶೀಘ್ರ ಈ ಎಲ್ಲ ಉಪಯುಕ್ತ ಅಂಗಡಿಗಳನ್ನು ಆರಂಭಗೊಳಿಸಲು ಮೇಲಾಧಿಕಾರಿಗಳ ಜೊತೆ ಚರ್ಚಿಸಿದ್ದಾರೆಂದು ಹೇಳಿದ್ದಾರೆ.

loading...