ಪ್ಲಾಸ್ಟಿಕ್‌ ಮಾಲಿನ್ಯದಿಂದ ಓಝೋನ್‌ ಕವಚದ ಮೇಲೂ ದುಷ್ಪರಿಣಾಮ: ಪ್ರೇಮಕುಮಾರ್‌

0
11
loading...

ಕನ್ನಡಮ್ಮ ಸುದ್ದಿ-ಕಾರವಾರ: ಪುನರ್ಬಳಕೆಗೆ ಸಾಧ್ಯವಿಲ್ಲದ ಪ್ಲಾಸ್ಟಿಕ್‌ನಿಂದ ಜಗತ್ತಿನಲ್ಲಿ ಪರಿಸರ ಮಾಲೀನ್ಯ ಉಂಟಾಗುತ್ತಿದೆಯಲ್ಲದೇ ಓಝೋನ್‌ ಕವಚದ ಮೇಲೆ ಸಹ ದುಷ್ಪರಿಣಾಮ ಬೀರಿ ಭೂಮಿಯ ಮೇಲಿನ ತಾಪಮಾನ ಏರುಗತಿಯಲ್ಲಿದೆ. ಮುಂದಿನ ಪೀಳೆಗೆಯ ರೂವಾರಿಗಳಾದ ವಿದ್ಯಾರ್ಥಿಗಳು ಶಾಲೆಯಲ್ಲಿ ಹಾಗೂ ಮನೆಯಲ್ಲಿ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದಂತೆ ಪಾಲಕರ ಮೇಲೆ ಒತ್ತಡ ಹೇರಬೇಕು ಎಂದು ಕೈಗಾದ ಪರಿಸರ ಕಾಳಜಿ ಸಮಿತಿ ಅಧ್ಯಕ್ಷ ಟಿ.ಪ್ರೇಮಕುಮಾರ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಇಲ್ಲಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕೈಗಾ ಪರಿಸರ ಕಾಳಜಿ ಸಮೀತಿ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮತ್ತು ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸೋಮವಾರ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪರಿಸರ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ಜಗತ್ತು ಅಥವಾ ಪರಿಸರ ಅಂದಾಜು ಒನ್‌ ಬಿಲಿಯನ್‌ ವರ್ಷಗಳ ಹಿಂದೆ ಸೃಷ್ಠಿಯಾಯಿತು. ಅದೇ ರೀತಿ ಸುಮಾರು 50 ಸಾವಿರ ವರ್ಷಗಳ ಹಿಂದೆ ಮನುಷ್ಯ ಜೀವಿ ಉಗಮವಾಗಿ, ಬಳಿಕ ಈಗ್ಗೆ ಸುಮಾರು 300 ವರ್ಷಗಳ ಹಿಂದೆ ಮಾನವ ಹಕ್ಕು ಎಂಬ ವಾದ ಬೆಳಕಿಗೆ ಬಂತು. ಮನುಷ್ಯನ ಉಳುವಿಗೆ ಈಗ ಹೋರಾಟ ಮಾಡಬೇಕಾದ ಸ್ಥಿತಿ ಉದ್ಭವವಾಗಿದ್ದು, ಹೀಗಾಗಿ ಪ್ಲಾಸ್ಟಿಕ್‌ ಎಂಬ ಮಹಾಮಾರಿಯನ್ನು ನಿಷೇಧಿಸಿದಾಗ ಮಾತ್ರ ಪರಿಸರ ಉಳಿಯುವುದರ ಜತೆಗೆ ಮನುಷ್ಯನಿಗೂ ಶ್ರೇಯಸ್ಸಿದೆ ಎಂದರು. ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ವಿಜಯಾ ಹೆಗಡೆ ಉಪನ್ಯಾಸ ನೀಡಿ, ಸುತ್ತಮುತ್ತಲಿನ ಪರಿಸರ ರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂಪೂರ್ಣ ಜ್ಞಾನ ಇರುವುದು ಅವಶ್ಯಕವಾಗಿದೆ. ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಜನರಲ್ಲಿ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ರಾಜ್ಯದಲ್ಲಿ ಸರಕಾರ ಪ್ಲಾಸ್ಟಿಕ್‌ ನಿಷೇಧಿಸಿ 2016 ರಲ್ಲಿಯೇ ಕಾಯ್ದೆ ಜಾರಿಗೆ ತಂದಿದೆ. ಆ ಕಾಯ್ದೆಯಲ್ಲಿನ ನಿಯಮಾವಳಿಗಳನ್ನು ಎಲ್ಲರೂ ಚಾಚುತಪ್ಪದೇ ಪಾಲಿಸಿದರೆ, ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಿಸುವ ಸರಕಾರದ ಉದ್ದೇಶ ಸಾಕಾರವಾಗಲಿದೆ. ಮಕ್ಕಳು ಮನೆಯಲ್ಲಿ ಪ್ಲಾಸ್ಟಿಕ್‌ ಬಳಸದೇ, ಕಸ, ಕಡ್ಡಿ ವಿಭಜಿಸಿ ನಗರಸಭೆ ವಾಹನಕ್ಕೆ ನೀಡಲು ಪಾಲಕರಿಗೆ ತಿಳಿಸಬೇಕು. ಶಾಲೆಯಲ್ಲಿಯೂ ಕೂಡ ಪ್ಲಾಸ್ಟಿಕ್‌ ಬಳಸದಂತೆ ಹೆಣ್ಣುಮಕ್ಕಳಿಗೆ ತಿಳಿಹೇಳಬೇಕು. ದಾರಿ ಮೇಲೆ ನಡೆಯುವಾಗ ಪ್ಲಾಸ್ಟಿಕ್‌ ವಸ್ತುಗಳು ಕಣ್ಣಿಗೆ ಬಿದ್ದಾಗ ಅವುಗಳನ್ನು ಕಸದ ತೊಟ್ಟಿಯಲ್ಲಿ ಹಾಕುವಂತಾಗಬೇಕು. ಬೀಚ್‌ನಲ್ಲಿ ಕುಡಿದು ಬೀಸಾಕಿದ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಕಸದ ತೊಟ್ಟಿಯಲ್ಲಿಯೇ ಹಾಕುವಂತೆ ಜನರನ್ನು ಪ್ರೇರೇಪಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕೈಗಾ ಎನ್‌ಪಿಸಿಎಲ್‌ನ ಸುನೀಲ್‌ ಬಾರಕೂರ್‌ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಪಂಚಮುಖಿ ರಸಪ್ರಶ್ನೆ ನಡೆಸಿಕೊಟ್ಟರು. ವಿಜ್ಞಾನ ಕೇಂದ್ರದ ಅಧಿಕಾರಿ ಸಂಜೀವ್‌ ದೇಶಪಾಂಡೆ ಇನ್ನಿತರರು ಇದ್ದರು. ಬಹುಮಾನ ವಿಜೇತರು: ಇಲ್ಲಿನ ಸೇಂಟ್‌ ಮೈಕಲ್‌ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಜಕ್ತಾ ಎಂ.ಶೇಣ್ವಿ ಮೊದಲನೇ ಸ್ಥಾನ ಪಡೆದರು. ಉಳಿದಂತೆ ಅದೇ ಶಾಲೆಯ ನಂದಿನಿ ಸಾವಂತ್‌ ಎರಡನೇ ಹಾಗೂ ಬಾಲಭವನ ಶಾಲೆಯ ರಂಜನಿ ಬೋರ್‌ಕರ್‌ ಮೂರನೇ ಸ್ಥಾನ ಪಡೆದಿದ್ದಾರೆ. ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ಒಟ್ಟು 44 ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

loading...