ಬಜೆಟ್‌ನಲ್ಲಿ ಕರಾವಳಿ ನಿರ್ಲಕ್ಷ್ಯ: ವಿ.ಪ ಸದಸ್ಯ ಪೂಜಾರಿ

0
10
loading...

ಕನ್ನಡಮ್ಮ ಸುದ್ದಿ-ಕುಮಟಾ: ಸಮ್ಮಿಶ್ರ ಸರಕಾರ ಸಮಾಧಾನದಿಂದ ಕೆಲಸ ಮಾಡುತ್ತಿಲ್ಲ. ಜನರ ಕಷ್ಟಗಳಿಗೆ ನೆರವಾಗುವ ಕಿಂಚಿತ್‌ ಮನೋಭಾವವೂ ಸರಕಾರಕ್ಕಿಲ್ಲ. ಬಜೆಟ್‌ನಲ್ಲಿಯೂ ಕರಾವಳಿಯನ್ನು ನಿಲ್ರ್ಯಕ್ಷಿಸಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಸಮ್ಮಿಶ್ರ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶನಿವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನಿದ್ದೆಯಿಂದ ತನ್ನ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ತಾನು ಧರ್ಮಸ್ಥಳದಲ್ಲಿ ಕೂತು ಪ್ರಕೃತಿ ಚಿಕಿತ್ಸೆ ಪಡೆಯುತ್ತಾ ಸರಕಾರಕ್ಕೆ ಕೊಟ್ಟ ಕಷಾಯ ಕುಮಾರಸ್ವಾಮಿ ಅವರ ಚಳಿ ಬಿಡಿಸಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂತು ಸರಕಾರವನ್ನು ಪ್ರತಿ ಹಂತದಲ್ಲೂ ಎಚ್ಚರಿಸುವ ಕೆಲಸ ಮಾಡುತ್ತೇನೆ. ರಾಜ್ಯದ ಜನತೆಗೆ ನಮ್ಮ ಪಕ್ಷದ ಮೂಲಕ ನ್ಯಾಯ ಸಿಗುವಂತೆ ಹೋರಾಟ ನಡೆಸಿ ಮತ್ತೊಮ್ಮೆ ಬಿ ಎಸ್‌ ಯಡಿಯೂರಪ್ಪ ಅವರನ್ನು ಇದೇ ರಾಜ್ಯ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ನನಗಿದೆ. ಪಕ್ಷ ನನ್ನ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುವ ಒಂದು ದೊಡ್ಡ ಜವಾಬ್ದಾರಿ ಇಂದು ನನ್ನ ಮೇಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಸುವ ಜೊತೆಗೆ ಚುನಾವಣೆಯಫಲತಾಂಶ ಘೋಷಣೆಗೂ ಮುನ್ನ ರಾಜ್ಯ ನಾಯಕರು ನನ್ನನ್ನು ಕೇಳಿದಾಗ ಜಿಲ್ಲೆಯಲ್ಲಿ ನಾವು ಗೆಲ್ಲುತ್ತೇವೆ ಎಂಬ ಭರವಸೆಯನ್ನು ನೀಡಿದ್ದೆ. ಅದರಂತೆ ಇಂದು ಕುಮಟಾದಲ್ಲಿ ದಿನಕರ ಶೆಟ್ಟಿ ಅವರು ಪ್ರಚಂಡ ಬಹುಮತಗಳಿಂದ ಗೆದ್ದು ಬಂದಿದ್ದಾರೆ. ಅವರ ಈ ಜಯ ಇಡೀ ಕರ್ನಾಟಕಕ್ಕೆ ಮಾದರಿ ಎಂದು ಹೇಳಬಹುದಾಗಿದೆ. ಅವರ ಮುಖಾಂತರ ಈ ಕ್ಷೇತ್ರದ ಅಭಿವೃದ್ದಿ ಆಗಲಿ ಎಂದು ಹಾರೈಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕೋಟ ಶ್ರೀನಿವಾಸ ಪೂಜಾರಿ ಅವರು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುವ ಜೊತೆಗೆ ಪಕ್ಷದ ಜವಾಬ್ದಾರಿಗಳನ್ನೆಲ್ಲಾ ನಿಭಾಯಿಸುತ್ತಾ ಬಂದಿರುವುದರಿಂದ ಸತತವಾಗಿ ಯಶಸ್ಸು ಕಾಣುತ್ತಾ ಇಂದು ಅವರು ವಿರೋಧ ಪಕ್ಷದ ನಾಯಕರಾಗಿ ಪಕ್ಷ ಅವರನ್ನು ಗುರುತಿಸಿದೆ. ಹಾಗಾಗಿ ನಾವೆಲ್ಲರು ನಮ್ಮ ನಾಯಕರ ಜೊತೆಗೂಡಿ ಕ್ಷೇತ್ರದ ಅಭಿವೃದ್ದಿಗಾಗಿ ಹೋರಾಡೋಣ. ಅಲ್ಲದೇ ಕ್ಷೇತ್ರದ ಅಭಿವೃದ್ದಿಗಾಗಿ ಹಗಲಿರುಳು ಎನ್ನದೇ ಪ್ರಾಮಾನಿಕವಾಗಿ ಕೆಲಸ ಮಾಡುತ್ತೇನೆ. ಮೀನುಗಾರರ ಪರವಾಗಿ ಮೊನ್ನೆ ನಡೆದ ಬಜೆಟ್‌ ಅಧಿವೇಶನದಲ್ಲಿ ಧ್ವನಿಯೆತ್ತಿದ್ದೇನೆ. ಕ್ಷೇತ್ರದ ಅಭಿವೃದ್ದಿಗಾಗಿ ಹೋರಾಟ ನಡೆಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ವಿಧಾನ ಪರಿಷತ್‌ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕುಮಟಾ ಬಿಜೆಪಿ ಮಂಡಲದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾ ವೆಂಕಟೇಶ ನಾಯಕ, ಎನ್‌ ಎಸ್‌ ಹೆಗಡೆ, ಜಿ ಪಂ ಸದಸ್ಯ ಗಜು ಪೈ, ಮಾಜಿ ಜಿಲ್ಲಾಧ್ಯಕ್ಷ ಎಂ ಜಿ ನಾಯ್ಕ, ಪುರಸಭಾ ಸದಸ್ಯರಾದ ಸಂತೋಷ್‌ ನಾಯ್ಕ, ಪ್ರಶಾಂತ್‌ ನಾಯ್ಕ, ಪ್ರಮುಖರಾದ ವಿನೋದ ಪ್ರಭು, ಅಶೋಕ್‌ ಪ್ರಭು, ಡಾ ಜಿ ಜಿ ಹೆಗಡೆ, ಎಂ ಜಿ ಭಟ್ಟ್‌, ಹೇಮಂತ್‌ ಗಾಂವ್ಕರ್‌, ನಾಗವೇಣಿ ಹೆಗಡೆ, ಸುಧೀರ್‌ ಪಂಡಿತ್‌, ಸುದರ್ಶನ್‌ ಹೆಗಡೆ, ಗೌರಮ್ಮ ಜೋಗಿ, ಸುಧಾ ಗೌಡ, ಅಶೋಕ ಆಚಾರ್ಯ ಹಾಗೂ ಇತರರು ಉಪಸ್ಥಿತರಿದ್ದರು.

loading...